
ಬಾಣಂತಿ ಸಾವಿನ ಪ್ರಕರಣ: ಹೋರಾಟಕ್ಕೆ ಪಕ್ಷಾತೀತ ಬೆಂಬಲ

ಕಾರವಾರ: ಸರ್ವೋದಯ ನಗರದ ಬಾಣಂತಿ ಗೀತಾ ಬಾನಾವಳಿಕರ ಸಾವಿನ ಪ್ರಕರಣಕ್ಕೆ ಸಂಬಧಿಸಿದಂತೆ ತಪ್ಪಿತಸ್ಥ ವೈದ್ಯರ ವಿರುದ್ಧ ಕಾನೂನು ಕ್ರಮಗಳಾಗಬೇಕೆಂದು ವಿವಿಧ ರಾಜಕೀಯ ಪ್ರತಿನಿಧಿಗಳು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಈ ಬಗ್ಗೆ ಇಂದು ಹೇಳಿಕೆ ನೀಡಿರುವ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿ ಬಿಜೆಪಿಯ ರೂಪಾಲಿ ನಾಯ್ಕ ಅವರು ಬಾಣಂತಿ ಗೀತಾ ಬಾನಾವಳಿಕರ ಸಾವಿಗೆ ಶಸ್ತ್ರಕ್ರಿಯೆ ನಡೆಸಿದ ವೈದ್ಯರೇ ನೇರ ಕಾರಣರಾಗಿದ್ದು, ಅವರ ಮೇಲೆ ಕ್ರಮ ವಹಿಸುವಂತೆ ಆಕೆಯ ಪತಿ, ಕುಟುಂಬಸ್ಥರು ಸೇರಿದಂತೆ ಸರ್ವೋದಯನಗರದ ನಿವಾಸಿಗಳು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಈ ದೂರನ್ನು ಗಂಭೀರವಾಗಿ ಪರಿಗಣಿಸಿ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಅಪರಾಧಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಆಕೆಯ ಸಾವಿಗೆ ಹಾಗೂ ಕುಟುಂಬದವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಶಾಸಕಿ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡೆ ಹಾಗೂ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಚೈತ್ರಾ ಕೊಠಾರಕರ ಅವರು, ಬಾಣಂತಿ ಸಾವಿನ ಆರೋಪ ಎದುರಿಸುತ್ತಿರುವ ಜಿಲ್ಲಾ ಸರ್ಜನ್ ಅವನ್ನು ತಕ್ಷಣ ಅಮಾನತು ಮಾಡಬೇಕು ಅಥವಾ ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮೃತ ಬಾಣಂತಿಯ ಕುಟುಂಬದವರ ಹೋರಾಟಕ್ಕೆ ನನ್ನ ಬೆಂಬಲ ಇದೆ. ಕೂಡಲೇ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಸಾವಿನ ಪ್ರಕರಣವನ್ನು ಸೂಕ್ಷ್ಮವಾಗಿ ತನಿಖೆ ಮಾಡಿ ಘಟನೆಗೆ ಕಾರಣರಾದ ಎಲ್ಲರ ಮೇಲೆಯೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ವೋದಯನಗರ ವಾರ್ಡ್ ಗೆ ಸಂಬಂಧಿಸಿದ ನಗರಸಭೆ ಸದಸ್ಯೆ ರೇಶ್ಮಾ ಮಾಳ್ಸೇಕರ, ಕಿಮ್ಸ್ ವೈದ್ಯರ ನಿರ್ಲಕ್ಷ್ಯದ ಬಗ್ಗೆ ಈ ಹಿಂದೆಯೂ ಹಲವಾರು ಬಾರಿ ಜನರು ನನ್ನ ಬಳಿ ಸಮಸ್ಯೆ ಹೇಳಿಕೊಂಡಿದ್ದರು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕ್ರಮವಾಗಲೇ ಬೇಕು. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನಿಷ್ಪಕ್ಷಪಾತ ತನಿಖೆ ನಡೆಸಿ ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕನ್ನಡ ವಾಟಾಳ್ ಪಕ್ಷದ ಜಿಲ್ಲಾಧ್ಯಕ್ಷ ರಾಘು ನಾಯ್ಕ, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈಗಾಗಲೇ ಕಿಮ್ಸ್ ವ್ಯವಸ್ಥೆಯ ಬಗ್ಗೆ ಹಲವಾರು ದೂರುಗಳಿವೆ. ಈ ಬಾರಿ ಮೃತಪಟ್ಟ ಬಾಣಂತಿ ಮಹಿಳೆಯ ಕುಟುಂಬಸ್ಥರು ದೂರು ನೀಡಿದ್ದು ಘಟನೆಯ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಘಟನೆ ಏನು?
ಕಾರವಾರದ ಸರ್ವೋದಯ ನಗರದ ಗೀತಾ ಶಿವನಾಥ ಬಾನಾವಳಿ ಆಗಸ್ಟ್ 31ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಈ ಮೊದಲೇ ಓರ್ವ ಗಂಡು ಮಗುವಿನ ತಾಯಿಯಾಗಿದ್ದ ಈಕೆಯು ಎರಡು ಮಕ್ಕಳಾಗಿರುವ ಕಾರಣ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ತೀರ್ಮಾನಿಸಿದ್ದರು.
ಸಾಮಾನ್ಯ ಹೆರಿಗೆಯೇ ಆಗಿದ್ದ ಹಿನ್ನಲೆಯಲ್ಲಿ 3 ದಿನಗಳ ಬಳಿಕ ಅಂದರೆ ಸೆಪ್ಟೆಂಬರ್ 3 ರಂದು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಆಪರೇಶನ್ ಥೇಟರ್ಗೆ ಕರೆದೊಯ್ಯಲಾಗಿತ್ತು. ಆದರೆ ಕೆಲವು ಸಮಯದ ಬಳಿಕ ಆಕೆಗೆ ಅನಸ್ತೆಶಿಯಾ ಅಟ್ಯಾಕ್ ಆಗಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದರು.
ಘಟನೆಯಿಂದ ನೊಂದ ಕುಟುಂಬದವರು ಆಕೆಯ ಸಾವಿಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರೇ ಕಾರಣ ಎಂದು ಆರೋಪಿಸಿ, ಅವರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದರು. ಬಳಿಕ ಸೆ.5 ರಂದು ಆಕೆಯ ಕುಟುಂಬಸ್ಥರು, ವಿವಿಧ ಸಂಘಟನೆಗಳು ಹಾಗೂ ಸರ್ವೋದಯ ನಗರದ ಜನತೆ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ ಬಾಣಂತಿ ಸಾವಿಗೆ ಕಾರಣವಾದವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ದೂರು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಬಾಣಂತಿ ಸಾವಿನ ಸಮಗ್ರ ತನಿಖೆ ನಡೆಸಲು ಸೆ.5 ರಂದು ಜಿಪಂ ಸಿಇಓ ನೇತೃತ್ವದಲ್ಲಿ 5 ಅಧಿಕಾರಿಗಳ ತಂಡವನ್ನು ರಚಿಸಿದ್ದು 10 ದಿನಗಳೊಳಗೆ ವರದಿ ನೀಡುವಂತೆ ಸುಚನೆ ನೀಡಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.