ಪೊಲೀಸ್ ಕೇಸಿನಿಂದ ಸಿಕ್ಕ ಪ್ರೇಯಸಿ

ಪೊಲೀಸ್ ಕೇಸಿನಿಂದ ಸಿಕ್ಕ ಪ್ರೇಯಸಿ

ಹಿಂದಿನ ಭಾಗ…. ಓದಿ: ಪತ್ರದಲ್ಲಿ ಬೆಸೆದ ಪ್ರೀತಿಗೆ ಮೊಬೈಲ್ ಅಂತರ

ಮಹೇಶ, ಕುಸುಮಾ ಸಂಪರ್ಕ ಕಳೆದುಕೊಂಡ ಮೇಲೆ ಸುಮಾರು ಮೂರು ತಿಂಗಳು ಇಬ್ಬರ ನಡುವೆ ಯಾವುದೇ ಸಂವಹನ ನಡೆದಿರಲಿಲ್ಲ. ಪತ್ರ ಬರೆಯದೆ, ಓದದೆ ಇಬ್ಬರ ಮನಸ್ಸು ಚಡಪಡಿಸುತ್ತಿತ್ತು. ನೋಡದೆ, ಮಾತನಾಡದೆ ಇದ್ದರೂ ಇಬ್ಬರ ನಡುವಿನ ಪ್ರೀತಿ ಘಾಡವಾಗುತ್ತ ಹೋಯಿತು.

ಕುಸುಮಾ ಬೇರೆ ಜಿಲ್ಲೆಗೆ ಹೋಗಿದ್ದರೂ ಅಲ್ಲಿಂದಲೇ ಅದೇ ದೇವಸ್ಥಾನಕ್ಕೆ ಪತ್ರ ಬರೆಯುತ್ತಿದ್ದಳು. ಆದರೆ, ಆ ಎಲ್ಲ ಪತ್ರಗಳು ದೇವಸ್ಥಾನದ ಕಚೇರಿಯಲ್ಲಿಯೇ ಬಿದ್ದಿರುತ್ತಿದ್ದವು. ಜಾತ್ರೆ ಸಮಯ ಬೇರೆ ಆಗಿದ್ದರಿಂದ ಯಾರೂ ಅದನ್ನು ಓದುವ ಗೋಜಿಗೆ ಹೋಗಿರಲಿಲ್ಲ. ಸಿಕ್ಕ ಒಬ್ಬ ಸ್ನೇಹಿತನನ್ನೂ ಕಳೆದುಕೊಂಡೆನಲ್ಲ ಎಂದು ಕುಸುಮಾ ಮರುಗಲು ಶುರು ಮಾಡಿದಳು. ಅವಳ ಹಾಸಿಗೆಗಳು ಕಣ್ಣೀರು ಹೀರಿ ಬೇಸತ್ತವು. ಸ್ನಾನದ ಕೋಣೆಗಳಲ್ಲಿ ಶವರ್ ನಿಂದ ಬೀಳುತ್ತಿದ್ದ ನೀರು ಕುಸುಮಾಳ ಕಣ್ಣೀರಿನೊಂದಿಗೆ ಹರಿದು ಹೋಗುತ್ತಿತ್ತು.

ಇತ್ತ ಮಹೇಶ ಕೂಡ ಚಡಪಡಿಕೆಯಲ್ಲಿ ಬಿದ್ದ. ಪ್ರತಿ ದಿನ ದೇವಸ್ಥಾನದ ಬಳಿಗೆ ಬಂದು ಅಂಚೆಯವನ ಬಳಿ ದೇವರ ಹೆಸರಿನಲ್ಲಿ ಬಂದ ಪತ್ರ ಕೇಳುತ್ತಿದ್ದ. ಆದರೆ, ಆ ಪತ್ರ ದೇವರ ಹೆಸರಿಗೆ ಬಂದಿದ್ದರಿಂದ ಅಂಚೆಯವನು ಹೊರಗಿನ ಯಾವ ವ್ಯಕ್ತಿಗೂ ಕೊಡದೆ ದೇವಸ್ಥಾನಕ್ಕೆ ಮುಟ್ಟಿಸುತ್ತಿದ್ದ.

ಹೇಗಾದರು ಮಾಡಿ ಕುಸುಮಾಳ ಹೊಸ ವಿಳಾಸ ಪತ್ತೆ ಮಾಡಬೇಕು ಎಂದು ಮಹೇಶ ಪ್ರಯತ್ನ ನಡೆಸುತ್ತಲೇ ಇದ್ದ. ಒಮ್ಮೆ ದೇವಸ್ಥಾನದ ಕಚೇರಿ ನುಗ್ಗುವ ಯತ್ನವೂ ಮಾಡಿದ್ದ. ಜಾತ್ರೆ ತಯಾರಿಯಲ್ಲಿ ದೇವಸ್ಥಾನದಲ್ಲಿ ಸಿಬ್ಬಂದಿ ಹೆಚ್ಚಿದ್ದರಿಂದ ಆಗುತ್ತಿರಲಿಲ್ಲ. ಖುಷಿಯ ಕ್ಷಣಗಳು ಮಾಯವಾಗಿ ಚಿಂತೆಗಳೇ ಹೆಗಲೇರಿದ್ದವು.

****

ಕುಸುಮಾ ಮಂಕಾಗಿ ಇರುವುದು ಆಕೆಯ ತಂದೆಗೆ ನೋಡಲು ಆಗಲಿಲ್ಲ. ಚಿಕ್ಕಮ್ಮನ ಕಿರುಕುಳಕ್ಕೆ ಆಕೆ ಹಾಗೆ ಇರಬೇಕು ಎಂದು ಭಾವಿಸಿ ಒಳಗೊಳಗೇ ಮರುಗುತ್ತಿದ್ದ. ಪತ್ನಿ ಭಯಕ್ಕೆ ಒಮ್ಮೆಯೂ ಮಗಳ ಪಕ್ಕದಲ್ಲಿ ಕುಳಿತು ಪ್ರೀತಿಯಿಂದ ಸಮಸ್ಯೆ ಆಲಿಸುವ ಧೈರ್ಯ ಮಾಡಲೇ ಇಲ್ಲ. ಅದು ಕುಸುಮಾಳಿಗೆ ಇನ್ನಷ್ಟು ವೇದನೆ ಕೊಡುತ್ತಿತ್ತು.

ಕೊನೆಗೆ ಒಂದು ದಿನ ಕುಸುಮಾಳೇ ಧೈರ್ಯ ಮಾಡಿ ತಂದೆಯ ಬಳಿ ಬಂದು ಕುಲದೇವರ ಮಂದಿರಕ್ಕೆ ಹೋಗಿ ಬರೋಣ ಎಂದು ಬೇಡಿದಳು. ಮೊದಲ ಬಾರಿಗೆ ಬೇಡಿಕೆ ಇಟ್ಟ ಮಗಳ ಆಸೆಗೆ ತಂದೆ ನಿರಾಶೆ ಮಾಡಲಿಲ್ಲ. ಮುಂದಿನ ವಾರವೇ ಕುಟುಂಬ ಸಮೇತ ಹೋಗೋಣ ಎಂದು ಭರವಸೆ ನೀಡಿದರು.
ವಿಷಯ ಹೆಂಡತಿಗೂ ಹೇಳಿದರು. ಮೊದಲು ಒಪ್ಪಿದ ಪತ್ನಿ, ಇದು ಕುಸುಮಾಳ ಬೇಡಿಕೆ ಎಂದು ತಿಳಿದ ಮೇಲೆ ವರಸೆ ಬದಲಾಯಿಸಿದಳು. ದೇವಸ್ಥಾನಕ್ಕೆ ಹೋಗುವ ಪ್ರವಾಸವೂ ರದ್ದಾಗಿ ಹೋಯಿತು. ಚಿಕ್ಕಮ್ಮನ ವರ್ತನೆಗೆ ಕುಸುಮ ಕಣ್ಣೀರು ಸುರಿಸುವುದು ಬಿಟ್ಟು ಬೇರೇನೂ ಮಾಡಲು ಆಗಲೇ ಇಲ್ಲ. ದೇವರನ್ನೇ ಶಪಿಸುತ್ತ ಆ ದಿನ ದುಃಖಿಸಿದಳು.

****

ಮಾರನೇ ದಿನ ದೇವಸ್ಥಾನದಲ್ಲಿ ಕಳ್ಳತನ ನಡೆದು ಹೋಗುತ್ತದೆ. ದೇವಸ್ಥಾನದ ಆಡಳಿತ ಕಚೇರಿಯ ಬೀಗ ಮುರಿದು ಅಲ್ಲಿದ್ದ ದೇಣಿಗೆ ಹಣವನ್ನು ಕಳ್ಳರು ದೋಚಿದ್ದರು. ಅದು ಪೊಲೀಸ್ ಕೇಸ್ ಆಗಿ ತನಿಖೆ ಶುರುವಾಗುತ್ತದೆ. ಪೊಲೀಸರು ದೇವಸ್ಥಾನದ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುತ್ತಾರೆ. ಕಳ್ಳತನ ನಡೆದ ದಿನದ ದೃಶ್ಯ ಬಿಟ್ಟು ಉಳಿದೆಲ್ಲ ದಿನದ ದೃಶ್ಯಗಳು ಅದರಲ್ಲಿ ಸೆರೆಯಾಗಿರುತ್ತದೆ.

ಸುಮ್ಮನೆ ಒಂದೆರಡು ಹಿಂದಿನ ದಿನಗಳ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಮಹೇಶ ಆಡಳಿತ ಕಚೇರಿ ಸಮೀಪವೇ ಸುಳಿದಾಡುತ್ತಿದ್ದ ದೃಶ್ಯ ಕಾಣಿಸುತ್ತದೆ. ಪೊಲೀಸರು ಮಹೇಶನನ್ನು ವಿಚಾರಣೆಗೆ ಒಳಪಡಿಸುತ್ತಾರೆ. ಆಗ ಮಹೇಶ ಎಲ್ಲ ವಿಷಯವನ್ನು ಪೊಲೀಸರಿಗೆ ತಿಳಿಸುತ್ತಾನೆ.

ಅವನ ಮಾತನ್ನು ಖಚಿತ ಮಾಡಕೊಳ್ಳಲು ಕಚೇರಿಯ ಸ್ಥಳಪರಿಶೀಲನೆಗೆ ಮಹೇಶನನ್ನು ಕರೆ ತರುತ್ತಾರೆ. ಅಲ್ಲೊಂದು ಮೂಲೆಯಲ್ಲಿ ಕುಸುಮಾ ಕಳುಹಿಸಿದ್ದ ಪತ್ರಗಳು ಇರುತ್ತವೆ. ಅದನ್ನು ಕೈಗೆತ್ತಿಕೊಂಡ ಮಹೇಶನಿಗೆ ಎಲ್ಲಿಲ್ಲದ ಸಂತೋಷ. ನಿಜ ತಿಳಿದು ಪೊಲೀಸರು ಮಹೇಶನನ್ನು ಬಿಡುಗಡೆ ಮಾಡುತ್ತಾರೆ.
ಕುಸುಮಾಳ ವಿಳಾಸ ಸಿಗುತ್ತಿದ್ದಂತೆಯೇ ಮಹೇಶ ತಕ್ಷಣ ಪತ್ರ ಬರೆಯುತ್ತಾನೆ. ಎರಡೇ ದಿನದಲ್ಲಿ ಪತ್ರ ಕುಸುಮಾಳ ಕೈ ಸೇರುತ್ತದೆ. ಮೊಬೈಲ್ ನಂಬರ್ ಸಿಕ್ಕ ಬಳಿಕವೇ ಕುಸುಮಾ, ಮಹೇಶನಿಗೆ ಫೋನ್ ಮಾಡಿ ಮಾತನಾಡುತ್ತಾಳೆ. ಆ ಕ್ಷಣ ಇಬ್ಬರೂ ಕುಣಿದು ಕುಪ್ಪಳಿಸುತ್ತಾರೆ. ಕೊನೆಗೆ ವಿಷಯ ಹಿರಿಯರ ವರೆಗೂ ಹೋಗಿ ಇಬ್ಬರ ವಿವಾಹವಾಗುತ್ತದೆ. ಮಹೇಶ, ಕುಸುಮಾ ಇಬ್ಬರೂ ಸುಖ ಜೀವನ ನಡೆಸುತ್ತಾರೆ. ಕೆಲ ದಿನಗಳ ಬಳಿಕ ದೇವಸ್ಥಾನದ ದೇಣಿಗೆ ಹಣ ಕದ್ದ ಕಳ್ಳರನ್ನೂ ಪೊಲೀಸರು ಬಂಧಿಸುತ್ತಾರೆ.

*** ಮುಗಿಯಿತು.

Trackbacks/Pingbacks

  1. ಪತ್ರದಲ್ಲಿ ಬೆಸೆದ ಪ್ರೀತಿಗೆ ಮೊಬೈಲ್ ಅಂತರ | - […] […]
  2. ಕುಟುಂಬದ ಬಿರುಕಿನಲ್ಲಿ ಮೊಳಕೆಯೊಡೆದ ಪ್ರೀತಿ | - […] ಹಿಂದಿನ ವಾರದ ಪ್ರೇಮ ಕತೆಭಾಗ-1 ಪತ್ರದಲ್ಲಿ ಬೆಸೆದ ಪ್ರೀತಿಗೆ ಮೊಬೈಲ್ ಅಂತರ ಭಾಗ-2 ಪೊಲೀಸ್ ಕೇಸಿನಿಂದ ಸಿಕ್ಕ ಪ್ರೇಯಸಿ […]

Leave a reply

Your email address will not be published. Required fields are marked *