
ಮಾರಿ ರೋಗಕ್ಕೆ ಬ್ಯಾಟಿ ಬಲಿಯ ನೆತ್ತರ ಕತೆ

ಮುತ್ತಲಕೇರಿ ಕನಿಷ್ಠ ಮೂಲ ಸೌಲಭ್ಯಗಳೂ ಇರದ ಜಿಲ್ಲೆಯ ಕಡೆ ಊರು. ಭೀಕರ ಮಹಾಮಾರಿ ಕಾಲರಾ ಪ್ಲೇಗ್ ರೋಗಕ್ಕೆ ಇಡೀ ಊರಿಗೆ ಊರೇ ತತ್ತರಿಸಿ ಹೋಗಿತ್ತು. ಇಡೀ ರಾಜ್ಯದ ತುಂಬ ಗಮನ ಸೆಳೆದ ಮುತ್ತಲಕೇರಿಯಲ್ಲಿ ಈ ಮಹಾಮಾರಿಗೆ ಸಿಕ್ಕು ಸತ್ತವರ ಸಂಖ್ಯೆ ಹನ್ನೆರಡಕ್ಕೇರಿತ್ತು. ಇದಲ್ಲದೇ ನಿತ್ಯ ವಾಂತಿ ಬೇಧಿಯಿಂದ ಬಳಲುವವರ ಸಂಖ್ಯೆಯೂ ಹೆಚ್ಚಾಗುತ್ತಲೇ ಇತ್ತು. ಸತ್ತ ಹೆಣ ಹೂಳಲು ಸಹ ಜಾಗವಿಲ್ಲದೇ ಕೇರಿಯ ಜನ ಪರದಾಡಿದ್ದರು.
ಸೂತಕದ ಛಾಯೆ ಆವರಿಸಿದ ಕೇರಿಯಲ್ಲಿ ಯಾರೊಬ್ಬರಿಗೂ ಸಾಂತ್ವನ ಹೇಳಲು ಜನರಿಲ್ಲದ ಸ್ಥಿತಿ ಉಂಟಾಗಿತ್ತು. ಅದಾಗಲೇ ಕೇರಿಯೊಳಗಿನ ಹಿರಿಯ ಮೂರು ತಲೆಗಳು ಸೇರಿದಂತೆ ಬರೋಬ್ಬರಿ ಹನ್ನೆರಡು ಜನರನ್ನು ಮಣ್ಣಲ್ಲಿ ಮಣ್ಣಾಗಿಸಿದ ಕೇರಿಯ ಜನ ಮಹಾಮಾರಿಗೆ ಹೆದರಿ ಕೇರಿಯನ್ನೇ ಬಿಟ್ಟು ಊರ ಹೊರಗಿನ ಕುಲಕರ್ಣಿಯವರ ಹೊಲದಲ್ಲಿ ಗುಡಿಸಲು ಹಾಕಿಕೊಂಡು ಕಣ್ಣೀರನ್ನೆ ಹಾಸಿ ಹೊದ್ದು ಕ್ಷಣ ಕ್ಷಣವು ಆತಂಕದಲ್ಲಿಯೇ ದಿನ ಕಳೆಯುತ್ತಿದ್ದರು.
ಊರ ಹೊರಗಿನ ಕೆರೆಗೆ ಹೊಂದಿಕೊಂಡಿರುವ ಬೆರಳೆಣಿಕೆಯಷ್ಟು ಗುಡಿಸಲುಗಳು, ಅಲ್ಲಲ್ಲಿ ಕೆಲವೇ ಕೆಲವು ಕಪ್ಪು ಹೆಂಚಿನ ಮನೆಗಳು ಕೇರಿಯಲ್ಲಾದ ಈ ಮಹಾಮಾರಿ ಹೊಡೆತಕ್ಕೆ ಹೆದರಿ ಮುದರಿ ಕೆಲವರು ಊರು ಬಿಟ್ಟರೆ, ಇನ್ನು ಕೆಲವರು ಮನೆ ಬಾಗಿಲು ಕೂಡ ತೆಗೆಯದೇ ಇದ್ದುದರಿಂದ ಜನರಿಲ್ಲದೆ ಊರು ನಿಜ ಸ್ಮಶಾನವಾಗಿತ್ತು. ಊರಿನ ಹೆಬ್ಬಾಗಿಲಿನಂತಿದ್ದ ಹನುಮಂತನ ಗುಡಿಯ ದ್ವಾರಬಾಗಿಲಕ್ಕೆ ಹೊಂದಿಕೊಂಡಂತೆ ದೊಡ್ಡದೊಂದು ಗುಂಡಿ ತೋಡಿ ಪಿಕಜಾಲಿ ಮುಳ್ಳಿನ ಕಂಟಿ ಗೂಡು ಹಾಕಿ ಊರಿಗೆ ಬೇರೆ ಯಾರೂ ಬರದಂತೆ ತಡೆ ಹಾಕಲಾಗಿತ್ತು. ಊರಿನ ಯಾವೊಂದು ಗುಡಿಸಲಿನ ಮೇಲೂ ಹೊಗೆ ಕಾಣಿಸುತ್ತಿಲ್ಲ. ಅಲ್ಲಲ್ಲಿ ಒಂದಿಷ್ಟೂ ನಾಯಿಗಳು ಓಡಾಡುವುದು, ಕೋಳಿಗಳು ತಿಪ್ಪೆ ಕೆದರುವ ದೃಶ್ಯ ಸಾಮಾನ್ಯವಾಗಿತ್ತು.
ಸಣ್ಣ ಕತೆ: ವಿಮಲವ್ವನ ಜಂಬ ಮುರಿದ ರಸ್ತೆ ಮೇಲಿನ ಕರೆಂಟ ಕಂಬ
ದಪ್ಪನೆಯ ಬಿಳಿ ಅಂಗಿ ಹಾಕಿದ ಡಾಕ್ಟರ್‍ನೊಬ್ಬ ಹರ್‍ಕ್ಯೂಲಸ್ ಸೈಕಲ್ ತುಳಿಯುತ್ತಾ “ಶೇಷಪ್ಪನಾರ,,, ಶೇಷಪ್ಪನಾರ,,,” ಎನ್ನುತ್ತಲೇ ಹನಮಂತ ದೇವರ ಗುಡಿಯ ಪೂಜಾರಿ ಶೇಷಪ್ಪನನ್ನು ಕೂಗಿ ಕರೆಯುತ್ತಿದ್ದ. ಖಾಕಿ ಚಡ್ಡಿ ಹಾಕಿದ ಪೋಲಿಸನೊಬ್ಬ ಅದೇ ವೇಳೆಗೆ ಇನ್ನೊಂದು ಸೈಕಲ್ ಮೇಲೆ ಬಂದಿಳಿದ “ಏ ಯಾರ ನೀನು ಹೀಗೆಲ್ಲಾ ತಿರುಗಾಡಬಾರ್ದು ಅಂತ ಗೊತ್ತಿಲ್ಲೇನ್ ನಿಂಗ್ “ ಎಂದು ಗದರಿಸಿದ. ಡಾಕ್ಟ್ರು ಭಯದಿಂದಲೇ ಹೊಂತಿರುಗಿ ನೋಡಿದವನೇ ಸ್ವಾಮೇರ ನಾನು ಡಾಕ್ಟ್ರ್ ಅದೇನ್ರೀ ಕೆಂಚಿ ಮನ್ಯಾಗ ದುರಗವ್ವನ ಬ್ಯಾನಿ ಬಂದು ನಾಕೂ ಮಂದಿಗೆ ಹಿಂದಕ ಮುಂದಕ ಆಗೇತಂತ ನಿನ್ನೆ ವಡ್ಡರ ಬಸಪ್ಪ ಸುದ್ದಿ ತಂದಿದ್ದ. ಊರಾಗಿನ ಯಾರೊಬ್ಬರೂ ಮನ್ಯಾಗಿರದ ಊರ ಬಿಟ್ಟಾರಂತ ಸುದ್ದಿ ಬಂದೀತ್ರೀ. ಅದಕ್ ನಮ್ಮ ಮ್ಯಾಗಿನ ಸಾಹೇಬ್ರು ನಂಗ ಇಲ್ಲಿಗೆ ಬರಾಕ್ ಫರ್ಮಾನು ಹೊರಡಿಸಿದಾರ ಅದಕ್ಕ ಬಂದೇನ್ರೀ”ಎಂದು ನಯವಾಗಿಯೇ ಮಾರುತ್ತರಿಸಿದ.
ಅದಕ್ಕೆ ಪೋಲಿಸಪ್ಪ “ ಹೌದೇನ್ರೀ, ಹಂಗಾದ್ರ ಬರ್ರೀ ಶೇಷಪ್ಪ ಮತ್ತವರ ಮನ್ಯಾವ್ರೆಲ್ಲ ಹೊಲದಾಗಿನ ಗುಡಿಸಿಲಿನ್ಯಾಗ ಉಳಕೊಂಡಾರ್ರೀ. ಬರ್ರಿ ಅಲ್ಲೇ ಕುಲಕರ್ಣಿಯವರ ತೋಟದ ಮನ್ಯಾಗ ಉಳಕೊಂಡಾರ ನಂಗೂ ಹವಾಲ್ದಾರ ಸಾಹೇಬ್ರು ಭೇಟಿ ಆಗಾಕ ಹೇಳ್ಯಾರೀ ಬರ್ರೀ ಇಬ್ರೂ ಅಲ್ಗೇ ಹೋಗೂಣ್ರೀ”ಎಂದವನೇ ಡಾಕ್ಟ್ರನ್ನು ಕರೆದುಕೊಂಡು ಹೊಲದ ಕಡೆ ನಡೆದ.
ಇಬ್ಬರೂ ಕುಲಕರ್ಣಿಯವರ ತೋಟದ
ಮನೆಗೆ ಬಂದವರೇ “ನಮಸ್ಕಾರ್ರೀ ಕುಲಕರ್ಣ್ಯಾರ… ಎನ್ನುತ್ತ ಸೈಕಲ್ ಸ್ಟ್ಯಾಂಡ್ ಹಚ್ಚಿ ಒಳ ಹೊಕ್ಕರು.
ಡಾಕ್ಟರ್ ಮತ್ತಾ ಪೋಲಿಸನನ್ನು ಕಂಡ ಕುಲಕರ್ಣಿಯವರು “ಏ ಇಕೀನ ಯಾಡ ವಾಟಿ ತಣ್ಣನ ಮಜ್ಜಿಗಿ ಹಾಕಿ ಕೋಡ್ತೀಯೇನ ಪೋಲಿಸಪ್ಪ ಮತ್ತ ಡಾಕಟ್ರು ಬಂದಾರ”ಎಂದು ಹೆಂಡತಿಗೆ
ಕೂಗಿದರು.
ಅಷ್ಟರಲ್ಲಿಯೇ ಕೆಂಚಿ ಎದಿ ಬಾಯಿ ಬಡಕೊಳ್ಳುತ್ತ “ಮ್ಯಾಗೇರಿ ಹನಮನ ಮಗಳು ಉಲ್ಟಿ ಮಾಡಾಕ ಹತ್ಯಾಳ್ರೀ
ಅಯ್ಯೋ ನಮ್ಮವ್ವಾ ದುರಗವ್ವಾ ಇದೇನ ತಂದೀ ನಮಗ. ಇಂಥಾ ಗತೀ ನಮ್ಮವ್ವ ಯಾಕ್ ಈ ಥರಾ ಉರಿಗಣ್ಣ ತಗದೀ
ನಮ್ಮವ್ವ ಕಾಪಾಡು” ಅನ್ನುತ್ತಲೇ ಅಳುತ್ತ ಕುಲಕರ್ಣಿ ಅವರ ಮನೆಗೆ ಬಂದಳು.
ಕೂಡಲೇ ಮಜ್ಜಿಗೆ ಕುಡಿದು ಅವಸರದಲ್ಲೇ ಆಕೆಯೊಂದಿಗೆ ಗುಡಿಸಲಿಗೆ ತೆರಳಿದ ಡಾಕ್ಟರ್ ಕಿಸೆಯೊಳಗಿನ ಕರ್ಚೀಫು ತೆಗೆದು ಬಾಯಿಗೆ ಕಟ್ಟಿಕೊಂಡರು. ಬ್ಯಾಗಿನಿಂದ ಸ್ಟೆಥೊಸ್ಕೋಪ್ ತೆಗದವರೇ ಕೆಂಚಿಯ ಮಗಳು ಸಾಬಿಯನ್ನು ಕರೆದು ತಾ ಎಂಬಂತೆ ಸನ್ನೆ ಮಾಡಿದರು. ಗೋಣಿ ಚೀಲದ ಮೇಲೆ ಅವಳನ್ನು ಮಲಗಿಸಿ ಎದೆಯ ಮೇಲೆ ಸ್ಟೆಥೋಸ್ಕೋಪ್ ಹಿಡಿಯುತ್ತಾ ನಾಲಗೆ ಹೊರಗ ತಗೀವಾ, ಕಣ್ಣು ಮಿಟುಕಿಸು ಎಂದು ಕೆಲ ಹೊತ್ತು ಕೈ ನಾಡಿ ಹಿಡಿದು ಕೈಗೆ ಕಟ್ಟಿದ ಗಡಿಯಾರವನ್ನೊಮ್ಮೆ ಅವಳ ಮುಖವನ್ನೊಮ್ಮೆ ತಿರುಗಿ ತಿರುಗಿ ನೋಡಿಕೊಳ್ಳಹತ್ತಿದ್ದರು.
ಕೆಂಚಿ ಮತ್ತು ಕೇರಿಯ ಗುಡಿಸಿಲನವೆರೆಲ್ಲ ಗಾಬರಿಯಾಗಿ ಬಾಯಿ ಬಾಯಿ ಬಡಕೊಳ್ಳಹತ್ತಿದ್ದರು. ಕೆಲ ಹೊತ್ತಿನ ನಂತರ ಡಾಕ್ಟ್ರು ಬ್ಯಾಗೊಳಗಿನಿಂದ ಒಂದಿಷ್ಟು ಸರ್ಕಾರಿ ಔಷಧಿ ತೆಗೆದುಕೊಡುತ್ತ “ಕೆಂಚವ್ವ ಇದ್ನ ಮೂರು ಟೈಮ್ ನೀರಾಗ ಹಾಕಿ ಕುಡಸ. ಬಿಸಿ ನೀರು ಕಾಯಿಸಿ ಆರಿಸಿ ಕುಡಿಸು. ನೀವೂ ಎಲ್ಲಾರೂ ಬಿಸಿ ನೀರನ್ನ ಆರಿಸಿ ಕುಡೀರಿ, ಈ ಮಟನ್ ಮತ್ತೊಂದು ತಿನ್ನಾಕ ಹೋಗಬ್ಯಾಡ್ರೀ. ಹಿಂಗ್ ಜಾಸ್ತಿ ಆದ್ರ ಇಕೀ ಪ್ರಾಣಕ್ ಕುತ್ತ ಬರತೈತೀ. ಸಂಜೀಮುಂದ ಕುಲಕರ್ಣಾರ ಬಂಡಿ ತಗೊಂಡು ಪ್ಯಾಟಿ ದವಾಖಾನಿ ಕಡಿ ಬರ್ರೀ ನೋಡೂಣಂತ. ಯಾಡ ಸಲಾಯಿನ್ ಹಚ್ಚತೀನಿ ಕಮ್ಮಿ ಆಗ್ಬಹುದು” ಎಂದವರೇ ಹನಮನ ಮಗಳತ್ತ ಧಾವಿಸಿದರು. ಅಕೀ ಆಗತಾನೆ ವಾಂತಿ ಮಾಡಿಕೊಳ್ಳಹತ್ತಿದ್ದಳು.
ಮುತ್ತಲಕೇರಿಯಲ್ಲಿ ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದದ್ದು ಊರ ಪ್ರಮುಖರಿಗೂ ಹಾಗೂ ಕುಲಕರ್ಣಿಯವರಿಗೂ ದೊಡ್ಡ ಸಮಸ್ಯೆಯಾಗತೊಡಗಿತ್ತು. ಇದರಿಂದ ಒಂದು ನಿರ್ಣಯಕ್ಕೆ ಬಂದ ಪ್ರಮುಖರು ಕೇರಿಯ ಪಂಚರನ್ನ ಬರಹೇಳಿದರು. ಕೇರಿಯ ಪಂಚರೂ ಇದೇ ವಿಚಾರವಾಗಿ ಒಂದು ಪರಿಹಾರ ನೀಡುವ ಕುರಿತು ಊರ ಕಡೆ ದೌಡಾಯಿಸಿದರು.
ಪರಸ್ಪರ ಮಾತುಕತೆ ನಡೆಯುತ್ತಿರುವಾಗ ಊರ ಹಿರಿ ತಲೆಯಾದ ಪರಮಣ್ಣ ಎದ್ದು ನಿಂತು “ಕುಲಕರ್ಣಿಯವರ ನಾ ಸಣ್ಣಾಂವ ಇದ್ದಾಗ ನಮ್ಮವ್ವ ನಂಗ ಹೇಳ್ತಿದ್ಳು ಆವಾಗೂ ಹಿಂಗೆ ಒಂದು ದೊಡ್ಡ ಮಾರಿ ಊರ ಹೊಕ್ಕಾಗ ಅದರ ಪರಿಹಾರಕ್ಕ ದುರಗವ್ವನ ಗುಡಿ ಪೂಜಾರಿ ಮೈಯಾಗ ದುರಗವ್ವ ಬಂದು, ತಾ ಬಾಳ.. ಸಿಟ್ಟಾಗಿದ್ದು ತನಗೊಂದು ಮೈಯಾಗ ಯಾವ ಊನೂ ಇಲ್ಲದ ಕುರಿ ಬ್ಯಾಟಿ ಮಾಡಿ. ಅದರ ರಕ್ತ ಊರ ಸೀಮಿ ಸುತ್ತ ಸಿಂಪಡಿಸಿದ್ರ ಕಡಿಮಿ ಆಗತೈತಿ ಅಂತ ಹೇಳಿದ್ದಳಂತ. ಅದರ ಪ್ರಕಾರ ಆಗಿನ ನಮ್ಮ ಹಿರ್ಯಾರ ನಡಕೊಂಡಿದ್ರು. ಆಗ ಅದು ಖರೇವಂದ್ರ ಕಡಿಮಿ ಆಗಿತ್ತು ಎಂದು ನಮ್ಮವ್ವ ಹೇಳಿತ್ತಿದ್ದಳ್ರೀ ಎಂದು ಸಲಹೆ ನೀಡಿದ.
ಆಗ ಕುಲಕರ್ಣಿ “ಸರಿ ಹಂಗಾದ್ರ. ನಾವೆಲ್ಲ ಕೂಡಿ ಪಟ್ಟಿ ಹಾಕಿ ನಿಮಗೊಂದು ಊನ ಇಲ್ಲದ ಬ್ಯಾಟಿ ಕೊಡಸ್ತೀವಂತ. ಮತ್ತ ನನ್ನ ಕಡಿಯಿಂದ ನಿಮ್ಮ ದೇವಿಗೆ ಉಡಿ ತುಂಬು ಸಾಮಾನು, ಅಭಿಷೇಕ ಸಾಮಾನು, ಕೊಡಸ್ತೇನಂತ. ಮೊದಲ ನಿಮ್ಮ ಕೇರಿ ದುರಗವ್ವನ ಶಾಂತ ಮಾಡ್ರಿ. ಮತ್ತ ಊರ ಸಲುವಾಗಿ ದೇವಿನ ಬೇಡಕೊಳ್ರೀ”ಎಂದು ಪರಮಣ್ಣ ಮತ್ತು ಅವರ ಸಂಗಡಿಗರ ಕೈಗೆ ನಾಲ್ಕು ನೂರು ರೂಪಾಯಿ ಇಟ್ಟ. ಮನೆ ಆಳಿಗೆ ಹೇಳಿ ಒಂದ ಚೀಲ ಭತ್ತ ಮತ್ತು ಒಂದಿಷ್ಟು ಕಟ್ಟಿಗೆ ಕೊಟ್ಟು ಕಳುಹಿಸಿದ.
ಮುತ್ತಲಕೇರಿಯ ವಾಂತಿ ಬೇಧಿ ರೋಗ ಅಲ್ಲಿಗೆ ಬಂದಿದ್ದ ಡಾಕ್ಟರ್ ಮುಖಾಂತರ ಆಗಿನ ಜಿಲ್ಲಾ ಕಲೆಕ್ಟರ್ ಗಮನಕ್ಕೆ ಬಂತು. ಆಗ ಎಚ್ಚೆತ್ತುಕೊಂಡ ಸರ್ಕಾರ ಮುತ್ತಲಕೇರಿಗೆ ಒಂದು ವೈದ್ಯಕೀಯ ತಂಡವನ್ನು ನಿಯೋಜನೆ ಮಾಡಿದರು. ಕೇರಿಗೆ ಬಂದ ತಂಡ ಮೊದಲು ರೋಗ ಒಬ್ಬರಿಂದ ಇನ್ನೊಬ್ಬರಿಗೆ ಹರಡದಂತೆ ರೋಗಿಗಳಿಗೆ ಪ್ರತ್ಯೇಕ ಸ್ಥಳದ ವ್ಯವಸ್ಥೆ ಮಾಡಿ ಅವರಿಗೆ ಚಿಕಿತ್ಸೆ ಕೊಡಲಾರಂಬಿಸಿತು. ಉಳಿದ ಜನರಿಗೆ ಕುದಿಸಿ ಆರಿಸಿದ ನೀರನ್ನೇ ಕುಡಿಯುವಂತೆ, ಆಹಾರದ ವಿಚಾರದಲ್ಲೂ ಕಟ್ಟು ನಿಟ್ಟಿನ ನಿಯಮಗಳನ್ನು ತಂದು ಕೆಲವೇ ದಿನದಲ್ಲಿ ರೋಗ ಇನ್ನೊಬ್ಬರಿಗೆ ಹರಡದಂತೆ ಹತೋಟಿಗೆ ತಂದರು.
ಅದೇ ಸಮಯದಲ್ಲೇ ಕೇರಿಯ ಜನ ಸ್ವಲ್ಪ ನಿರಾಳರಾಗಿದ್ದನ್ನು ಕಂಡ ಪರಮಣ್ಣನು ಶೇಷಪ್ಪ ಮತ್ತು ಕೆಂಚಿ ಸಮ್ಮುಖದಲ್ಲಿ ದೇವಿಗೆ ಬ್ಯಾಟಿ ಮಾಡುವ ವಿಚಾರವಾಗಿ ಉಳಿದ ಜನರನ್ನು ಸೇರಿಸಿಕೊಂಡು ಶುಕ್ರವಾರದಂದು ದೇವಿಗೆ ಬಲಿ ಕೊಡುವ ಬಗ್ಗೆ ಹೇಳಿದೆ. ಅದಕ್ಕೆ ಕೆಂಚಿ “ಸರಿ ನೀವ ಹೇಳಿದಂಗಾ ನಾಳೆ ಹೆಂಗಿದ್ರು ಶುಕ್ರವಾರ ಐತಿ. ಇವತ್ತ ಸಂಜಿಕ ಪ್ರತಿಯೊಬ್ಬರ ಗುಡಿಸಿಲಕ್ಕೂ ಹೋಗಿ ಮುತ್ತೈದೆಯರಿಗೆಲ್ಲ ಒಂದತ್ತ ಇಟ್ಟ, ಸಂಜಿಕ ದುರಗವ್ವನ ಗುಡಿ ಮುಂದ ಒಲಿ ಹೂಡಿ, ಹೂಣಗದ ಹೋಳಿಗೆ ಮಾಡಿಸೊ ಜವಾಬ್ದಾರಿ ನಾ ತಗೊತೇನ. ಮತ್ತ ನೀವ ಗುಡಿ ಮುಂದ ಹುಲಗಲ ತಪ್ಪಲದ ಚಪ್ಪರ ಹಾಕಿ ಹಾಲಗಂಬ ನಿಂದಸ್ರಿ’ ಎಂದು ಹೇಳಿದಳು. ಕೇರಿಯ ಜನರೂ ಸಮ್ಮತಿಸಿದರು.
ಇತ್ತ “ನಾ ಬ್ಯಾಟಿ ಕಡಿಯಾಕ ಸಿದ್ದ ಅದೇನಿ’ ಎಂದು ಬ್ಯಾಟಿ ಬಸ್ಸ್ಯಾ ತುಕ್ಕು ಹಿಡಿದಿದ್ದ ದೊಡ್ಡ ಬಂಡಿ ಕುಡುಗೋಲನ್ನು ಹೊರತೆಗೆದು ಮಸೆಯ ತೊಡಗಿದ. ಇತ್ತ ರೋಗವು ಹಿಡಿತಕ್ಕೆ ಬಂದದ್ದನ್ನು ಕಂಡ ವೈದ್ಯಕೀಯ ತಂಡವು ಈ ವಿಷಯವನ್ನು ಕಲೆಕ್ಟರ್ ಗಮನಕ್ಕೆ ತಂದು ಅವರ ಆದೇಶದ ಮೇರೆಗೆ ಕುಲಕರ್ಣಿ ಅವರಿಂದ ಸನ್ಮಾನ ಮಾಡಿಸಿಕೊಂಡು ಸಿಟಿಗೆ ಮರಳಿತು. ಕೇರಿಯ ಜನರಲ್ಲಿ ಅದೇನೋ ಸಾಧಿಸಿದ ಸಂತಸ. ಪರಸ್ಪರ ಒಬ್ಬರಿಗೊಬ್ಬರೂ ಸೇರಿ ಚಪ್ಪರ ಹಾಕಿ ಮಾವಿನ ತೋರಣ ಕಟ್ಟಿ ರಂಗೋಲಿ ಹಾಕಿ ಜಾತ್ರೆಯ ವಾತಾವರಣ ಸೃಷ್ಟಿಸಿದ್ದರು.
ಇತ್ತ ರಾತ್ರಿಯಿಡಿ ಮುತ್ತೈದೆಯರೆಲ್ಲ ಕೂಡಿ ಮಾಡಿದ್ದ ಹೋಳಿಗೆಯನ್ನು ತೋರಣ ಮಾಡಿ ದೇವಿಯ ಮುಂದೆ ಕಟ್ಟಿದರು. ಇನ್ನುಳಿದ ಊರ ದೇವರುಗಳಿಗೆಲ್ಲ ಉಡಿ ತುಂಬಿ ದುರಗವ್ವನ ಗುಡಿ ಸಮೀಪ ಬಂದು ಜನರೆಲ್ಲ ಜಮಾಯಿಸಿದರು.
ಅಷ್ಟರಲ್ಲೇ ಪರಮಣ್ಣ ಆಕಾಶದ ಕಡೆ ಮುಖ ಮಾಡಿ ಸೂರ್ಯ ನೆತ್ತಿಗೇರುವುದರೊಳಗಾಗಿ ಬ್ಯಾಟಿ ಕೆಡವಿ ಬಿಡಬೇಕು ಎನ್ನುತ್ತಿದ್ದ. ಅಷ್ಟರಲ್ಲೇ ಟವೆಲ್ಲೊಂದರಲ್ಲಿ ಉಡಿ ತುಂಬಿಸಿಕೊಂಡು, ಕೆಂಚಿ ಕೈಯಿಂದ ಹಣೆ ತುಂಬ ಬಂಢಾರ ಬಡಿಸಿಕೊಂಡು, ದೇವಿಯ ಗುಡಿ ಸುತ್ತ ದೀಡ ನಮಸ್ಕಾರ ಹಾಕಿದ ಬ್ಯಾಟಿ ಬಸ್ಸ್ಯಾ, ಬಗಲಲ್ಲಿ ಬ್ಯಾಟಿ ಕುಡಗೋಲ ಇಟ್ಟುಕೊಂಡು ಬಲಿ ಕೊಡಲು ತಂದ ಕುರಿ ಹಗ್ಗ ಕೈಯಲ್ಲಿ ಹಿಡಿದು ಬ್ಯಾಟಿ ಕಡಿಯಲು ಅಣಿಯಾಗುತ್ತಿದ್ದ. ಆಗಲೇ ಹಲಗೆ ಮತ್ತು ದಿಮ್ಮಿನೊಡನೆ ಕಲಮ ಮತ್ತವನ ಸಂಗಡಿಗ ದ್ಯಾಮ ಬಂದರು. ಕೇರಿಯವರೆಲ್ಲ ಹಣೆ ತುಂಬ ಹಳದಿ ಭಂಡಾರ ಬಳಿದುಕೊಂಡು ತಲೆ ಮೇಲಿನ ಸೆರಗು ಬಾಯಲ್ಲಿ ಸಿಕ್ಕಿಸಿಕೊಂಡು ಕಣ್ಣಗಲಿಸಿ ಬ್ಯಾಟಿ ಕಡೆಗೇ ದಿಟ್ಟಿಸಿ ನೋಡುತ್ತಿದ್ದರು.
ಪರಮಣ್ಣ ಇನ್ಯಾಕ ತಡ ದುರಗವ್ವನ ಬಲಿ ಸಾಗಲಿ ಅಂದ. ಮೊದಲೇ ಕಾದು ನಿಂತಿದ್ದ ಬ್ಯಾಟಿ ಬಸ್ಸ್ಯಾ ದೊಡ್ಡ ಕುಡಗೋಲ ಹಿಂದೆ- ಮುಂದೆ ಒಂದೆರಡು ಸಲ ಅಲುಗಾಡಿಸಿ ಕೈ ಹಗುರ ಮಾಡಿಕೊಂಡವನೇ ಒಂದೇ ಹೊಡೆತಕ್ಕೆ ಕುರಿ ತಲೆ ದುರಗವ್ವನ (ಕಲ್ಲಿನ ಮೂರ್ತಿ) ಮುಂದೆ ಜಿಗಿದು ಬೀಳುವಂತೆ ಬೀಸಿದ್ದ. ಅತ್ತ ಕೇರಿ ಮಂದಿಯೆಲ್ಲ ದುರಗವ್ವಗೆ ಜೋಗ ಹಾಕಿ ಅಂಬಲಿ ನೈವೇದ್ಯ ಮಾಡಿದರು. ದುರಗವ್ವನ ಬ್ಯಾನಿ ದೂರ ಮಾಡವಾ ಅಂತ ಬೇಡಿಕೊಂಡರು.
ವೈದ್ಯಕೀಯ ತಪಾಸಣೆಯಿಂದಲೋ ದುರಗವ್ವನ ಮೇಲೆ ಆ ಜನ ಇಟ್ಟಿರೋ ನಂಬಿಕೆಗೋ ಮಹಾಮಾರಿ ಕಾಲರಾ ಪ್ಲೇಗ್ ದೂರ ಆಯ್ತು. ಜನ ಖುಷಿ ಪಟ್ಟರು. ಕೇರಿ ಮಂದಿಗೆ ಮಟನ್ ಊಟ ಹೊಟ್ಟಿ ತುಂಬಿಸಿತು. ಅಂತೂ ದಾರದ ಸಮಸ್ಯೆಯಿಂದ ಊರಿನವರೆಲ್ಲರ ಮುಖದಲ್ಲಿ ನಗು ಮೂಡುತ್ತಿದ್ದರೆ, ಇತ್ತ ಬಲಿಯಾದ ಕುರಿಯ ನೆತ್ತರು ಹೆಪ್ಪುಗಟ್ಟುತ್ತಿತ್ತು.
ಸಣ್ಣ ಕತೆ: ವಿಮಲವ್ವನ ಜಂಬ ಮುರಿದ ರಸ್ತೆ ಮೇಲಿನ ಕರೆಂಟ ಕಂಬ
ಹಾಸ್ಯ ಕತೆ: ಸಂಗ್ಯಾ ಬಾಳ್ಯಾ ಹಾಡು ಹೇಳಿ ಸಿಕ್ಕಾಕೊಂಡ ಗಡ್ಡದ ಸ್ವಾಮಿ.

ಸಿದ್ದರಾಮ ತಳವಾರ, ಬೆಳಗಾವಿ.