ಫೇಸ್ ಬುಕ್ ಹ್ಯಾಕರ್ ಗಳಿಂದ ಬಚಾವಾಗಲು ಸರಳ ಸೆಟಿಂಗ್ಸ್

ಉತ್ತರ ಕನ್ನಡ: ಫೇಸ್ ಬುಕ್ ಹ್ಯಾಕ್ ಮಾಡಿ ಹಣ ದೋಚುವ ಹೊಸದೊಂದು ಜಾಲ ಪೊಲೀಸ್ ಇಲಾಖೆಯನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ದೊಡ್ಡದೊಂದು ಸವಾಲು ಸೃಷ್ಟಿಸಿದೆ.
ಫೇಸ್ ನಲ್ಲಿರುವ ಮಾಹಿತಿಯನ್ನು ಕದ್ದು ಮೆಸೆಂಜರ್ ಮೂಲಕ ಹಣ ಲೂಟಿ ಮಾಡಲಾಗುತ್ತಿದೆ. ಇದಕ್ಕೆ ಪೊಲೀಸರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡಲಾಗುತ್ತಿರುವುದು ಆತಂಕಕಾರಿ. ಈಗಾಗಲೇ ಇನ್ ಸ್ಪೆಕ್ಟರ್, ಎಎಸ್ಪಿ, ಎಸ್ಪಿ ಗಳ ಫೇಸ್ ಬುಕ್ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ. ಜನಸಾಮಾನ್ಯರ ಫೇಸ್ ಬುಕ್ ಕೂಡ ಹ್ಯಾಕ್ ಮಾಡಲಾಗಿದೆ.
ಕೆಲವೊಂದು ಟಿಪ್ಸ್ ಗಳನ್ನು ಅನುಸರಿಸಿದರೆ ಫೇಸ್ ಬುಕ್ ಖಾತೆಗಳು ಹ್ಯಾಕ್ ಆಗುವುದನ್ನು ತಡೆಯಬಹುದು. ಪ್ರತಿಯೊಬ್ಬರು ತಮ್ಮ ಫೇಸ್ ಬುಕ್ ನಲ್ಲಿ ಈ ಸೆಟ್ಟಿಂಗ್ಸ್ ಗಳನ್ನು ಮಾಡಿಕೊಂಡರೆ ಯಾರೂ ನಿಮ್ಮ ಫೇಸ್ ಬುಕ್ ಖಾತೆಗೆ ಕನ್ನ ಹಾಕಲು ಸಾಧ್ಯವಿಲ್ಲ. ಅದಕ್ಕಿಂತ ಮೊದಲು ಫೇಸ್ ಗಳು ಹೇಗೆ ಸುಲಭವಾಗಿ ಹ್ಯಾಕ್ ಆಗುತ್ತವೆ ಎನ್ನುವುದನ್ನು ತಿಳಿದುಕೊಳ್ಳುವುದು ಉತ್ತಮ.
ಹೇಗೆ ಹ್ಯಾಕ್ ಆಗುತ್ತವೆ?
ಫೇಸ್ ಬುಕ್ ಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ತಮ್ಮ ಪೂರ್ತಿ ಮಾಹಿತಿಯನ್ನು ಅಪ್ ಡೇಟ್ ಮಾಡಿರುತ್ತಾರೆ. ಹೊಸ ಕೆಲಸ, ಬಡ್ತಿ, ಪ್ರವಾಸ ಎಲ್ಲ ಮಾಹಿತಿ ಅಪ್ ಡೇಟ್ ಮಾಡುತ್ತೇವೆ. ಅಲ್ಲದೆ, ಫ್ರೆಂಡ್ ರಿಕ್ವೆಸ್ಟ್ ಬಂದಾಗ ಪರಿಶೀಲಿಸದೆ ಅಕ್ಸೆಪ್ಟ್ ಮಾಡುತ್ತೇವೆ. ಇಂಥ ಫೇಸ್ ಬುಕ್ ಖಾತೆಗಳನ್ನು ತೆರೆದಾಗ ಹ್ಯಾಕರ್ ಗಳಿಗೆ ಸುಲಭವಾಗಿ ಮಾಹಿತಿಗಳು ಸಿಗುತ್ತವೆ.
ಅವರು ಫೇಸ್ ಬುಕ್ ಪ್ರೊಫೈಲ್ ಫೋಟೊಗಳನ್ನು ಕದ್ದು, ಅದೇ ರೀತಿ ಹೋಲುವ ಇನ್ನೊಂದು ಫೇಸ್ ಬುಕ್ ಖಾತೆ ಸೃಷ್ಟಿಸಿ ನಮ್ಮ ಫೇಸ್ ಬುಕ್ ಸ್ನೇಹಿತರಿಗೆ ಮೋಸ ಮಾಡುತ್ತಾರೆ. ಇಂಥ ಕೆಲಸಕ್ಕೆ ಅವರು ಸೆಕೆಂಡ್ ಹ್ಯಾಂಡ್ ಮೊಬೈಲ್, ಯಾರದ್ದೋ ಹೆಸರಿನ ಸಿಮ್ ಕಾರ್ಡ್ ಬಳಸುತ್ತಾರೆ. ಕೆಲಸವಾದ ಬಳಿಕ ಅದನ್ನೆಲ್ಲ ಎಸೆದು ಬಿಡುತ್ತಾರೆ. ಹಾಗಾಗಿ ಅವರು ತಕ್ಷಣವೇ ಪೊಲೀಸರ ಕೈಗೆ ಸಿಕ್ಕಿ ಬೀಳುವುದಿಲ್ಲ.
ಈ ತಪ್ಪು ಮಾಡಲೇ ಬೇಡಿ
ಫೇಸ್ ಬುಕ್ ನಿರ್ವಹಿಸುವಾಗ ಅದರಲ್ಲಿ ಪೂರ್ತಿ ಮಾಹಿತಿ ಅಪ್ ಲೋಡ್ ಮಾಡುವುದು ಸುರಕ್ಷಿತವಲ್ಲ.
ನಿಮ್ಮ ಮನೆಯ ಅಥವಾ ಇನ್ಯಾವುದೇ ಹೆಣ್ಣುಮಕ್ಕಳ ಫೋಟೊವನ್ನು ಫೇಸ್ ಬುಕ್ ನಲ್ಲಿ ಹಾಕುವುದು ಅಪಾಯಕಾರಿ.
ಫೋಟೊಗಳನ್ನು ಹಂಚಿಕೊಳ್ಳುವಾಗಲೂ ಅದರ ಕ್ವಾಲಿಟಿ ಕಡಿಮೆ ಅಥವಾ ಎಡಿಟ್ ಮಾಡಲಾಗದಂತೆ ನೋಡಿಕೊಳ್ಳಿ.
ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡುವ ಮೊದಲು ಅವರು ಯಾರೆಂದು ಮೊದಲು ತಿಳಿದುಕೊಳ್ಳಿ.
ಪರಿಚಯಸ್ಥರು ಅಥವಾ ನಂಬಿಕೆ ಬರುವಂಥ ವ್ಯಕ್ತಿಗಳೊಂದಿಗೆ ಮಾತ್ರ ಫೇಸ್ ಬುಕ್ ಫ್ರೆಂಡ್ಶಿಪ್ ಬೆಳೆಸಬೇಕು.
ಫೇಸ್ ಬುಕ್ ಮಾಹಿತಿ ಗೌಪ್ಯವಾಗಿಡುವುದು ಹೇಗೆ?
ಬಳಕೆದಾರರ ಮಾಹಿತಿ ಗೌಪ್ಯತೆ ಕಾಪಾಡುವ ಸಲುವಾಗಿಯೇ ಫೇಸ್ ಬುಕ್ ಒಂದಷ್ಟು ಸೆಟಿಂಗ್ಸ್ ಗಳನ್ನು ನೀಡಿದೆ. ಅದರಲ್ಲಿ ಎರಡು ಸೆಟ್ಟಿಂಗ್ಸ್ ಗಳನ್ನು ಬದಲಾಯಿಸಿಕೊಂಡರೆ ಫೇಸ್ ಬುಕ್ ಬಹುತೇಕ ಸುರಕ್ಷಿತವಾದಂತೆಯೇ.
- ಪ್ರೊಫೈಲ್ ಫೋಟೊ ಸೆಕ್ಯೂರ್ ಮಾಡಿ. ಅಂದರೆ ಅದನ್ನು ಕಾಫಿ, ಡೌನ್ ಲೋಡ್ ಮಾಡದಂತೆ ಭದ್ರಪಡಿಸುವುದು.
- ಪ್ರೊಫೈಲ್ ಮಾಹಿತಿ ಅಪರಿಚಿತರಿಗೆ ಕಾಣದಂತೆ ಸೆಟಿಂಗ್ಸ್ ಬದಲಾಯಿಸುವುದು. ಅಂದರೆ, ನಮ್ಮ ಫೇಸ್ ಬುಕ್ ಮಾಹಿತಿ, ಪೋಸ್ಟ್ ಗಳು ನಮ್ಮ ಫೇಸ್ ಬುಕ್ ಸ್ನೇಹಿತರಿಗೆ ಮಾತ್ರ ಕಾಣಿಸುತ್ತದೆ.
ಪ್ರೊಫೈಲ್ ಫೋಟೊ ಸೆಕ್ಯೂರ್ ಮಾಡುವ ಹಂತಗಳು
- ಮೊಬೈಲ್ ನಲ್ಲಿ ಫೇಸ್ ಬುಕ್ ಆ್ಯಪ್ ಓಪನ್ ಮಾಡಿದ ತಕ್ಷಣ ಬಲಬದಿಯಲ್ಲಿ ಕಾಣಿಸುವ ಮೂರು ಗೆರೆಗಳ ಮೇಲೆ ಒತ್ತಿ.
- ಪ್ರೊಫೈಲ್ ನೇಮ್ ಮೇಲೆ ಒತ್ತಿ. ಪ್ರೊಫೈಲ್ ಪುಟ ತೆರೆದುಕೊಳ್ಳುತ್ತದೆ.
- ಪ್ರೊಫೈಲ್ ಪುಟದಲ್ಲಿ ಕಾಣಿಸುವ ಪ್ರೊಫೈಲ್ ಚಿತ್ರದ ಮೆಲೆ ಒತ್ತಿ.
- ಕೆಲವೊಂದು ಆಯ್ಕೆಗಳು ತೆರೆದುಕೊಳ್ಳುತ್ತವೆ.
- Turn on Profile Picture Guard ಎನ್ನುವ ಆಯ್ಕೆಯನ್ನು ಒತ್ತಿ.
- ಬಳಿಕ ತೋರಿಸುವ ಆಯ್ಕೆಯಲ್ಲಿ Next ನಂತರ Save ಮಾಡಿ.
(ಇಷ್ಟು ಬದಲಾವಣೆ ಬಳಿಕ ನಿಮ್ಮ ಪ್ರೊಫೈಲ್ ಫೋಟೊವನ್ನು ಯಾರೂ ಕಾಫಿ ಮಾಡಲು ಆಗುವುದಿಲ್ಲ.)
ಪ್ರೊಫೈಲ್ ಮಾಹಿತಿಗೆ ಬೀಗಹಾಕುವ ಹಂತಗಳು
- ಮೊಬೈಲ್ ನಲ್ಲಿ ಫೇಸ್ ಬುಕ್ ಆ್ಯಪ್ ಓಪನ್ ಮಾಡಿದ ತಕ್ಷಣ ಬಲಬದಿಯಲ್ಲಿ ಕಾಣಿಸುವ ಮೂರು ಗೆರೆಗಳ ಮೇಲೆ ಒತ್ತಿ.
- ಪ್ರೊಫೈಲ್ ನೇಮ್ ಮೇಲೆ ಒತ್ತಿ. ಪ್ರೊಫೈಲ್ ಪುಟ ತೆರೆದುಕೊಳ್ಳುತ್ತದೆ.
- Add to Story ಎನ್ನುವ ನೀಲಿ ಬಣ್ಣದ ಬಟನ್ ಪಕ್ಕದಲ್ಲಿರುವ ಮೂರು ( … ) ಡಾಟ್ ಗಳನ್ನು ಒತ್ತಿ.
- ಕೆಲವಷ್ಟು ಆಯ್ಕೆಗಳು ತೆರೆದುಕೊಳ್ಳುತ್ತವೆ.
- ಅದರಲ್ಲಿ Lock Profile ಆಯ್ಕೆ ಒತ್ತಿ.
- ಮತ್ತೊಂದು ಪೇಜ್ ಓಪನ್ ಆಗಿ Lock Your Profile ಎನ್ನುವ ನೀಲಿ ಬಣ್ಣದ ಬಟನ್ ಕಾಣಿಸುತ್ತದೆ. ಅದನ್ನು ಒತ್ತಿ.
- ಬಳಿಕ OK ಬಟನ್ ಒತ್ತಿದರೆ ನಿಮ್ಮ ಪ್ರೊಫೈಲ್ ಮಾಹಿತಿ ಲಾಕ್ ಆಗಿರುತ್ತದೆ.
(ಇಷ್ಟು ಮಾಡಿದರೆ ನಿಮ್ಮ ಪ್ರೊಫೈಲ್ ಮಾಹಿತ ಅಪರಿಚಿತರಿಗೆ ಕಾಣಿಸುವುದಿಲ್ಲ.)
ಬೇರೆ ಯಾವುದಾದರು ಗೊಂದಲಗಳು ಇದ್ದರೆ ಕೆಳಗಡೆ ಕೊಟ್ಟಿರುವ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಬಹುದು. ಅದರ ಬಗ್ಗೆ ಮಾಹಿತಿ ನೀಡುತ್ತೇವೆ.

application