ಭುಜ, ಬೆನ್ನು ನೋವು ನಿವಾರಣೆಗೆ ಮತ್ಸ್ಯಾಸನ

ಭುಜ, ಬೆನ್ನು ನೋವು ನಿವಾರಣೆಗೆ ಮತ್ಸ್ಯಾಸನ

ಮತ್ಸ್ಯಾಸನ ಥೈರಾಯಿಡ್ ಸಮಸ್ಯೆ ನಿವಾರಣೆಗೆ ಉತ್ತಮವಾಗಿದೆ. ಕುತ್ತಿಗೆ, ಭುಜ, ಪಕ್ಕೆಲಬುಗಳ ನಡುವೆ ಇರುವ ಸ್ನಾಯುಗಳು ಬಲಗೊಳ್ಳುತ್ತವೆ. ಅದಲ್ಲದೆ ಮಾನಸಿಕ ಒತ್ತಡ, ಖಿನ್ನತೆ ಮತ್ತು ಉದ್ವೇಗದಿಂದ ಹೊರಬರಲು ನೆರವಾಗುತ್ತದೆ.

ಕುಳಿತುಕೊಂಡೆ ಕೆಲಸಮಾಡುವುದರಿಂದ ಕುತ್ತಿಗೆ , ಭುಜ, ಬೆನ್ನು, ಕೇಳಬೆನ್ನು, ಮೊದಲಾದ ಕಡೆಗಳಲ್ಲಿ ಸ್ನಾಯುಗಳು ಜಡ್ಡು ಹಿಡಿದು ನೋವು ಕಾಣಿಸಿಕೊಳ್ಳುತ್ತದೆ. ಅಂಥವರು ಮತ್ಸ್ಯಾಸನ ಅಭ್ಯಾಸ ಮಾಡುವುದರಿಂದ ಪರಿಹಾರ ಕಂಡುಕೊಳ್ಳಬಹುದು.

ಮಾಡುವ ವಿಧಾನ:

ಪದ್ಮಾಸನ ಸ್ಥಿತಿಯಲ್ಲಿ ಕುಳಿತುಕೊಳ್ಳಿ. ಈಗ ನಿಮ್ಮ ಮೊಣಕೈಯನ್ನು ನೆಲದಮೇಲೆ ಇಡುತ್ತಾ ಬೆನ್ನಿನ ಮೇಲೆ ಮಲಗಿಕೊಳ್ಳುವ ಸ್ಥಿತಿಗೆ ಬನ್ನಿ. ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ಬೆನ್ನು ಮತ್ತು ಎದೆಯ ಬಾಗವನ್ನು ಮೇಲಕ್ಕೆ ಎತ್ತಿ ತಲೆಯ ಮೇಲ್ಭಾಗ ಅಂದರೆ ನೆತ್ತಿಯ ಭಾಗ ನೆಲಕ್ಕೆ ತಾಗಿಸಬೇಕು.

ಎರಡು ಕೈಗಳಿಂದ ಕಾಲಿನ ಹೆಬ್ಬೆರಳನ್ನು ಹಿಡಿದುಕೊಳ್ಳಿ. ಬಲಗೈಯಿಂದ ಎಡಗಾಲಿನ ಹೆಬ್ಬೆರಳನ್ನು ಮತ್ತು ಎಡಗೈಯಿಂದ ಬಲಗಾಲಿನ ಹೆಬ್ಬೆರಳನ್ನು ಹಿಡಿದುಕೊಳ್ಳಿ. ಎರಡು ಮೊಣಕೈ ಪಕ್ಕೆಲುಬಿನ ಪಕ್ಕ ನೆಲದಮೇಲೆ ಇಡುತ್ತಾ ಇದೇ ಸ್ಥಿತಿಯಲ್ಲಿ 20 ರಿಂದ 30 ಸೆಕೆಂಡುಗಳ ಕಾಲ ಹಾಗೆಯೇ ಇರಿ.

ನಂತರ ಕೈಬೆರಳನ್ನು ಬಿಡಿಸಿ ಉಸಿರನ್ನು ಹೊರ ಹಾಕುತ್ತಾ (ರೇಚಕ) ಎರಡು ಮೊಣಕೈ ಸಹಾಯದಿಂದ ಮೇಲಕ್ಕೆ ಬಂದು ಪದ್ಮಾಸನ ಬಿಡಿಸಿ ಕಾಲುಗಳನ್ನು ಮುಂದಕ್ಕೆ ಚಾಚಿ ವಿಶ್ರಾಂತಿಯನ್ನು ತೆಗೆದುಕೊಳ್ಳಿ.

ಉಪಯೋಗಗಳು:

1) ಆಸ್ತಮಾ, ಹೃದಯ ಸಮಸ್ಯೆ, ಸಕ್ಕರೆ ಕಾಯಿಲೆ, ಥೈರಾಯಿಡ್ ಸಮಸ್ಯೆಯಿಂದ ಬಳಲುವವರಿಗೆ ಉತ್ತಮ ಆಸನ.

2) ಉಸಿರಾಟವನ್ನು ನಿರಾಳವಾಗಿಸುತ್ತದೆ ಹಾಗೂ ಆಳವಾಗಿ ಉಸಿರಾಡಲು ಪ್ರೇರೇಪಿಸುತ್ತದೆ.

3) ಬೆನ್ನು, ಮೇಲಿನ ಬೆನ್ನು ಮತ್ತು ಪ್ರಷ್ಠ ಭಾಗವನ್ನು ಬಲಪಡಿಸುತ್ತದೆ.

4) ಹೊಟ್ಟೆ ಮತ್ತು ಗಂಟಲಿನ ಅಂಗಗಳನ್ನು ಹಿಗ್ಗಿಸಿತ್ತದೆ ಮತ್ತು ಉತ್ತೇಜಿಸುತ್ತದೆ.

5) ಕತ್ತಿನ ಮೇಲಿನ ಭಾಗ ಮತ್ತು ಬೆನ್ನಿನ ಭಾಗದ ಸ್ನಾಯುಗಳನ್ನು ಬಲಪಡಿಸುತ್ತದೆ.

ಸೂಚನೆ:

ಅಧಿಕ ಮತ್ತು ಕಡಿಮೆ ರಕ್ತದೊತ್ತಡ, ಮೈಗ್ರೇನ್ ತಲೆನೋವು, ನಿದ್ರಾಹೀನತೆ ಮತ್ತು ಇತ್ತೀಚಿಗೆ ಯಾವುದಾದರೂ ಶಸ್ತ್ರಚಕಿತ್ಸೆಗೊಳಗಾಗಿದ್ದವರು ಈ ಆಸನ ಮಾಡಬಾರದು.

Leave a reply

Your email address will not be published. Required fields are marked *