
ಅಡಿಕೆ, ಶುಂಠಿ ಬೆಳೆಗೆ ಕೊಳೆ ರೋಗದಿಂದ ಮುಕ್ತಿ

ಮಳೆಗಾಲ ಆರಂಭವಾದ ಕೂಡಲೇ ಅಡಿಕೆ, ಶುಂಠಿ ಬೆಳೆಯಲ್ಲಿ ರೋಗಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಕೊಳೆ ರೋಗದಿಂದಾಗಿ ಅಡಿಕೆ ಕಾಯಿಗಳು ಬೆಳೆಯುವ ಮೊದಲೇ ಉದುರಿ ಬೀಳುವುದು, ಶುಂಠಿಗಳು ಕೊಳೆತು ಹೋಗುವುದನ್ನು ಕಾಣುತ್ತೇವೆ.
ಅಂಥ ರೋಗ ಬಾಧೆಗಳಿಂದ ಬೆಳೆ ರಕ್ಷಣೆ ಮಾಡುವುದು ಹೇಗೆ ಎನ್ನುವ ಬಗ್ಗೆ ಕೃಷಿ ಸಂಶೋಧನೆಗಳು ನಡೆಯುತ್ತಲೇ ಇವೆ. ಅದರ ಭಾಗವಾಗಿ ಕೊಡಗು ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ.ವೀರೇಂದ್ರ ಕುಮಾರ್ ಅವರು ಬೆಳೆ ರಕ್ಷಣೆಯ ಕೆಲ ಸಲಹೆಗಳನ್ನು ನೀಡಿದ್ದಾರೆ.
ಅಡಿಕೆ:
ಮಳೆಗಾಲ ಪ್ರಾರಂಭವಾಗುವುದಕ್ಕಿಂತ ಮುಂಚಿತವಾಗಿಯೇ ಕಳೆದ ವರ್ಷ ರೋಗ ಪೀಡಿತ ಕಾಯಿಗಳು ತೋಟದಲ್ಲಿ ಬಿದ್ದಿದ್ದರೆ ಅವುಗಳನ್ನು ಆರಿಸಿ ತೆಗೆದು ಸುಡಬೇಕು. ಕೊಳೆ ರೋಗವನ್ನು ಹತೋಟಿ ಮಾಡಲು ರೈತರು ಶೇ. 1 ರ ಬೋರ್ಡೊ ದ್ರಾವಣವನ್ನು ಸರಿಯಾಗಿ ತಯಾರಿಸಿ ಮೊದಲನೆ ಸಿಂಪರಣೆಯನ್ನು ಜೂನ್ ತಿಂಗಳ ಮೊದಲನೆ ವಾರದೊಳಗೆ ಕಡ್ಡಾಯವಾಗಿ ಸಿಂಪರಣೆ ಮಾಡಲೇಬೇಕು.

ಪರಿಣಾಮಕಾರಿಯಾಗಿ ಕೊಳೆರೋಗವನ್ನು ಹತೋಟಿ ಮಾಡಲು ಶೇ. 1 ರ ಬೋರ್ಡೊ ದ್ರಾವಣವನ್ನು ಅಡಿಕೆಯ ಗೊಂಚಲು, ಸುಳಿ ಮತ್ತು ಎಲೆಗಳು ಸಂಪೂರ್ಣ ತೊಯ್ಯುವ ಹಾಗೆ ಸಿಂಪಡಿಸಬೇಕು. ಪ್ರತಿ ಅಡಿಕೆಯ ಬುಡದ ಭಾಗಕ್ಕೆ 3 ರಿಂದ 5 ಲೀಟರ್ ಕಾಪರ್ ಆಕ್ಸಿಕ್ಲೋರೈಡ್ (ಬ್ಯಾರಲ್‍ಗೆ 500 ಗ್ರಾಂ) ದ್ರಾವಣವನ್ನು ಸುರಿಯಬೇಕು. ಬೋರ್ಡೊ ದ್ರಾವಣವನ್ನು ಸಿಂಪರಣೆ ಮಾಡುವುದಕ್ಕಿಂತ ಮೊದಲು ಕಡ್ಡಾಯವಾಗಿ ದ್ರಾವಣದ ರಸಸಾರವನ್ನು ಪರೀಕ್ಷಿಸಿ ನಂತರ ಸಿಂಪರಣೆಗೆ ಉಪಯೋಗಿಸಬೇಕು.
ಇದನ್ನೂ ಓದಿ: ಮನೆಯಲ್ಲೇ ಬೋರ್ಡೊ ದ್ರಾವಣ ತಯಾರಿಸುವುದು ಹೇಗೆ?
ನೀರು ನಿಲ್ಲದ ಹಾಗೆ ಬಸಿಗಾಲುವೆಗಳನ್ನು ನಿರ್ಮಿಸಬೇಕು. ಅಡಿಕೆ ಕಾಯಿ ಒಡೆದು ಬೀಳುವ /ಸೀಳುವ ಸಮಸ್ಯೆ ಇದ್ದಲ್ಲಿ ಪ್ರತಿ ಅಡಿಕೆ ಗಿಡಕ್ಕೆ 25 ರಿಂದ 30 ಗ್ರಾಂ ಬೋರಾಕ್ಸ್‍ನ್ನು ಕೊಡಬೇಕು. ಪ್ರತಿ ಮರವೊಂದಕ್ಕೆ ವರ್ಷಕ್ಕೆ 20 ಕಿ. ಗ್ರಾಂ ನಂತೆ ಕೊಟ್ಟಿಗೆ ಗೊಭ್ಬರ ಹಾಗೂ ಹಸಿರೆಲೆ ಗೊಬ್ಬರವನ್ನು ಕೊಡಬೇಕು.
ಪ್ರತಿ ಗಿಡಕ್ಕೆ 220 ಗ್ರಾಂ ಯೂರಿಯಾ, 200 ಗ್ರಾಂ ಶಿಲಾರಂಜಕ ಮತ್ತು 230 ಗ್ರಾಂ ಎಂ.ಓ.ಪಿನ್ನು ಕೊಡಬೇಕು. ಮೇಲೆ ತಿಳಿಸಿರುವ ಪ್ರಮಾಣದ ಗೊಬ್ಬರವು ಒಂದು ಗಿಡಕ್ಕೆ ಒಂದು ವರ್ಷಕ್ಕೆ ಕೊಡಬೇಕಾದ ಪ್ರಮಾಣವಾಗಿದ್ದು ಮೊದಲನೆ ಕಂತನ್ನು ಜೂನ್ ತಿಂಗಳಿನಲ್ಲಿ ಎರಡನೆ ಕಂತಿನ ಗೊಬ್ಬರವನ್ನು ಆಗಸ್ಟ್ ತಿಂಗಳಿನಲ್ಲಿ ಕೊಡಬೇಕು.

ಶುಂಠಿ:
ನೀರು ನಿಲ್ಲದ ಹಾಗೆ ಬಸಿಗಾಲುವೆಗಳನ್ನು ನಿರ್ಮಿಸಬೇಕು. ಪ್ರತೀ ಶುಂಠಿಯ ಗಿಡದ ಬುಡದ ಭಾಗಕ್ಕೆ 50 ರಿಂದ 60 ಗ್ರಾಂ ಟ್ರೈಕೋಡರ್ಮ ಎಂಬ ಜೈವಿಕ ಶಿಲೀಂದ್ರವನ್ನು 1 ಕೆ.ಜಿ ಬೇವಿನ ಹಿಂಡಿ ಅಥವಾ 5 ಕೆ.ಜಿ ಕೊಟ್ಟಿಗೆ ಗೊಬ್ಬರದಲ್ಲಿ ಮಿಶ್ರಣ ಮಾಡಿ ಬುಡಕ್ಕೆ ಹಾಕಬೇಕು.
ಗೆಡ್ಡೆಕೊಳೆ ರೋಗವನ್ನು ಹತೋಟಿ ಮಾಡಲು ಶೇ. 1 ರ ಬೋರ್ಡೊ ದ್ರಾವಣವನ್ನು ಸಿಂಪರಣೆ ಮಾಡಲೇಬೇಕು. ಪ್ರತಿ ಶುಂಠಿಯ ಗಿಡದ ಬುಡದ ಭಾಗಕ್ಕೆ 1 ರಿಂದ 2 ಲೀಟರ್ ಕಾಪರ್ ಆಕ್ಸಿಕ್ಲೋರೈಡ್ (200 ಲೀಟರ್ ಬ್ಯಾರಲ್‍ಗೆ 500 ಗ್ರಾಂ) ದ್ರಾವಣವನ್ನು ಸುರಿಯಬೇಕು.
ಮಾಹಿತಿಗೆ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರು, ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ಕೊಡಗು ಜಿಲ್ಲೆ, ದೂರವಾಣಿ: 08274-247274 ನ್ನು ಸಂಪರ್ಕಿಸಬಹುದು.
Good information sir pls updates all crop infarction