ಸ್ನಾಯುಗಳ ಬಲ ಹೆಚ್ಚಿಸಲು ಪಾದಂಗುಷ್ಠಾಸನ

ಸ್ನಾಯುಗಳ ಬಲ ಹೆಚ್ಚಿಸಲು ಪಾದಂಗುಷ್ಠಾಸನ

ಪಾದಂಗುಷ್ಠಾಸನ ಯೋಗದ ಒಂದು ಪ್ರಮುಖ ಆಸನವಾಗಿದೆ. ಇದನ್ನು ಇಂಗ್ಲೀಷ್ ನಲ್ಲಿ ಬಿಗ್ ಟೋ ಪೋಸ್ ( big toe pose ) ಎಂತಲೂ ಕರೆಯುತ್ತಾರೆ. ಈ ಆಸನದಲ್ಲಿ ಕಾಲಿನ ಬೆರಳನ್ನು ಹಿಡಿದುಕೊಂಡು ನಮ್ಮ ಸಂಪೂರ್ಣ ದೇಹವನ್ನು ವಿಸ್ತರಿಸಲಾಗುತ್ತದೆ.

ಪ್ರಯೋಜನಗಳು:

1) ಕರಳುಗಳು ಮತ್ತು ಹ್ಯಾಮ್ ಸ್ಟ್ರಿಂಗ್ ಸ್ನಾಯುಗಳನ್ನು ಬಲಪಡಿಸುತ್ತದೆ.

2) ಮಲಬದ್ಧತೆ ತಡೆಯಲು ಸಹಾಯ ಮಾಡುತ್ತದೆ.

3) ಹೃದಯ ರಕ್ತನಾಳದ ವ್ಯವಸ್ಥೆಯನ್ನು ಸುಧಾರಿಸುತ್ತದೆ.

4) ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.

5) ಏಕಾಗ್ರತೆ ವೃದ್ಧಿಸುತ್ತದೆ.

6) ಮುಟ್ಟಿನ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ.

ಮಾಡುವ ವಿಧಾನ:

1) ಮೊದಲು ಸ್ಥಿತಿ ತಾಡಸನದಲ್ಲಿ ನಿಂತುಕೊಳ್ಳಿ. ನಿಮ್ಮ ಪಾದ ಒಂದಕ್ಕೊಂದು ಜೋಡಿಸಿ ಹಸ್ತ ತೊಡೆಯ ಪಕ್ಕ ತಂದು ನೇರವಾಗಿ ನಿಂತುಕೊಳ್ಳಿ.

2) ಉಸಿರನ್ನು ತೆಗೆದುಕೊಳ್ಳುತ್ತಾ ( ಪೂರಕ) ಎರಡು ಕೈಗಳನ್ನು ತಲೆಯ ನೇರ ಮೇಲಕ್ಕೆತ್ತಿ. ಇಲ್ಲಿ ನಿಮ್ಮ ದೇಹ ಸಾಧ್ಯವಾದಷ್ಟು ಮೇಲಕ್ಕೆ ವಿಸ್ತರಿಸಲು ಪ್ರಯತ್ನಿಸಿ.

3) ಈಗ ಉಸಿರನ್ನು ಹೊರ ಹಾಕುತ್ತಾ (ರೇಚಕ) ಸೊಂಟದ ಭಾಗದಿಂದ ಮುಂದಕ್ಕೆ ಬಾಗಿ ನಿಮ್ಮ ಹಸ್ತಗಳಿಂದ ಕಾಲಿನ ಹೆಬ್ಬೆರಳನ್ನು ಹಿಡಿದುಕೊಂಡು ಹಣೆ ಅಥವಾ ಗದ್ದವನ್ನು ಮಂಡಿಗೆ ತಾಗಿಸಲೂ ಪ್ರಯತ್ನಿಸಿ. ಇದೇ ಸ್ಥಿತಿಯಲ್ಲಿ 5 ಬಾರಿ ಆಳವಾಗಿ ಉಸಿರಾಟ ಮಾಡಿ.

4) ನಂತರ ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ಮೇಲಕ್ಕೆ ಬನ್ನಿ. ಹಾಗೆಯೇ ಉಸಿರನ್ನು ಹೊರ ಹಾಕುತ್ತಾ ( ರೇಚಕ) ಕೈಗಳನ್ನು ಕೆಳಗಿಳಿಸಿ ಶಿಥಿಲ ತಾಡಸನದಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ.

ಎಚ್ಚರಿಕೆ:

ಯಾವುದೇ ಆಸನ ಮಾಡುವ ಮೊದಲು ನಿಮ್ಮ ಆರೋಗ್ಯವನ್ನು ನೀವು ತಿಳಿದುಕೊಳ್ಳಬೇಕು. ಆಸನ ಮಾಡುವಾಗ ನೋವಿನ ಅನುಭವ ಆದರೆ ಅದನ್ನು ತಕ್ಷಣ ನಿಲ್ಲಿಸಬೇಕು.

Leave a reply

Your email address will not be published. Required fields are marked *