Select Page

ಮಗನ ಅಂತ್ಯಕ್ರಿಯೆಗೆ ಸ್ಮಶಾನದಲ್ಲಿ ಅರೆಸುಟ್ಟ ಕಟ್ಟಿಗೆ ಆರಿಸಿದ ತಾಯಿ; ಕರಳು ಹಿಂಡುವ ಘಟನೆ

ಮಗನ ಅಂತ್ಯಕ್ರಿಯೆಗೆ ಸ್ಮಶಾನದಲ್ಲಿ ಅರೆಸುಟ್ಟ ಕಟ್ಟಿಗೆ ಆರಿಸಿದ ತಾಯಿ; ಕರಳು ಹಿಂಡುವ ಘಟನೆ

ಸತ್ಯಹರೀಶ್ಚಂದ್ರನ ಪತ್ನಿ ಶೈವ್ಯ ತನ್ನ ಮಗ ರೋಹಿತಾಶ್ವನ ಶವ ಸಂಸ್ಕಾರಕ್ಕೆ ಹಣ ಇಲ್ಲದೆ ಸ್ಮಶಾನದಲ್ಲಿ ಪರದಾಡಿದ ಬಗ್ಗೆ ಕೇಳಿದ್ದೇವೆ. ಅದೆಷ್ಟೋ ಸಾವಿರ ವರ್ಷಗಳ ಹಿಂದೆ ನಡೆದಿತ್ತು ಎನ್ನಲಾದ ಆ ಕರುಣಾಜನಕ ಘಟನೆ ಕಲಿಯುಗದಲ್ಲಿ ಮತ್ತೊಮ್ಮೆ ನಡೆದೇ ಬಿಟ್ಟಿದೆ.

ಹೌದು, ಕೊರೊನಾ ಲಾಕ್ ಡೌನ್ ನಲ್ಲಿ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ಸ್ಮಶಾನವೊಂದರಲ್ಲಿ ತಾಯಿಯೊಬ್ಬಳು ಮಗನ ಅಂತ್ಯ ಸಂಸ್ಕಾರ ನಡೆಸಲು ಪರಿತಪಿಸಿದ ಪರಿ ಕೇಳಿದರೆ ಕಣ್ಣೀರು ಬರುತ್ತದೆ. ಅಣ್ಣ ಚಿತೆಗೆ ಸ್ವತಃ ತಂಗಿಯೇ ಕೊಳ್ಳಿ ಇಟ್ಟ ಆ ಘಟನೆ ಭೀಕರ.

ಆಸ್ಪತ್ರೆಯಲ್ಲಿ ಮೃತಪಟ್ಟ ಮಗನ ದೇಹವನ್ನು ವೈದ್ಯಕೀಯ ಸಿಬ್ಬಂದಿ ಸ್ಮಶಾನದಲ್ಲಿ ತಂದು ಇಟ್ಟಿದ್ದರು. ಮೃತ ದೇಹವನ್ನು ಊರಿಗೆ ತೆಗೆದುಕೊಂಡು ಹೋಗಲು ಅವರ ಬಳಿ ಹಣವೂ ಇಲ್ಲ. ಕೈ ಯಲ್ಲಿ ಇರುವುದು ಕೇವಲ 12 ರೂಪಾಯಿ. ಸಹಾಯ ಕೇಳೋಣ ಎಂದರೂ ಲಾಕ್ ಡೌನ್. ರಸ್ತೆ, ಬೀದಿಯಲ್ಲಿ ಯಾರೂ ಇಲ್ಲ.

ಇದ್ದೊಬ್ಬ ಮಗನ ಶವ ಸಂಸ್ಕಾರಕ್ಕೂ ಪರದಾಡಿದ ಆ ತಾಯಿ ಕೊನೆಗೆ ದಾರಿ ಇಲ್ಲದೆ, ಸ್ಮಶಾನದಲ್ಲಿ ಅರೆ ಬರೆ ಬೆಂದಿದ್ದ ಕಟ್ಟಿಗೆಗಳನ್ನು ಆರಿಸುತ್ತಿದ್ದಳು. ಮಗಳು ಸಹ ಕಣ್ಣೀರಿಡುತ್ತಲೇ ಅಣ್ಣನ ಚಿತೆಗೆ ಅರೆಸುಟ್ಟ ಕಟ್ಟಿಗೆಗಳನ್ನು ಕೂಡಿಸುತ್ತಿದ್ದಳು.

ಸ್ಮಶಾನದಲ್ಲಿ ಶವಸಂಸ್ಕಾರ ನಡೆಸಲಾಗದೆ ಪರಿತಪಿಸಿದ ತಾಯಿ, ಮಗಳು.

ಒಂದೆಡೆ ಹೆತ್ತ ಕರುಳು, ಮತ್ತೊಂದೆಡೆ ಸಹೋದರ ವಾತ್ಸಲ್ಯ. ಕೊನೆಗಾಲದ ಋಣ ತೀರಿಸುವುದಕ್ಕೂ ಆಗದಷ್ಟು ಕಠೋರ ಪರಿಸ್ಥಿತಿಯಲ್ಲಿ ಸಿಲುಕಿದ ಆ ತಾಯಿ, ಮಗಳ ಸ್ಥಿತಿ ಎಂಥವರನ್ನೂ ಮರುಗುವಂತೆ ಮಾಡುತ್ತಿತ್ತು. ಮಗನ ಚಿತೆಗೆ ಬೆಂಕಿ ಇಡಲು ಕುಟುಂಬಸ್ಥರಿಲ್ಲ. ಕಣ್ಣೀರಿಡುವುದಕ್ಕೂ ಬಂದುಗಳಿಲ್ಲ. ಇಂಥ ಸ್ಥಿತಿಯಲ್ಲಿ ತಂಗಿಯೇ ಅಣ್ಣನ ಚಿತೆಗೆ ಕೊಳ್ಳಿ ಇಟ್ಟು ಋಣ ತೀರಿಸುವ ಸ್ಥಿತಿ ಯಾರಿಗೂ ಬಾರದಿರಲಿ.

ಪೂರ್ತಿ ಘಟನೆ ಏನು?
ಚಿಕ್ಕೋಡಿ ತಾಲೂಕಿನ ಕೋಥಳಿ ಗ್ರಾಮದ ಸಾಗರ್ ಸಿಂಘೆ (32) ಎನ್ನುವ ಅಂಗವಿಕಲ ಯುವಕ ಶಸ್ತ್ರ ಚಿಕಿತ್ಸೆ ಫಲಕಾರಿಯಾಗದೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದನು. ಬೆಳಗಾವಿಯಿಂದ ಚಿಕ್ಕೋಡಿ ಸುಮಾರು 72 ಕಿ.ಮೀ. ದೂರ ಇದೆ.

ಬೆಳಗಾವಿಯಿಂದ ಊರಿಗೆ ತೆರಳಲು ಹಣ ಇಲ್ಲದೇ ಇದ್ದಾಗ ಸಹಾಯ ಮಾಡುವಂತೆ ತಾಯಿ, ಮಗಳು ಇಬ್ಬರೂ ಆಸ್ಪತ್ರೆಯಲ್ಲಿಯೇ ಕಣ್ಣೀರಿಟ್ಟಿದ್ದಾರೆ. ಆದರೆ, ಕೊರೊನಾ ಭಯಕ್ಕೆ ಯಾರೂ ನೆರವು ನೀಡಲು ಮುಂದಾಗಲೇ ಇಲ್ಲ. ಪರಿಸ್ಥಿತಿಯ ಆಟಕ್ಕೆ ತಾಯಿ, ಮಗಳಿಗೆ ತಕ್ಷಣಕ್ಕೆ ಸಮಾಜ ಸೇವಕರ ನೆರವೂ ಸಿಗಲಿಲ್ಲ.

ಹೇಗೊ ಜಿಲ್ಲಾಸ್ಪತ್ರೆ ಸಿಬ್ಬಂದಿ ಶವವನ್ನು ಆಸ್ಪತ್ರೆಯ ಅಂಬುಲೆನ್ಸ್ ನಲ್ಲಿ ಸುಮಾರು 2 ಕಿ.ಮೀ. ದೂರದ ಸದಾಶಿವನಗರ ಎನ್ನುವ ಸ್ಮಶಾನಕ್ಕೆ ತಂದು ಬಿಟ್ಟಿದ್ದರು. ಪುತ್ರಶೋಕದಲ್ಲಿ ದುಃಖಿಸುತ್ತಿದ್ದ ತಾಯಿ ಹೃದಯ ಪರಿಸ್ಥಿತಿಯ ಅಸಹಾಯಕತೆಗೆ ಮಮ್ಮಲ ಮರುಗುತ್ತಿತ್ತು.

ಸ್ಮಶಾನದಲ್ಲಿ ಕಟ್ಟಿಗೆ ಪಡೆಯಲು ಸಾವಿರ ರೂ. ಹಣ ಕೊಡಬೇಕು. ಆದರೆ, ತಾಯಿ, ಮಗಳ ಬಳಿ ಇದ್ದಿದ್ದು, ಕೇವಲ 12 ರೂ. ಸಹಾಯ ಬೇಡುವುದಕ್ಕೂ ಅಲ್ಲಿ ಯಾರೂ ಇರಲಿಲ್ಲ. ದಾರಿ ತೋಚದೆ ಇಬ್ಬರೂ ಶವ ಸಂಸ್ಕಾರಕ್ಕೆ ಮುಂದಾದರು.

ಬೇರೆ ಶವಗಳನ್ನು ಸುಟ್ಟು ಅರೆಬರೆ ಬೆಂದಿದ್ದ ಕಟ್ಟಿಗೆಗಳನ್ನೇ ತಾಯಿ, ಮಗಳು ಸಂಗ್ರಹಿಸುತ್ತಿದ್ದರು. ತಾಯಿ, ಮಗಳ ಈ ಸಂಕಟಕ್ಕೆ ಸ್ಮಶಾನವೂ ಮೌನವಾಗಿ ಬಿಟ್ಟಿತ್ತು. ಯಾರನ್ನೋ ಸುಟ್ಟಿದ್ದ ಕಟ್ಟಿಗೆಗಳಲ್ಲಿಂದಲೇ ಮಗನನ್ನು ಸುಡಬೇಕು ಎನ್ನುವಷ್ಟರಲ್ಲಿಯೇ ಕೆಲ ಸಮಾಜಸೇವಕರು ಅಲ್ಲಿಗೆ ಬಂದರು.

ಬೇರೆ ಕಟ್ಟಿಗೆ ಕೊಡಿಸಿ ಮಗನ ಅಂತ್ಯಸಂಸ್ಕಾರ ನಡೆಸಲು ಆ ತಾಯಿಗೆ ನೆರವಾದರು. ತಂಗಿಯೇ ಅಣ್ಣನ ಚಿತೆಗೆ ಕೊಳ್ಳಿ ಇಟ್ಟು ಅಂತಿಮ ವಿಧಿವಿಧಾನ ಮುಗಿಸಿದರು. ಕೊನೆಗೆ ಅದೇ ಸಮಾಜಸೇವಕರು ಆ ತಾಯಿ, ಮಗಳನ್ನು ಊರು ಸೇರಿಸಲು ಮುಂದಾದರು. ಕೊನೆಗೆ ವಿಷಯ ತಿಳಿದ ಬೆಳಗಾವಿ ಎಸ್.ಪಿ. ಲಕ್ಷ್ಮಣ ನಿಂಬರಗಿ ಅವರು ಖುದ್ದಾಗಿ ಸ್ಥಳಕ್ಕೆ ಬಂದು ಪೊಲೀಸ್ ವಾಹನದ ಮೂಲಕ ಇಬ್ಬರನ್ನೂ ಊರಿಗೆ ತಲುಪಿಸುವ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು.

Leave a reply

Your email address will not be published. Required fields are marked *