Select Page

ಬೀದಿ ಮೇಲಿನ ಮರದ ಹಕ್ಕು ಪಡೆಯಲು ಮರ ಪಟ್ಟ ಯೋಜನೆ

ಬೀದಿ ಮೇಲಿನ ಮರದ ಹಕ್ಕು ಪಡೆಯಲು ಮರ ಪಟ್ಟ ಯೋಜನೆ

ಇತ್ತೀಚೆಗೆ ಕಟ್ಟಿಗೆಗೆ ಲಕ್ಷಾಂತರ ರೂ. ಬೇಡಿಕೆ ಇದೆ. ಒಂದು ಮರ ಇದ್ದರೆ ಆಸ್ತಿ ಇದ್ದಂತೆ. ಹಣ್ಣಿನ ಮರವಿದ್ದರಂತೂ ಅದರ ಫಲವೂ ವರ್ಷಕ್ಕೆ ಆದಾಯ ಕೊಡುತ್ತದೆ. ಬೀದಿಯಲ್ಲಿ ಇಂಥ ಅದೆಷ್ಟೋ ಮರಗಳು ಇರುತ್ತವೆ. ಆದರೆ, ಅದರ ಸ್ವತ್ತು, ಕಟ್ಟಿಗೆ ಅರಣ್ಯ ಇಲಾಖೆ ಪಾಲಾಗುತ್ತಿದೆ.

ಅಂಥ ಬೀದಿ ಮೇಲಿನ ಮರಗಳ ಮೇಲಿನ ಹಕ್ಕನ್ನು ಜನರೂ ಪಡೆಯಬಹುದು. ಅಷ್ಟೇ ಅಲ್ಲ, ಆ ಮರದ ಎಲ್ಲ ಸಂಪತ್ತನ್ನು ನಾವೇ ಬಳಸಬಹುದು. ಮರ ಕತ್ತರಿಸಿದಾಗಲೂ ಅದರ ಕಟ್ಟಿಗೆಯಲ್ಲಿ ಸಮ ಪಾಲು ಪಡೆಯುವ ಅಧಿಕಾರ ಜನರಿಗಿದೆ. ಅದು ಹೇಗೆ ಎಂದು ತಿಳಿಯಲು ಈ ವರದಿ ಪೂರ್ತಿ ಓದಿ.

ಅರಣ್ಯ ಇಲಾಖೆಯಲ್ಲಿ “ಮರ ಪಟ್ಟ’ ಎನ್ನುವ ಯೋಜನೆಯೊಂದು ಜಾರಿಯಲ್ಲಿದೆ. ಪ್ರಚಾರ ಇಲ್ಲದೆ ಜನರಲ್ಲಿ ಈ ಯೋಜನೆಯ ತಿಳಿವಳಿಕೆ ಕಡಿಮೆಯಾಗಿದೆ. ಈ ಯೋಜನೆ ಮೂಲಕ ಜನರು ತಮ್ಮ ಮನೆ ಸಮೀಪದ ಸರ್ಕಾರಿ ಜಮೀನು, ರಸ್ತೆ ಬದಿಯಲ್ಲಿರುವ ಮರಗಳ ಹಕ್ಕು ಪಡೆಯಬಹುದು.

ಏನಿದು ಯೋಜನೆ?

ಸರ್ಕಾರಿ ಜಮೀನು, ರಸ್ತೆ ಪಕ್ಕದಲ್ಲಿ ತನ್ನಷ್ಟಕ್ಕೇ ಬೆಳೆದಿರುವ ಅಥವಾ ಅರಣ್ಯ ಇಲಾಖೆ ಬೆಳೆಸಿರುವ ಮರಗಳನ್ನು ಸಾಕುವ ಜವಾಬ್ದಾರಿ ವಹಿಸಿಕೊಂಡರೆ ಆ ಮರದ ಉತ್ಪನ್ನವನ್ನು ಅನುಭವಿಸಬಹುದು. ಅದಕ್ಕಾಗಿ “ಮರ ಪಟ್ಟ’ ಪ್ರಮಾಣ ಪತ್ರ ಪಡೆಯಬೇಕು. ಈ ರೀತಿಯ ಮರಕ್ಕೆ ಅರಣ್ಯ ಇಲಾಖೆ ಗುರುತು ಮಾಡಿರುತ್ತದೆ.

ಅದೇ ಮರವನ್ನು ಕತ್ತರಿಸುವ ಸಂದರ್ಭ ಬಂದಾಗ ಅರಣ್ಯ ಇಲಾಖೆ ಮತ್ತು ಮರ ಪಟ್ಟ ಪ್ರಮಾಣ ಪತ್ರ ಹೊಂದಿರುವ ವ್ಯಕ್ತಿಗೆ ಸಮಪಾಲು ಇರುತ್ತದೆ. ಅದಕ್ಕೆ ಹೆಚ್ಚುವರಿ ಹಣ ಕೊಡುವ ಅಗತ್ಯವೂ ಇಲ್ಲ. ಸ್ವಲ್ಪ ಬುದ್ಧಿವಂತಿಕೆ ಬಳಸಿದರೆ ಯಾವುದೇ ಲಂಚ, ಪ್ರಭಾವಿಗಳ ರಗಳೆ ಇಲ್ಲದೆ ಲಕ್ಷಾಂತರ ಬೆಲೆ ಬಾಳುವ ಸ್ವತ್ತು ಪಡೆಯಬಹುದು.

ಏನು ಮಾಡಬೇಕು?

ನಿಮ್ಮ ಮನೆ ಎದುರಿನ ರಸ್ತೆ ಪಕ್ಕ ಅಥವಾ ಸಮೀಪದ ಸರ್ಕಾರಿ ಜಮೀನಿನಲ್ಲಿ ಮರಗಳು ಬೆಳೆದಿದ್ದರೆ ಅದನ್ನು ಸಾಕುವ ಹೊಣೆ ತೆಗೆದುಕೊಳ್ಳಬೇಕು. ಅಂದರೆ 10 ರೂ. ಬೆಲೆಯ ಬಾಂಡ್ ಅನ್ನು ವಲಯ ಅರಣ್ಯಾಧಿಕಾರಿ ಕಚೇರಿಗೆ ಕೊಡಬೇಕು. ಅರಣ್ಯ ಇಲಾಖೆ ಆ ವ್ಯಕ್ತಿಗೆ ಮರ ಪಟ್ಟ ಪ್ರಮಾಣ ಪತ್ರ ಕೊಡುತ್ತದೆ.

ಅದೊಂದು ಇನ್ಶೂರೆನ್ಸ್ ಬಾಂಡ್ ರೀತಿ ಕಾಪಾಡಿಕೊಳ್ಳಬೇಕು. ಅದೇ ಮರವನ್ನು ಕತ್ತರಿಸುವಾಗ ಆ ಬಾಂಡ್ ತೋರಿಸಿ ಮರದಲ್ಲಿ ಸಮ ಪಾಲು ಪಡೆಯಬಹುದು. ಅಲ್ಲದೆ, ಆ ಮರ ಪ್ರತಿ ವರ್ಷ ಬೆಳೆಯುವ ಹಣ್ಣುಗಳ ಸಂಪೂರ್ಣ ಹಕ್ಕು ಮರ ಪಟ್ಟ ಹೊಂದಿದ ವ್ಯಕ್ತಿಗೆ ಇರುತ್ತದೆ.

Leave a reply

Your email address will not be published. Required fields are marked *