
ಪ್ರತಿಷ್ಠೆಯನ್ನೂ ಸೋಲಿಸಿದ ಪ್ರೀತಿ

ಗ್ರಾಮ ಪಂಚಾಯಿತಿ ಅಧ್ಯಕ್ಷನ ಮಗಳು ಕೂಲಿಯವನ ಮಗನನ್ನು ಮದುವೆಯಾದರೆ ಜನರು ಆಡಿಕೊಳ್ಳುವುದಿಲ್ಲವೇ ಎಂದುಕೊಂಡ ಸಂಧ್ಯಾಳ ತಂದೆ ಸಿಟ್ಟಿನಲ್ಲಿ ಬಂದೂಕು ಹಿಡಿದು ಮಗಳ ಕೋಣೆಯೊಳಗೆ ಹೋದ. ನಿನ್ನನ್ನು ಸುಟ್ಟು ಬಿಡುತ್ತೀನಿ ಎಂದು ಮಗಳ ಹಣೆಗೆ ಬಂದೂಕು ಹಿಡಿದ. ದುಃಖದಲ್ಲಿ ಮತ್ತಷ್ಟು ಹೆದರಿದ ಸಂಧ್ಯಾ ಗಾಬರಿ ಬಿದ್ದಳು. ತಾನು ತೋರಿಸಿದ ಯುವಕನೊಂದಿಗೇ ಮದುವೆಯಾಗಬೇಕು ಎಂದು ತಾಕೀತು ಮಾಡಿ ತಂದೆ ಕೋಣೆಯಿಂದ ಹೊರಬಂದರು.
ಹಿಂದಿನ ಭಾಗ….
ಓದಿ: ಪ್ರತಿಷ್ಠೆಯ ಅಡಕತ್ತರಿಯಲ್ಲಿ ಪ್ರೀತಿಯ ಚಡಪಡಿಕೆ
ಮಾರನೇ ದಿನವೇ ಸಂಧ್ಯಾಳನ್ನು ನೋಡಲು ಕುಟುಂಬವೊಂದು ಬಂದಿತು. ಸಪ್ಪೆ ಮುಖದಲ್ಲಿಯೇ ಸಂಧ್ಯಾ ದರ್ಶನ ಕೊಟ್ಟು ಒಳಹೋದಳು. ಎಲ್ಲರೂ ಹುಡುಗಿಗೆ ಭಯ ಆಗಿರಬೇಕು ಎಂದುಕೊಂಡರು. ಸಂಧ್ಯಾಳ ಸೌಂದರ್ಯಕ್ಕೆ ಹುಡಗನೂ ಸೋತು ಮದುವೆಗೆ ಒಪ್ಪಿದ. ಪ್ರೀತಿ ಕೈಜಾರುತ್ತಿರುವುದು ಅರಿತ ಸಂಧ್ಯಾ, ಮಂಜುವನ್ನು ಬೇಟಿಯಾಗಿ ತಕ್ಷಣವೇ ಮದುವೆ ಮಾಡಿಕೊಳ್ಳುವಂತೆ ಗೋಗರೆದಳು.
ತನ್ನ ಮನೆ ಪರಿಸ್ಥಿತಿಯ ಇಕ್ಕಟ್ಟಿನಲ್ಲಿದ್ದ ಮಂಜು, ಸಂಧ್ಯಾಳ ಪ್ರಸ್ತಾವವನ್ನು ಪುರಸ್ಕರಿಸಲಿಲ್ಲ. ಸ್ವಲ್ಪ ದಿನ ತಾಳು, ಸ್ವಲ್ಪ ದಿನ ತಾಳು ಎನ್ನುತ್ತಲೇ ಭಯಗೊಂಡ. ಸಿಟ್ಟಾದ ಸಂಧ್ಯಾ ಆವೇಶದಲ್ಲಿ ಮಂಜುನ ಜತೆ ಹೆಚ್ಚು ಮಾತನಾಡದೆ ಕಣ್ಣೀರು ಸುರಿಸುತ್ತ ಮನೆಗೆ ನಡೆದಳು. ಆತುರ ಆತುರದಲ್ಲಿಯೇ ಮದುವೆಯೂ ನಿಶ್ಚಯವಾಗಿ ಒಂದೇ ವಾರದಲ್ಲಿ ಮದುವೆ ದಿನ ನಿಗದಿ ಆಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷರ ಬೆದರಿಕೆಗೆ ಹೆದರಿದ್ದ ಮಂಜು ತನ್ನ ಪ್ರೀತಿ ಉಳಿಸಿಕೊಳ್ಳುವಲ್ಲಿ ಅಸಹಾಯಕತೆ ತೋರಿದ. ಮನಸ್ಸಿನಲ್ಲಿಯೇ ಕೊರಗಲು ಶುರು ಮಾಡಿದ. ಇಬ್ಬರಲ್ಲಿಯೂ ನೆಮ್ಮದಿ ನಾಶವಾಗಿ ಶೋಕ ಆವರಿಸಿತ್ತು.
****
ಮದುವೆಗಾಗಿ ಅಧ್ಯಕ್ಷರ ಮನೆಯಲ್ಲಿ ಕೆಲಸ ಜೋರಾಗಿತ್ತು. ಚಪ್ಪರ, ವಿದ್ಯುತ್ ಅಲಂಕಾರ, ಧ್ವನಿ ವರ್ದಕದ ಸದ್ದು ಜೋರಾಗಿತ್ತು. ರಾತ್ರಿ ಕಳೆದು ಬೆಳಕಾದರೆ ಮದುವೆ ನಡೆಯುತ್ತದೆ. ಸಂಧ್ಯಾಳಿಗೆ ಮಂಜುವನ್ನು ಬಿಟ್ಟು ಬೇರೊಬ್ಬನನ್ನು ಮದುವೆಯಾಗುವ ಇಷ್ಟ ಇರಲಿಲ್ಲ. ಮಂಜುವಿನ ಬಗ್ಗೆ ವೈಯಕ್ತಿಕ ದ್ವೇಷ ಇಲ್ಲದೆ ಇದ್ದರೂ ಊರಿನ ಜನ ತನ್ನ ಬಗ್ಗೆ ಆಡಿಕೊಂಡಾರು ಎಂದು ಮಗಳ ಪ್ರೀತಿ ವಿರೋಧಿಸಿದ ತಂದೆಯಲ್ಲೂ ತಳಮಳ. ಇತ್ತ ಕಣ್ಣೆದುರಲ್ಲೇ ತನ್ನ ಪ್ರೀತಿ ಬೇರೊಬ್ಬರ ಪಾಲಾಗುತ್ತಿರುವುದನ್ನು ನೋಡುವ ಸಂಕಟ ಮಂಜುನದ್ದಾಗಿತ್ತು.
ತಂದೆಯ ಹಠ, ಮಂಜುವಿನ ಅಸಹಾಯಕತೆ ಸಂಧ್ಯಾಳನ್ನು ಜಿಗುಪ್ಸೆಗೆ ದೂಡಿತ್ತು. ಆತುರದಲ್ಲಿ ಸಾಯುವ ನಿರ್ಧಾರಕ್ಕೆ ಬಂದು ಬಿಟ್ಟಳು. ಮಧ್ಯಾಹ್ನದ ಹೊತ್ತು ಎಲ್ಲರೂ ಊಟ ಮಾಡಿ ವಿಶ್ರಮಿಸುತ್ತಿದ್ದರು. ಸದ್ದಿಲ್ಲದೆ ಮನೆಯಿಂದ ಕಾಲ್ಕಿತ್ತ ಸಂಧ್ಯಾ ಸಾವನ್ನು ಹುಡುಕಿ ಹೊರಟಳು. ಅದಕ್ಕೂ ಮೊದಲು ಕೊನೆಯದಾಗಿ ಮಂಜುವನ್ನು ನೋಡಬೇಕು ಎಂದು ಬಯಸಿದಳು.
ದುಃಖದಲ್ಲಿ ಮಂಜು ಗುಡ್ಡದ ಮೇಲೆ ಒಬ್ಬನೇ ಕುಳಿತಿದ್ದ. ಸಂಧ್ಯಾಳಿಗೆ ಮಂಜುವನ್ನು ನೋಡಲು ಆಗಲೇ ಇಲ್ಲ. ನೇರವಾಗಿ ಊರಂಚಿನ ಹೊಲದ ಕಡೆ ಹೋದವಳೇ ಬೇವಿನ ಮರಕ್ಕೆ ಹಗ್ಗ ಕಟ್ಟಿ ಆತ್ಮಹತ್ಯೆ ಮುಂದಾದಳು. ಮರ ಹತ್ತಿ ನೇಳು ಕುಣಿಕೆಯನ್ನು ಕುತ್ತಿಗೆ ಬಿಗಿದು ಜಿಗಿದೇ ಬಿಟ್ಟಳು.
*****
ಇಷ್ಟೆಲ್ಲ ನಡೆದರೂ ಮಂಜುವಿಗೆ ತಿಳಿದೇ ಇರಲಿಲ್ಲ. ಅವನು ಸಂಧ್ಯಾಳ ನೆನಪಿನಲ್ಲಿಯೇ ಮುಳುಗಿಹೋಗಿದ್ದ. ದೂರದಲ್ಲಿ ಯಾರೋ ಕೂಗಿ ಕರೆದು ಸಂಧ್ಯಾಳಿಗೆ ಏನೋ ಆಗಿದೆ ಎಂದು ಹೇಳಿದಾಗಲೇ ಮಂಜು ಎಚ್ಚರಗೊಂಡಿದ್ದ. ತಕ್ಷಣವೇ ಆ ವ್ಯಕ್ತಿ ಹೇಳಿದ ಸ್ಥಳಕ್ಕೆ ಓಡಿದ. ಬಿಸಿಲು ದಾರಿಯಲ್ಲಿ ಕಾಲು ಸುಡುತ್ತಿದ್ದರೂ ಆ ಕ್ಷಣ ಅವನದಲ್ಲಿ ಅದೆಂಥ ಧೈರ್ಯ ಬಂದಿತ್ತೋ ಯಾವುದನ್ನೂ ಲೆಕ್ಕಿಸದೆ ಓಡಿದ.
ಮರದ ಕೆಳಗೆ ಸಂಧ್ಯಾ ಮಲಗಿದ್ದಳು. ಮರಕ್ಕೆ ಕಟ್ಟಿದ್ದ ಹಗ್ಗ ತುಂಡಾಗಿತ್ತು. ಅಂಬುಲೆನ್ಸ್ ನಲ್ಲಿ ಬಂದ ಆರೋಗ್ಯ ಸಿಬ್ಬಂದಿ ಸಂಧ್ಯಾಳನ್ನು ತುಂಬಿಕೊಂಡು ಆಸ್ಪತ್ರೆಗೆ ಕರೆದೊಯ್ದರು. ಶೋಕದಿಂದ ಕುಸಿದು ಹೋದ ಮಂಜು ಅಲ್ಲೇ ಇದ್ದ ಗೆಳೆಯನ ಬೈಕ್ ಪಡೆದು ಅಂಬುಲೆನ್ಸ್ ಅನ್ನೇ ಹಿಂಬಾಲಿಸಿ ಆಸ್ಪತ್ರೆ ತಲುಪಿದ.
ಅಬುಲೆನ್ಸ್ ಶವಾಗಾರಕ್ಕೆ ಹೋಗುತ್ತದೆ ಎಂದುಕೊಂಡು ಆಸ್ಪತ್ರೆ ಹಿಂದಿನ ಶವಾಗಾರದ ಬಳಿ ಹೋದ. ಆದರೆ, ಅಂಬುಲೆನ್ಸ್ ತುರ್ತು ಚಿಕಿತ್ಸಾ ಘಟಕದ ಕಡೆ ಹೋಯಿತು. ಸಂಧ್ಯಾಳನ್ನು ಆಸ್ಪತ್ರೆ ಬೆಡ್ ಮೇಲೆ ಮಲಗಿಸಿದ ನರ್ಸ್ ಮತ್ತು ವೈದ್ಯರು ಏನೇನೊ ಚಿಕಿತ್ಸೆ ನೀಡಿದರು. ಸಂಧ್ಯಾಳ ತಂದೆಯ ಎದುರು ಬಾರಲಾಗದೆ ಮಂಜು ದೂರದಿಂದಲೇ ಎಲ್ಲವನ್ನು ನೋಡುತ್ತಿದ್ದ.
ಎರಡು ತಾಸಿನ ಬಳಿಕ ಸಂಧ್ಯಾಳಿಗೆ ಪ್ರಜ್ಞೆ ಬಂದಿತು. ಕುಟುಂಬದವರೆಲ್ಲ ನಿಟ್ಟುಸಿರು ಬಿಟ್ಟರು. ಮಂಜು ಸಂತೋಷಗೊಂಡ. ಮುಖ ಮೇಲೆತ್ತಿ ದೇವರನ್ನೊಮ್ಮೆ ನೆನೆಸಿದ. ಮಗಳ ಪ್ರೀತಿಗೆ ಸೋತ ತಂದೆಯು ಕೊಂಕು ಮಾತನಾಡುವ ಜನರಿಗಿಂತ ತನ್ನ ಮಗಳ ಜೀವನ, ಪ್ರೀತಿ ಮುಖ್ಯ ಎನ್ನುವುದನ್ನು ಅರಿತು ಮಂಜುನೊಂದಿಗೆ ಮಗಳ ಮದುವೆ ಮಾಡಿಸಿದ.
ಆದರೆ, ನೇಣು ಹಾಕಿಕೊಂಡ ಸಂಧ್ಯಾ ಬದುಕಿದ್ದು ಹೇಗೆ ಎನ್ನುವುದು ಮಂಜುಗೆ ದೊಡ್ಡ ಪ್ರಶ್ನೆಯಾಗಿತ್ತು. ಮೊದಲ ರಾತ್ರಿ ಸಂಧ್ಯಾಳಿಗೆ ಅವನು ಕೇಳಿದ ಮೊದಲ ಪ್ರಶ್ನೆಯೇ ಅದು. ಸಂಧ್ಯಾ ಉತ್ತರಿಸಿದಳು. ಸಾಯಬೇಕು ಎಂದು ತೆಂಗಿನ ನಾರಿನ ಬಳ್ಳಿಯೊಂದನ್ನು ಮರಕ್ಕೆ ಕಟ್ಟಿ ನೇಣು ಬಿಗಿದುಕೊಂಡು ಜಿಗಿದೆ. ಆದರೆ, ಬಳ್ಳಿ ತುಂಡಾಗಿ ಹೋಯಿತು. ಕೆಳಗೆ ಬಿದ್ದಾಗ ತಲೆಗೆ ಏನೊ ಬಡಿದಂತಾಯಿತು. ಎಚ್ಚರವಾದಾಗ ಆಸ್ಪತ್ರೆ ಬೆಡ್ ಮೇಲೆ ಇದ್ದೆ ಎಂದಳು. ಮಂಜು ನಕ್ಕು ನಕ್ಕು ಸುಸ್ತಾದ.
ಮುಕ್ತಾಯ