ನವದೆಹಲಿ: ಯಮರೂಪಿ, ಭೀಕರ ಚಳಿಗೆ ರಾಷ್ಟ್ರ ರಾಜಧಾನಿ ನವದೆಹಲಿ ಅಕ್ಷರಶಃ ತತ್ತರಿಸಿ ಹೋಗಿದೆ. ಇಂದು ದೆಹಲಿಯ ಸಫ್ದರ್ ಜಂಗ್ ನಲ್ಲಿ ಕನಿಷ್ಠ ತಾಪಮಾನ 1.9 ಡಿಗ್ರಿ ಸೆಲ್ಸಿಯಸ್​ಗೆ ಕುಸಿದಿದೆ.

ಈ ಹಿನ್ನೆಲೆಯಲ್ಲಿ ಇಂದಿನಿಂದ ಜನವರಿ15ರವರೆಗೆ ದೆಹಲಿಯ ಎಲ್ಲಾ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ಬಗ್ಗೆ ದೆಹಲಿ ಸರ್ಕಾರದ ಸೂಚನೆಯಂತೆ ಶಿಕ್ಷಣ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿದೆ.

9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪರ್ಯಾಯ ಕ್ಲಾಸ್ ಗಳು ನಡೆಯಲಿವೆ. ರಜೆ ಇದ್ದರು ಶೈಕ್ಷಣಿಕ ಕಾರ್ಯಕ್ಷಮತೆ ಬಗ್ಗೆ ಗಮನಹರಿಸಲಾಗುವುದು ಎಂದು ಶಿಕ್ಷಣ ನಿರ್ದೇಶನಾಲಯ ತಿಳಿಸಿದೆ. ಇನ್ನು ಸರ್ಕಾರಿ ಶಾಲೆಗಳು ಇದಕ್ಕೂ ಮುಂಚೆ ಚಳಿಗಾಲದ ರಜೆ ನೀಡಿವೆ.

ದೆಹಲಿ ಸೇರಿದಂತೆ ಪಂಜಾಬ್, ಹರಿಯಾಣ, ಛಂಡಿಘರ, ಉತ್ತರ ರಾಜಸ್ಥಾನ ಹಾಗೂ ಉತ್ತರ ಪ್ರದೇಶಗಳಲ್ಲಿ ದಟ್ಟವಾದ ಮಂಜು ಆವರಿಸಿರುವುದರಿಂದ ಜನ ಜೀವನ ತೀವ್ರ ಚಳಿಯಿಂದ ತತ್ತರಿಸಿ ಹೋಗಿದ್ದು ಯಾರೂ ಮನೆಯಿಂದ ಹೊರಬರುತ್ತಿಲ್ಲ.

20 ವಿಮಾನಗಳ ಹಾರಾಟ ಸ್ಥಗಿತವಾಗಿದೆ. 42 ರೈಲುಗಳ ಸಂಚಾರದಲ್ಲೂ ವ್ಯತ್ಯಯವಾಗಿದೆ ಎಂದು ಉತ್ತರ ರೈಲ್ವೆ ವಕ್ತಾರರು ತಿಳಿಸಿದ್ದಾರೆ. ಚಳಿ ಹೆಚ್ಚಾಗುತ್ತಲೆ ಇದ್ದು ಇನ್ನೂ 2 ದಿನಗಳವರೆಗೆ ಪರಿಸ್ಥಿತಿ ವಿಕೋಪಕ್ಕೆ ತೆರಳುವ ಸಾಧ್ಯತೆ ಇರುವುದರಿಂದ ಜನರು ಎಚ್ಚರವಹಿಸಬೇಕು ಎಂದು ಸರ್ಕಾರ ಮನವಿಮಾಡಿದೆ.