ಯಾವುದೇ ಔಷಧ ಹಾಕಿದರೂ ಕೀಟ ಸಾಯುತ್ತಿಲ್ಲ, ಬೆಳೆಗಳನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ ಎಂದು ಸಾವಿರಾರು ರೂಪಾಯಿ ಖರ್ಚು ಮಾಡಿ ಕೀಟ ನಾಶಕಗಳನ್ನು ಬಳಸುತ್ತಿದ್ದೇವೆ.

ಆದರೆ, ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ರೈತರು ಜೈವಿಕ ಕೀಟ ಹತೋಟಿ ವಿಧಾನಗಳ ಮೂಲಕ ಕೀಟಗಳನ್ನು ನಿಯಂತ್ರಿಸುತ್ತಿದ್ದರು. ಅದರಲ್ಲಿ ದುಬಾರಿ ಖರ್ಚು ಇಲ್ಲ. ರಾಸಾಯನಿಕದ ಭಯವೂ ಇರಲಿಲ್ಲ. ಆ ಪದ್ಧತಿಯನ್ನು ಕೆಲ ಬೆಳೆಗಳಿಗೆ ಈಗಲೂ ಪ್ರಯೋಗಿಸಬಹುದು. ಆ ವಿಧಾನಗಳು ಇಲ್ಲಿವೆ.

ಇದನ್ನೂ ಓದಿ: ಟಗರು ಸಾಕಿ ತಿಂಗಳಿಗೆ ಲಕ್ಷ ರೂ. ಆದಾಯ ಗಳಿಸುವ ರೈತ.

ಸೂತ್ರ 1
ಕಾಳು ಚೆಲ್ಲಿ ಪಕ್ಷಿಗಳನ್ನು ಆಕರ್ಷಿಸುವುದು
ಗುಬ್ಬಿ, ಬೆಳ್ಳಕ್ಕಿಯಂತಹ ಪಕ್ಷಿಗಳು ಕೀಟಗಳನ್ನು ತಿನ್ನುತ್ತವೆ. ಈ ಪಕ್ಷಿಗಳನ್ನು ಕೀಟಗಳತ್ತ ಆಕರ್ಷಿಸಲು ಬೆಳೆಗಳಿಗೆ ಕೀಟನಾಶಕ ಬಳಸಬಾರದು. ಬದಲಾಗಿ ಚುರುಮರಿ, ಅಕ್ಕಿನುಚ್ಚು, ಇಲ್ಲವೆ ಸಾವೆ ಕಾಳುಗಳನ್ನು ಹೊಲದಲ್ಲಿ ಅಲ್ಲಲ್ಲಿ ಚೆಲ್ಲಬೇಕು. ಇದರಿಂದ ಪಕ್ಷಿಗಳು ಹೊಲದತ್ತ ಕಾಳು ತಿನ್ನಲು ಬರುತ್ತವೆ. ಆಗ ಬೆಳೆಗಳಲ್ಲಿದ್ದ ಕಾಯಿಗಳನ್ನು ತಿನ್ನುತ್ತಿರುವ ಕೀಟಗಳ ವಾಸನೆ ಪಕ್ಷಿಗಳಿಗೆ ಬಡಿಯುತ್ತದೆ. ಆಗ ಕೀಟಗಳನ್ನು ತಿನ್ನುತ್ತವೆ. ಪಕ್ಷಿಗಳು ತಿನ್ನದ ಬೆಳೆ ನೋಡಿ ಈ ಪ್ರಯೋಗ ಮಾಡಬೇಕು.

ಸೂತ್ರ 2
ಬೇಲಿ ಬೆಳೆ ಮತ್ತು ಸಂಗಾತಿ ಬೆಳೆ
ಹತ್ತಿ ಬೆಳೆಯ ಸುತ್ತಲೂ ಗುರೆಳ್ಳು ಬೆಳೆಯಬೇಕು. ಗುರೆಳ್ಳ ಹೂವಿನ ಅರಿಷಿಣ ಬಣ್ಣಕ್ಕೆ ಕೀಟಗಳು ಆಕರ್ಷಿತವಾಗುತ್ತವೆ. ಅದೇ ರೀತಿ ಅಲಸಂದೆಯನ್ನು ಹತ್ತಿ ಬೆಳೆಯ ಸುತ್ತಲೂ ಬೆಳೆದರೆ, ಅಲಸಂದೆ ಬೆಳೆಗೆ ಕೀಟಬಾಧೆ ಆಗುತ್ತದೆ. ಹತ್ತಿ ಬೆಳೆಗೆ ಕೀಟ ಕಾಟದಿಂದ ರಕ್ಷಣೆ ಸಿಗುತ್ತದೆ. ಹತ್ತಿ ಬೆಳೆಯ ಸಾಲಿನಲ್ಲಿ ಅಲ್ಲಲ್ಲಿ ಬೆಂಡೆ ಬೆಳೆದರೆ ಬೆಂಡೆಕಾಯಿಗೆ ಕೀಟಗಳು ಆಕರ್ಷಿತವಾಗಿ ಬೆಂಡೆಕಾಯಿ ತಿನ್ನುತ್ತವೆ. ಇದರಿಂದ ಕಾಯಿಕೊರಕ ಕೀಟಗಳ ಕಾಟ ನಿಯಂತ್ರಣ ಸಾಧ್ಯ.

ಇದನ್ನೂ ಓದಿ: ಎರಡು ಗುಂಟೆಯಲ್ಲಿ ಲಕ್ಷ ರೂ. ಆದಾಯ ಕೊಡುವ ಹೂ.

ಸೂತ್ರ 3
ಹೊಲದಲ್ಲಿ ಕೋಳಿಗಳನ್ನು
ಬಿಡುವುದು
ಕಡಲೆ ಬೆಳೆಯಲ್ಲಿರುವ ಸಣ್ಣ ಅಥವಾ ದೊಡ್ಡ ಕೀಟಗಳನ್ನು ತಿನ್ನಲು ಕೋಳಿಗಳನ್ನು ಬಿಡಬೇಕು. ಕಡಲೆ ಬೆಳೆಯು ಕೋಳಿಗಳ ಬಾಯಿಗೆ ನಿಲುಕುವಷ್ಟೇ ಎತ್ತರ ಬೆಳೆದಿರುತ್ತದೆ. ಹಾಗಾಗಿ ಕೋಳಿಗಳು ಸಾಲು ಹಿಡಿದು ಕೀಟಗಳನ್ನು ತಿನ್ನುತ್ತವೆ. ನೆಲ ಕೆದರದಂತೆ ಎಚ್ಚರ ವಹಿಸಿ.

ಸೂತ್ರ 4
ಜೈವಿಕ ಕೀಟನಾಶಕ ಬಳಕೆ
ಹೊಲದ ಬದುವುಗಳಲ್ಲಿ ಬೆಳೆದ ಸೀತಾಫಲ, ಹುಲುಗಲ, ಎಕ್ಕೆಯಂತಹ ಬೆಳೆಗಳಿಂದ ಸಸ್ಯಜನ್ಯ ಕೀಟನಾಶಕ ತಯಾರಿಸಿ ಸಿಂಪಡಿಸಬೇಕು. ಬೇವಿನ ಬೀಜದ ಕಷಾಯ ಸಿಂಪಡಿಸಬೇಕು. ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಕಷಾಯ ತಯಾರಿಸಿ ಸಿಂಪಡಿಸಬೇಕು. ದನಗಳ ಮೂತ್ರ, ಸಗಣಿ ಮತ್ತು ಮಜ್ಜಿಗೆಯನ್ನು ಕೀಟನಾಶಕವಾಗಿ ಬಳಸಬೇಕು. ಇವುಗಳನ್ನು ರಾಸಾಯನಿಕ ಕೀಟನಾಶಕಗಳಿಗೆ ಪರ್ಯಾಯವಾಗಿ ಬಳಸಬಹುದು.

ಕೃಷಿಕನಾದ ಎಂ.ಎಸ್. ಧೋನಿ: ವಿಡಿಯೊ ಸಹಿತ ನೋಡಿ

ಸೂತ್ರ 5
ಮಿಶ್ರ ಬೆಳೆ
ಎರಡು ಸಾಲು ಶೇಂಗಾ ಒಂದು ಸಾಲು ಹತ್ತಿ. ನಾಲ್ಕು ಸಾಲು ಜೋಳ ಒಂದು ಸಾಲು ತೊಗರಿ, ಹೀಗೆ ಅಕ್ಕಡಿ ಬೆಳೆ ಮಾಡಬೇಕು. ಹೀಗೆ ಮಾಡುವುದರಿಂದ ಬೆಳೆಗಳ ಆಯಾ ಹಂತಗಳಲ್ಲಿ ಒಂದೊಂದು ಬೆಳೆಗೆ ಅಲ್ಪ- ಸ್ವಲ್ಪ ಮಾತ್ರ ಕೀಟ ಬಾಧೆ ಆಗುವುದು. ಕೀಟಗಳ ವಂಶಾಭಿವೃದ್ಧಿಗೆ ತಡೆ ಆಗುವುದು. ಇದರಿಂದ ಮುಖ್ಯ ಬೆಳೆಯು ಕೀಟ ಮುಕ್ತವಾಗುವುದು.

ಸೂತ್ರ 6
ಮಾಗಿ
ಉಳುಮೆ
ಹಿಂಗಾರು ಬೆಳೆ ಕಟಾವಾದ ಕೂಡಲೇ ಗಳೇ (ಉಳುಮೆ) ಹೊಡೆಯಬೇಕು. ಬಹಳ ದಿನಗಳ ತನಕ ಹೊಲವನ್ನು ಗಳೇ ಹೊಡೆಯದೆ ಇಡಬಾರದು. ಹೊಲದಲ್ಲಿರುವ ಹಿಂದಿನ ಬೆಳೆಯ ಗಿಡ, ಸಸಿಗಳನ್ನು ಕಿತ್ತು, ರಂಟೆ ಅಥವಾ ನೇಗಿಲು ಹೊಡೆಯಬೇಕು. ಹಾಗೆ ಮಾಡುವುದರಿಂದ ಹಿಂದಿನ ಬೆಳೆಯಲ್ಲಿದ್ದ ಕೀಟಗಳ ಕೋಶಗಳು, ತತ್ತಿಗಳು ವಂಶಾಭಿವೃದ್ಧಿಯಾಗಲು ಸಾಧ್ಯವಾಗದು. ಅಲ್ಲದೆ, ಉಳುಮೆಯಿಂದ ಭೂಮಿಯ ಕೆಳಮಣ್ಣು ತೆರೆದು ಬೀಳುವುದರಿಂದ ಬಿಸಿಲಿಗೆ ಮಣ್ಣಿನಲ್ಲಿರುವ ಕೀಟಗಳು ಹಾಗೂ ಕೋಶಾವಸ್ಥೆಯಲ್ಲಿರುವ ಕೀಟಗಳು ನಾಶವಾಗುತ್ತವೆ

ಸೂತ್ರ 7
ಹಂಗಾಮಿಗನುಸರಿಸಿ
ಬೆಳೆ: ಹಂಗಾಮಿಗನುಸರಿಸಿ ಬೆಳೆ ಮಾಡುವುದರಿಂದ ಕೀಟಗಳ ನಿಯಂತ್ರಣ ಸಾಧ್ಯವಿದೆ. ಉದಾಹರಣೆಗೆ; ಹಿಂಗಾರು ಹಂಗಾಮಿನಲ್ಲಿ ಚಳಿಗಾಲವಿದ್ದು, ನೀಲಾಕಾಶವಿರುತ್ತದೆ. ಮೋಡ ಕವಿದ ವಾತಾವರಣ ಇಲ್ಲದೆ ಕೀಟಗಳ ಕಾಟ ಕಡಿಮೆಯಾಗುತ್ತದೆ. ಹತ್ತಿ, ಬದನೆ, ತೊಗರಿ ಮತ್ತು ಕಡಲೆಯಂಥ ಬೆಳೆಗಳು ಮುಂಗಾರಿಗಿಂತ ಹಿಂಗಾರಿಯಲ್ಲಿ ಕೀಟದ ಕಾಟದಿಂದ ಮುಕ್ತವಾಗಿ ಬೆಳೆಯುತ್ತವೆ. ಇದೇ ಬೆಳೆಗಳನ್ನು ಮುಂಗಾರಿಯಲ್ಲಿ ಬೆಳೆದರೆ, ಮೋಡ ಕವಿದ ವಾತಾವರಣ ಮತ್ತು ಮಳೆಯಲ್ಲಿ ಕೀಟಗಳ ವೃದ್ಧಿಯಾಗುತ್ತವೆ.

ಸೂತ್ರ 8
ಪರ್ಯಾಯ
ಬೆಳೆ
ಹಿಂದಿನ ರೈತರು ‘ಕಾಲಗೈ’ ಪದ್ಧತಿ ಅನುಸರಿಸುತ್ತಿದ್ದರು. ಒಂದು ಬೆಳೆಯನ್ನು ಪದೇ- ಪದೇ ಅದೇ ಹೊಲದಲ್ಲಿ ಬೆಳೆಯಬಾರದು. ನಾಲ್ಕು ವರ್ಷಕ್ಕೊಮ್ಮೆ ಪರ್ಯಾಯ ಬೆಳೆ ಮಾಡಬೇಕು. ಈ ವರ್ಷ ಹತ್ತಿ ಬಿತ್ತಿದ ಹೊಲಕ್ಕೆ, ಬರುವ ಎರಡು ಮೂರು ವರ್ಷ ಶೇಂಗಾ, ಹೆಸರು, ಜೋಳದಂತಹ ಬೆಳೆ ಮಾಡಬೇಕು. ಹೀಗೆ ಮಾಡುವುದರಿಂದ ಕಾಯಿಕೊರಕದಂತಹ ಕೀಟದ ಸಂತತಿಯ (ವಂಶಚಕ್ರದ) ಪ್ರಕ್ರಿಯೆ ನಿಂತು, ಕೀಟಗಳ ಹತೋಟಿ ಸಾಧ್ಯಾವಾಗುತ್ತದೆ.