ಯಾವುದೇ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು, ಇತ್ತೀಚಿನ ದಿನಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಜತೆಗೆ ಅನುಭವವನ್ನೂ ಕೇಳುತ್ತಾರೆ. ಅಷ್ಟೆಲ್ಲ ಅನುಭವ, ಶಿಕ್ಷಣ ಇದ್ದರೂ ತಿಂಗಳ ಕೊನೆಗೆ ಸಿಗುವ ವೇತನ 15ರಿಂದ 20 ಸಾವಿರ ರೂ. ಮಾತ್ರ.

ಆದರೆ ಇಲ್ಲೊಬ್ಬ ಯುವಕ ಡಬಲ್ ಡಿಗ್ರಿ ಹೊಂದಿದ್ದರೂ ಉದ್ಯೋಗವನ್ನು ನಿರಾಕರಿಸಿ ಕೃಷಿಯಲ್ಲಿ ಅವರಿಗಿಂತ ಹೆಚ್ಚು ಹಣ ಸಂಪಾದಿಸುತ್ತಿದ್ದಾರೆ. ಕೃಷಿಯಲ್ಲಿ ಅನುಭವವಿಲ್ಲದೆ ಇದ್ದರೂ, ಸತತ ಪರಿಶ್ರಮದಿಂದಾಗಿ ಯಾವ ಸಾಪ್ಟವೇರ್ ಎಂಜಿನಿಯರ್ ಗಿಂತಲೂ ಕಡಿಮೆ ಇಲ್ಲದಂತೆ ಆದಾಯ ಗಳಿಸುತ್ತಿದ್ದಾರೆ.

ಬೆಳಗಾವಿಯಿಂದ 35 ಕಿ.ಮೀ ದೂರದಲ್ಲಿರುವ ಹುಕ್ಕೇರಿ ತಾಲ್ಲೂಕಿನ ಶಿರೂರ್ ಗ್ರಾಮದ ಸತೀಶ್ ಶಿಡಗೌಡರ್ ಇಂಥದ್ದೊಂದು ಅದ್ಬುತ ಕೃಷಿ ಪದ್ಧತಿ ಅನುಸರಿಸಿದ್ದಾರೆ. 38 ವರ್ಷದ ಈ ಯುವ ರೈತ ಕಡಿಮೆ ಹೊಲದಲ್ಲಿಯೇ ಗುಣಮಟ್ಟದ ಹಾಗಲಕಾಯಿ ಬೆಳೆದು ರೈತ ಸಮೂಹವೇ ಹುಬ್ಬೇರಿಸುವಂತೆ ಮಾಡಿದ್ದಾರೆ. ಹಾಗಾಗಿ ಇವರನ್ನು ಹಾಗಲಕಾಯಿ ಸ್ಪೆಷಲಿಸ್ಟ್ ಎಂದು ಕರೆಯುತ್ತಾರೆ.

ತುಂಡು ಭೂಮಿ ಬಂಪರ್ ಆದಾಯ
ಸತೀಶ ಅವರು ತಮ್ಮ 1.5 ಎಕರೆ ಭೂಮಿಯಲ್ಲಿ ಹಾಗಲಕಾಯಿ ಬೆಳೆಯುತ್ತಾರೆ. ಈ ಹಾಗಲಕಾಯಿ ಇಂದಲೇ ಪ್ರತಿ ತಿಂಗಳು ಲಕ್ಷಗಟ್ಟಲೆ ಹಣ ಸಂಪಾದಿಸುತ್ತಿದ್ದಾರೆ. ಯಾವ ಖಾಸಗಿ ಕಂಪನಿಯೂ ಕೊಡದಷ್ಟು ಹಣವನ್ನು ಈ ಯುವ ರೈತ ಕೃಷಿಯಲ್ಲಿ ಗಳಿಸುತ್ತಾರೆ. ಈ ತುಂಡು ಭೂಮಿ ಕೃಷಿಯಿಂದಲೇ ನಾಲ್ಕು ವಾಹನ  ಖರೀದಿಸಿದ್ದಾರೆ. ಈಗ ಹೊಸ ಬಂಗಲೆ ನಿರ್ಮಿಸಲು ಯೋಜಿಸಿದ್ದಾರೆ.

ಸತೀಶ್ ಶಿಡಾಗೌಡರ್ ಅವರು ಶಿಕ್ಷಕರಾಗಲು ಬಯಸಿದ್ದರು. ಅದಕ್ಕಾಗಿ ಅವರು ಶಿಕ್ಷಣದಲ್ಲಿ ಪದವಿ, ಸ್ನಾತಕೋತ್ತರ ಪಡೆದರು. ಆದರೆ, ತಿಂಗಳಿಗೆ 16,000 ರೂ. ಸಂಬಳದ ಕೆಲಸಕ್ಕೆ 16 ಲಕ್ಷ ರೂ. ಲಂಚ ಕೇಳೀದರು. ಅದಕ್ಕೆ ಅವರ ತಂದೆ ಸಾಲ ಮಾಡಲು ಮುಂದಾಗಿದ್ದರು. ಆದರೆ ನಾನು ಅದನ್ನು ನಿರಾಕರಿಸಿದ ಸತೀಶ ಅವರು ತಂದೆಯೊಂದಿಗೆ ಕೃಷಿ ಮಾಡಲು ನಿರ್ಧರಿಸಿದರು.

ಹೇಗಿದೆ ಕೃಷಿ ಯೋಜನೆ
ಸತೀಶ ಅವರು ಹೇಳುವಂತೆ “ನನ್ನ ತಂದೆ ನಾಗಪ್ಪ (69) ಮತ್ತು ಚಿಕ್ಕಪ್ಪ ಕಳೆದ 15 ವರ್ಷಗಳಿಂದ ಸಾಂಪ್ರದಾಯಿಕ ರೀತಿಯಲ್ಲಿ ವಿವಿಧ ತರಕಾರಿಗಳನ್ನು ಬೆಳೆಯುತ್ತಿದ್ದರು. ಆದರೆ ಉತ್ಪಾದನೆ ಮತ್ತು ಗುಣಮಟ್ಟ ಕಳಪೆಯಾಗಿದ್ದರಿಂದ ಹೆಚ್ಚು ಆದಾಯ ಬರುತ್ತಿರಲಿಲ್ಲ.

ನಾನು 2008 ರಲ್ಲಿ ಕೃಷಿಯಲ್ಲಿ ಸೇರಿಕೊಂಡ ನಂತರ, ನೀರಿನ ಸರಿಯಾದ ನಿರ್ವಹಣೆಗಾಗಿ ಹನಿ ನೀರಾವರಿ ಅಳವಡಿಸಿದೆ. ಅದರ ಮೂಲಕ ತೇವಾಂಶವನ್ನು ಕಾಪಾಡಿಕೊಳ್ಳಲು, ಕಳೆಗಳ ಬೆಳವಣಿಗೆಯನ್ನು ತಡೆಯಲು ಮತ್ತು ಕೀಟ ನಿರ್ವಹಣೆಗೆ ಬೆಳೆಗೆ ಸೂಕ್ಷ್ಮ ಪೋಷಕಾಂಶಗಳನ್ನು ನಿಯಮಿತವಾಗಿ ಒದಗಿಸುವ ಮೂಲಕ ತರಕಾರಿಗಳನ್ನು ಬೆಳೆಯುವ ತಂತ್ರಗಳನ್ನು ಅರಿತೆ.

ಮಾರುಕಟ್ಟೆಯಲ್ಲಿ ಹಾಗಲಕಾಯಿ ಬೆಳೆಯ ಬೇಡಿಕೆಯನ್ನು ಅಧ್ಯಯನ ಮಾಡಿದೆ. ಬಳಿಕ ಅದೇ ಬೆಳೆಯನ್ನು ಕೃಷಿ ಮಾಡಲು ಆಯ್ಕೆ ಮಾಡಿದೆ. ಹಾಗಲಕಾಯಿ ರುಚಿಯಿಂದ ಕಹಿಯಾಗಿರುತ್ತದೆ. ಆದರೆ ಇದು ಮಧುಮೇಹಿಗಳು, ಕ್ಯಾನ್ಸರ್ ಮತ್ತು ಇನ್ನೂ ಅನೇಕ ಕಾಯಿಲೆಗಳಿಗೆ ಪರಿಹಾರವಾಗಿದೆ. ಇತ್ತೀಚಿನ ದಿನಗಳಲ್ಲಿ ಜನರು ಇದನ್ನು ಹೆಚ್ಚು ಸೇವಿಸಲು ಪ್ರಾರಂಭಿಸಿದ್ದಾರೆ. ಕೆಲವು ಔಷಧಿಗಳ ತಯಾರಿಕೆಯಲ್ಲಿಯೂ ಇದನ್ನು ಬಳಸಲಾಗುತ್ತದೆ.

ಆದಾಯದ ಪ್ಲಾನಿಂಗ್
ನಾವು ಒಂದೂವರೆ ಎಕರೆ ಭೂಮಿಯಲ್ಲಿ ವಿವಿಧ ಪ್ಲಾಟ್‌ಗಳನ್ನು ಮಾಡುವ ಮೂಲಕ ವರ್ಷವಿಡೀ ಹಾಗಲಕಾಯಿ ಬೆಳೆಯಲು ಪ್ರಾರಂಭಿಸಿದೆವು. ಒಂದು ಕೊಯ್ಲು ಹಂಗಾಮಿನಲ್ಲಿ ಸುಮಾರು 50 ಟನ್ ಕಾಯಿ ಕೊಯ್ಲು ಮಾಡುತ್ತೇವೆ. ಈ ವರ್ಷ ಇದನ್ನು ಟನ್‌ಗೆ 35,000 ರೂ.ಗೆ ಮಾರಾಟ ಮಾಡಿದ್ದೇವೆ. ಹಿಂದಿನ ವರ್ಷ ಟನ್‌ಗೆ 48,000 ರೂ. ನಲ್ಲಿ ಮಾರಿದ್ದೆವು.

ಹಾಗಲಕಾಯಿ ಹಂಗಾಮಿನಲ್ಲಿ ದಿನಕ್ಕೆ ಸುಮಾರು 25,000 ದಿಂದ 35,000 ರೂ. ಗಳಿಸುತ್ತೇನೆ. ಇದು ಯಾವುದೇ ಶಿಕ್ಷಕನ ಗಳಿಕೆಗಿಂತ ಹೆಚ್ಚಾಗಿದೆ ಎಂದು ಸತೀಶ್ ಹೆಮ್ಮೆಯಿಂದ ಹೇಳುತ್ತಾರೆ. ಅಲ್ಲದೆ, ಹಾಗಲಕಾಯಿ ಬೆಳೆಯುವ ವಿಧಾನವನ್ನು ಅರ್ಥಮಾಡಿಕೊಳ್ಳಲು ವಿವಿಧ ಜಿಲ್ಲೆಗಳ ಅನೇಕ ಜನರು ನನ್ನ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ’ ಎನ್ನುತ್ತಾರೆ ಸತೀಶ್.