ಕರ್ನಾಟಕ ವಾರ್ತೆ: Cow mat Application
ಪಶು ಪಾಲನಾ ಇಲಾಖಾ ವತಿಯಿಂದ 2021-22 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಹಾಗೂ 2022-23ನೇ ಸಾಲಿನಲ್ಲಿ ಅನುಸೂಚಿತ ಜಾತಿಗಳ ಉಪಯೋಜನೆಯಡಿ ಕೌ ಮ್ಯಾಟ್ (ರಬ್ಬರ್ ನೆಲಹಾಸು) ವಿತರಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

2021-22 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನೆಲಹಾಸುಗಳನ್ನು (Cow mat) ವಿತರಿಸಲು ಯೋಜನೆಯಡಿಯಲ್ಲಿ ಆಯ್ಕೆಯಾಗುವ ಪ್ರತಿ ಫಲಾನುಭವಿಗಳಿಗೆ ಎರಡು ನೆಲಹಾಸುಗಳನ್ನು ವಿತರಣೆ ಮಾಡಲಾಗುವುದು. ಈ ಕಾರ್ಯಕ್ರಮದಡಿ ಘಟಕದ ವೆಚ್ಚ (ಎರಡು ಕೌಮ್ಯಾಟ್‍ಗಳಿಗೆ) ರೂ. 6190 ಇದ್ದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ (ಶೇ50) ರೂ. 3,095 ಗಳ ಸಹಾಯಧನ ಮತ್ತು (ಶೇ50) ರೂ. 3095 ಗಳ ಫಲಾನುಭವಿಗಳ ವಂತಿಗೆಯೊಂದಿಗೆ ಯೋಜನೆ ಅನುಷ್ಟಾನಗೊಳಿಸಲಾಗುತ್ತಿದೆ.

2022-23ನೇ ಸಾಲಿನಲ್ಲಿ ಅನುಸೂಚಿತ ಜಾತಿಗಳ ಉಪಯೋಜನೆ ಕಾಯ್ದೆ 2013ರಡಿ ಬಳಕೆಯಾಗದೇ ಇರುವ ಮೊತ್ತದಡಿಯಲ್ಲಿ ಪ.ಜಾ ಮತ್ತು ಪ.ಪಂ ಪ್ರತಿ ಫಲಾನುಭವಿಗಳಿಗೆ ಎರಡು ನೆಲಹಾಸುಗಳನ್ನು (ಶೇ.90) ರೂ.5,571 ರಷ್ಟು ಸಹಾಯಧನ ಹಾಗೂ (ಶೇ.10) ರೂ.619 ಗಳ ಫಲಾನುಭವಿ ವಂತಿಕೆಯೊಂದಿಗೆ ಯೋಜನೆ ಅನುಷ್ಠಾನಗೊಳಿಸಲಾಗುವುದು. ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ವರ್ಗವಾರು ಗುರಿಗಳನ್ನು ನಿಗದಿಪಡಿಸಲಾಗಿದೆ.

ಅರ್ಜಿದಾರರು ಪ್ರೂಟ್ಸ್ ಐಡಿ (ಗುರುತಿನ ಸಂಖ್ಯೆ Fruit id) ಹೊಂದಿರಬೇಕು, ಕಡ್ಡಾಯವಾಗಿ ಕನಿಷ್ಟ ಎರಡು ಜಾನುವಾರುಗಳನ್ನು (ಎಮ್ಮೆ ಅಥವಾ ಹಸು) ಹೊಂದಿರಬೇಕು. ಎರಡು ಜಾನುವಾರುಗಳನ್ನು ಹೊಂದಿರುವ ಬಗ್ಗೆ ಸಂಬಂದಿಸಿದ ಪಶುವೈದ್ಯಾಧಿಕಾರಿಗಳಿಂದ ದೃಢೀಕೃತ ಪ್ರಮಾಣ ಪತ್ರ ಸಲ್ಲಿಸಬೇಕು.

ಪರಿಶಿಷ್ಟ ಜಾತಿ (SC) ಹಾಗು ಪರಿಶಿಷ್ಟ ಪಂಗಡದ (ST) ಫಲಾನುಭವಿಗಳು ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು (ಪ್ರಮಾಣ ಪತ್ರದಲ್ಲಿ ಅರ್.ಡಿ.ಸಂಖೈ ಇರಬೇಕು) ಅಂಗವಿಕಲರಾಗಿದ್ದಲ್ಲಿ ಪ್ರಮಾಣ ಪತ್ರ ಹೊಂದಿರಬೇಕು ಸರ್ಕಾರದ ನಿಯಮಗಳಂತೆ ಮಹಿಳೆಯರಿಗೆ ಶೇ 33.3 ಅಲ್ಪಸಂಖ್ಯಾತರಿಗೆ ಶೇ 15 ಮತ್ತು ವಿಶೇಷ ಚೇತನರಿಗೆ ಶೇ 03 ಆದ್ಯತೆ ನೀಡಲಾಗುವುದು. ಆಸಕ್ತರು ಜೂನ್ 30 ರೊಳಗಾಗಿ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ರೈತರು ತಾಲೂಕಿನ ಮುಖ್ಯ ಪಶು ವೈದ್ಯಾಧಿಕಾರಿಗಳು (ಆಡಳಿತ) ಅಥವಾ ಹತ್ತಿರದ ಪಶುವೈದ್ಯ ಸಂಸ್ಥೆಗಳಿಗೆ ಸಂಪರ್ಕಿಸಲು ಮತ್ತು ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕರು(ಆಡಳಿತ) ಅವರು ತಿಳಿಸಿದ್ದಾರೆ.