ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳಿಗೆ 2000 ರೂ. ನೇರವಾಗಿ ಖಾತೆಗೆ ಬರುತ್ತದೆ ಎನ್ನುವ ಪಿಎಂ ಕನ್ಯಾ ಯೋಜನೆ ಹೆಸರಿನ ಯೋಜನೆಯೊಂದರ ಸಂದೇಶ ವಾಟ್ಸಾಪ್ ಫೇಸ್ ಬುಕ್ ಗಳಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗೆ ಇದು ಕರ್ನಾಟಕದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

ಹಲವರು ಕಂಪ್ಯೂಟರ್ ಸೆಂಟರ್, ಝೆರಾಕ್ಸ್ ಅಂಗಡಿಗಳಲ್ಲಿ ತಮ್ಮ ಎಲ್ಲ ದಾಖಲೆಗಳನ್ನು ಕೊಡುತ್ತಿದ್ದಾರೆ. ಅಸಲಿಗೆ ಈ ಯೋಜನೆಯ ನಿಜ ಬಣ್ಣ ತಿಳಿದರೆ ಹೌಹಾರುತ್ತೀರಿ. ಏನಿದು ಯೋಜನೆ, ಯಾಕೆ ಇಷ್ಟೊಂದು ವೈರಲ್ ಆಗಿದೆ, ದಾಖಲೆ ಕೊಟ್ಟರೆ ಏನಾಗುತ್ತದೆ ಎನ್ನುವುದನ್ನು ತಿಳಿಯಲು ಈ ವರದಿ ಪೂರ್ತಿ ಓದಿ.

ವೈರಲ್ ಮೆಸೇಜ್ ಏನು?

ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಪ್ರತಿ ತಿಂಗಳು 2000 ರೂಪಾಯಿ ನೇರವಾಗಿ ನಿಮ್ಮ ಖಾತೆಗೆ ಬರುತ್ತವೆ. ಅದು ಹೇಗೆಂದರೆ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಯೋಜನೆ. ಅದು ಯಾವುದೆಂದರೆ “ಪಿಎಂ ಕನ್ಯಾ ಯೋಜನೆ’
ಪಿಎಂ ಕನ್ಯಾ ಯೋಜನೆಗೆ ಅಜಿ೯ ಸಲ್ಲಿಸಲು
1) ವಯಸ್ಸಿನ ಮಿತಿ 05 ರಿಂದ 18 ವಷ೯ದೊಳಗಿನವರು.
2) ಆಧಾರ ಕಾರ್ಡ್ .
3) ಬ್ಯಾಂಕ್ ಪಾಸಬುಕ್.
4) ಮಗುವಿನ 2 ಭಾವಚಿತ್ರ.
5) ತಂದೆ ತಾಯಿಯ ವಾಷಿ೯ಕ ವರಮಾನ 2 ಲಕ್ಷ ರೂ ದಾಟಿರಬಾರದು.
ಅಜಿ೯ಯನ್ನು CSC ಗೆ ಹೋಗಿ ಅಜಿ೯ಯನ್ನು ಸಲ್ಲಿಸಬೇಕು. ಸಲ್ಲಿಸಿದ ನಂತರ ನಿಮಗೆ ಒಂದು ರಶೀದಿ ಕೊಡುತ್ತಾರೆ ಅದನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಮತ್ಯಾಕ ತಡಾ ಈಗಲೇ ಹೋಗಿ ಪ್ರಧಾನಮಂತ್ರಿ ಕನ್ಯಾ ಆಯುಷ್ ಯೋಜನೆಗೆ ಅಜಿ೯ ಸಲ್ಲಿಸಿ ನಿಮ್ಮ ಹೆಣ್ಣು ಮಕ್ಕಳ ಭವಿಷ್ಯ ರೂಪಿಸಿಕೊಳ್ಳಬಹುದು’.

ವಾಸ್ತವ ಸಂಗತಿ ಏನು?

ಈ ಸಂದೇಶ ವಾಟ್ಸಾಪ್ ಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ಸಂದೇಶ ನಂಬಿ ದಾಖಲೆ ಕೊಟ್ಟರೆ ಭವಿಷ್ಯ ಉಜ್ವಲ ಆಗುವ ಬದಲು, ಬದುಕೇ ತೊಂದರೆಯಲ್ಲಿ ಸಿಲುಕಿಕೊಳ್ಳುತ್ತದೆ. ಯಾಕೆಂದರೆ ಇಂಥದ್ದೊಂದು ಯೋಜನೆಯೇ ಕರ್ನಾಟಕದಲ್ಲಿ ಇಲ್ಲ. ಭಾರತದ ಯಾವ ರಾಜ್ಯಗಳಲ್ಲಿಯೂ ಇಲ್ಲ. ಹಾಗಿದ್ದರೂ ಯಾಕೆ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರೆ, ಇದರ ಹಿಂದೆ ದೊಡ್ಡ ಜಾಲವೇ ಕೆಲಸ ಮಾಡುತ್ತದೆ.

ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು 2000 ರೂ. ಕೊಡಲಾಗುತ್ತದೆ ಎನ್ನುವ ಸುದ್ದಿ ಈಗಿನದ್ದಲ್ಲ. ಸುಮಾರು ಮೂರು ವರ್ಷಗಳಿಂದ ಆಗಾಗ ಸುದ್ದಿಯಾಗುತ್ತಲೇ ಇದೆ. ಆದರೆ, ಯಾರಿಗೂ ಹಣ ಬಂದಿಲ್ಲ. ಇಂಥ ಸಂದೇಶ ಹಂಚಿಕೊಂಡರೆ ಸೈಬರ್ ಕ್ರೈಂ ವಿಭಾಗಕ್ಕೆ (080-22251843 / 080-22201026) ದೂರು ಕೊಡುವಂತೆ ಕರ್ನಾಟಕ ಸರ್ಕಾರ ತಿಳಿಸಿದೆ.

ದಾಖಲೆ ಕೊಟ್ಟರೆ ಜೋಕೆ

ಈ ರೀತಿಯ ಯೋಜನೆ ಇದೆ ಎಂದು ಮೊದಲು ಉತ್ತರ ಭಾರತದಲ್ಲಿ ಸುದ್ದಿಯಾಗಿತ್ತು. ಕಳೆದ ವರ್ಷ ಕರ್ನಾಟಕದಲ್ಲಿಯೂ ಇದು ಸುದ್ದಿಯಾಗಿದೆ. ಸೌಲಭ್ಯ ಕೊಡಿಸುವ ನೆಪದಲ್ಲಿ ದಲ್ಲಾಳಿಗಳು ಸಹ ಹುಟ್ಟಿಕೊಂಡಿದ್ದರು. ಅನೇಕ ಪಾಲಕರು ದಾಖಲೆ ಕೊಟ್ಟಿದ್ದಲ್ಲದೆ ಸಾವಿರಾರು ರೂ. ಕಳೆದುಕೊಂಡಿದ್ದಾರೆ.

ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದು ಸುದ್ದಿಯಾಗುತ್ತಿದೆ. ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಅಡಿಯಲ್ಲಿ ಗರ್ಭಿಣಿಯರಿಗೆ ತಿಂಗಳಿಗೆ ಎರಡು ಸಾವಿರದಂತೆ ಮೂರು ತಿಂಗಳು ಆರು ಸಾವಿರ ರೂ ಕೊಡುವ ಯೋಜನೆ ಇದೆ. ಆದರೆ, ಪ್ರತಿ ತಿಂಗಳು ಹೆಣ್ಣು ಮಕ್ಕಳಿಗೆ 2000 ರೂ. ಕೊಡುವ ಯೋಜನೆ ಕರ್ನಾಟಕದಲ್ಲಿ ಇಲ್ಲ ಎಂದು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ.

ದಾಖಲೆಗಳು ಕೊಟ್ಟರೆ ಏನಾಗುತ್ತದೆ?

ಮೊದಲನೆಯದಾಗಿ ಸರಕಾರದ ಯಾವುದೇ ಯೋಜನೆಗಳಿಗೆ ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ದಾಖಲೆ ಸಂಗ್ರಹಿಸಲು ಹೇಳುವುದಿಲ್ಲ. ಯಾವುದೇ ಅರ್ಜಿ ಸ್ವೀಕರಿಸುವುದಿದ್ದರೂ ಸರ್ಕಾರದ ಕಚೇರಿಗಳಲ್ಲಿಯೇ ಸ್ವೀಕರಿಸಲಾಗುತ್ತದೆ. ಕೇಂದ್ರ ಸರ್ಕಾರದ ಯೋಜನೆಯಾಗಿದ್ದರೂ ಸಹ ರಾಜ್ಯ ಸರ್ಕಾರದ ಮೂಲಕವೇ ಅನುಷ್ಠಾನವಾಗುತ್ತದೆ.

ಜನ ಸಾಮಾನ್ಯರ ಮಾಹಿತಿ ಕದಿಯುವುದು ಮತ್ತು ಝೆರಾಕ್ಸ್ ಉದ್ಯಮ ಹೆಚ್ಚಿಸಿಕೊಳ್ಳುವ ಸಲುವಾಗಿ ಇಂಥ ನಕಲಿ ಯೋಜನೆಗಳು ಹುಟ್ಟಿಕೊಳ್ಳುತ್ತವೆ. ಜನರು ಕೊಟ್ಟ ದಾಖಲೆಯ ಮಾಹಿತಿ ಆಧರಿಸಿಯೇ ಜನರ ಬ್ಯಾಂಕ್ ಖಾತೆಗೆ ಕನ್ನ ಹಾಕುವುದು, ಮೊಬೈಲ್ ಗೆ ಇಲ್ಲಸಲ್ಲದ ಸಂದೇಶ ಬರುವುದು ಆರಂಭವಾಗುತ್ತವೆ.

ಹಾಗಾಗಿ ಯಾವುದೇ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಖಚಿತಪಡಿಸಿಕೊಳ್ಳಬೇಕು. ಯಾವುದೇ ಅರ್ಜಿ, ದಾಖಲೆಗಳನ್ನು ಸರ್ಕಾರಿ ಕಚೇರಿಗಳಲ್ಲಿಯೇ ಕೊಡಬೇಕು. ಖಾಸಗಿ ವ್ಯಕ್ತಿಗಳ ಬಳಿ ಕೊಟ್ಟರೆ ದುರುಪಯೋಗ ಆಗುವ ಸಾಧ್ಯತೆ ಹೆಚ್ಚು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.