ಮಗು ಹುಟ್ಟುವುದಕ್ಕಿಂತ ಮೊದಲೇ ಅದಕ್ಕೆ ಯಾವ ಶಿಕ್ಷಣ ಕೊಡಬೇಕು. ಯಾವ ವೃತ್ತಿಯಲ್ಲಿ ಮುನ್ನಡೆಸಬೇಕು ಎಂದು ಪಾಲಕರು ಮಾಸ್ಟರ್ ಪ್ಲಾನ್ ನಲ್ಲಿ ತೊಡಗುತ್ತಾರೆ. ಸ್ಥಿತಿವಂತರಷ್ಟೇ ಅಲ್ಲ, ದಿನಗೂಲಿ ಮಾಡಿ ದುಡಿಯುವ ಕುಟುಂಬವೂ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಹೀಗೆಯೇ ಯೋಚಿಸುತ್ತವೆ.

ಆದರೆ, ಅದೇ ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕ…? ಮಕ್ಕಳ ಭಿವಿಷ್ಯಕ್ಕೆ ಭದ್ರ ಬುನಾದಿ ಹಾಕಬೇಕಿರುವ ಮೂರು ಲಕ್ಷ ಸರಕಾರಿ ಶಿಕ್ಷಕರ ಪಾಡು ಹೇಗಾಗಿದೆ ಎಂದರೆ ನಾಳೆ ಮಕ್ಕಳಿಗೆ ಏನು ಪಾಠ ಮಾಡಬೇಕು ಎನ್ನುವ ಚಿಂತೆಗಿಂತ. ಬಿಸಿಯೂಟಕ್ಕೆ ಸಾಮಗ್ರಿ ಎಷ್ಟೊತ್ತಿಗೆ ಖರೀದಿಸಲಿ. ಲೆಸನ್ ಪ್ಲಾನ್ ಯಾವಾಗ ಮುಗಿಸಲಿ, ಮಕ್ಕಳ ದಾಖಲಾತಿ, ಸ್ಕಾಲರ್ ಶಿಪ್, ಬಿಇಓ ಕಚೇರಿ ಕೆಲಸ, ಶಾಲೆ ದುರಸ್ತಿ ಹೀಗೆ ವೃತ್ತಿಗೆ ಹೊರತಾದ ಕೆಲಸಗಳ ಯೋಚನೆಯೇ ತಲೆಯಲ್ಲಿ ಸುಳಿದಾಡುತ್ತವೆ.

ಅದಕ್ಕೆ ಇಂಥ ಪ್ರಶ್ನೆ ಮೂಡಿರುವುದು, ಸರಕಾರಿ ಶಿಕ್ಷಕರು ಎಂದರೆ ಸರಕು ವಾಹನವೇ? ಭಾರತದಲ್ಲಿ ಸರಕು ಸಾಮಗ್ರಿ ಜತೆಗೆ ಜನರನ್ನೂ ಸಾಗಿಸುವ ಸರಕು ವಾಹನಗಳು ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ. ನಮ್ಮ ಸರಕಾರಿ ಶಿಕ್ಷಕರ ಪರಿಸ್ಥಿತಿಯೂ ಅದೇ ಆಗಿದೆ ಎಂದು ಹೋಲಿಸುವುದು ಸಹ ಬೇಸರದ ಸಂಗತಿಯೇ.

ಸೆಪ್ಟೆಂಬರ್ ನಲ್ಲಿ ಬರುವ ಶಿಕ್ಷಕರ ದಿನಾಚರಣೆ, ಫೆಬ್ರುವರಿ, ಮಾರ್ಚ್ ನಲ್ಲಿ ನಡೆಯುವ ಸ್ನೇಹ ಸಮ್ಮೇಳನದಲ್ಲಿ ಶಿಕ್ಷಕರನ್ನು ದೇವರಂತೆ ಕಾಣುವ ನಾವುಗಳೇ ಏಪ್ರಿಲ್, ಮೇ ನಲ್ಲಿ ಬರುವ ಚುನಾವಣೆಯಲ್ಲಿ ಮೇಸ್ಟ್ರೆ ನನ್ನ ಹೆಸರು ಎಲ್ಲಿದೆ ಎಂದು ಕೇಳುತ್ತೀವಿ. ನನ್ನ ಮಗನ ಹೆಸರು ವೋಟರ್ ಲೀಸ್ಟ್ ನಲ್ಲಿ ಸೇರಿಸಬೇಕಿತ್ತು. ನೀವೇ ಅರ್ಜಿ ತುಂಬಿಕೊಡಿ ಎನ್ನುತ್ತೀವಿ.

ಪಾಠ ಬೋಧನೆಯ ವೃತ್ತಿಯಲ್ಲಿರುವ ಶಿಕ್ಷಕರು ಈಗಾಗಲೇ ಸರ್ಕಾರ ವಿವಿಧ ಯೋಜನೆಗಳ ಸರಕು ಹೊರುತ್ತಿದ್ದಾರೆ. ಸಾಮಾನ್ಯರಾದ ನಾವುಗಳೂ ಕೆಲ ಸಂದರ್ಭಗಳಲ್ಲಿ ಅವರನ್ನು ಸರಕು ವಾಹನದಂತೆಯೇ ನೋಡುತ್ತಿದ್ದೇವೆ ಎನ್ನುವುದು ಕಠು ಸತ್ಯ. ಶಿಕ್ಷಕರ ಸಂಘಗಳು ಸಹ ಇದಕ್ಕೆ ಹೊರತಾಗಿಲ್ಲ ಎಂದರೆ ಅರಗಿಸಿಕೊಳ್ಳಲಾಗದೆ ಹೋಗಬಹುದು.

ಯಾಕೆಂದರೆ ವರ್ಗಾವಣೆ ಪ್ರಶ್ನೆ ಬಂದಾಗ ಸಂಘದ ಪದಾಧಿಕಾರಿಗಳಿಗೆ ಇರುವ ರಿಯಾಯಿತಿ ಸಾಮಾನ್ಯ ಶಿಕ್ಷಕರಿಗೆ ಸಿಗುವುದಿಲ್ಲ. ವರ್ಗಾವಣೆ ಜಟಿಲವಾಗುವುದಕ್ಕೂ ಇಂಥ ಹಲವು ಕಾರಣಗಳು ಇವೆ. ಈಗಂತೂ ವರ್ಗಾವಣೆ ಸುದ್ದಿ ಕೇಳಿದರೆ ಶಿಕ್ಷಕರು ಕಣ್ಣು ಒರೆಸುಕೊಳ್ಳುತ್ತಾರೆ. ಇದರ ಮೇಲಾಗಿ ನಮ್ಮ ಮೇಸ್ಟ್ರು ಶಾಲೆಯಲ್ಲಿ ಕಾಣುವುದೇ ಇಲ್ಲ ಎನ್ನುವವರೂ ಇದ್ದಾರೆ. ಹೀಗೆ ಶಿಕ್ಷಕರ ಗೋಳು ಹೇಳುತ್ತಲೇ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಎಲ್ಲ ಕೆಲಸಕ್ಕೆ ಶಿಕ್ಷಕರೇ ಯಾಕೆ?
ಇಲಾಖೆಗಳ ಸಿಬ್ಬಂದಿ ರೀತಿಯಲ್ಲಿಯೇ ಸರಕಾರಿ ಶಾಲೆ ಶಿಕ್ಷಕರು ಸಹ ಸರಕಾರಿ ನೌಕರರು. ಹಾಗಿದ್ದ ಮೇಲೆ ಸರ್ಕಾರದ ಸಾಂದರ್ಭಿಕ ಕೆಲಸಗಳಿಗೆ ಶಿಕ್ಷಕರನ್ನೇ ಶೇ. 100 ರಷ್ಟು ತೊಡಗಿಸಿಕೊಳ್ಳುವುದು ಏಕೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಸರ್ಕಾರದ ಎದುರು ವಾದ ಮುಂದಿಡುತ್ತಲೇ ಬಂದಿದ್ದಾರೆ.

ರಾಜ್ಯದ ಬೇರೆ ಇಲಾಖೆಗಳಲ್ಲಿಯೂ ಕಡಿಮೆ ಕೆಲಸ ಇರುವ ಸಿಬ್ಬಂದಿ ಇದ್ದಾರೆ. ಅವರನ್ನೂ ಕೆಲಸಕ್ಕೆ ಬಳಸಿಕೊಳ್ಳಬೇಕು. ಎಲ್ಲ ಇಲಾಖೆಗಳ ಸಿಬ್ಬಂದಿಯನ್ನು ಸಮ ಪ್ರಮಾಣದಲ್ಲಿ ಸಾಂದರ್ಭಿಕ ಕೆಲಸಗಳಿಗೆ ಬಳಸಿಕೊಳ್ಳಬೇಕು ಎನ್ನುವುದು ಅವರ ಪ್ರತಿಪಾದನೆ. ಆದರೆ, ಇದರ ಸಾಧ್ಯತೆಯ ಪ್ರಯೋಗವೂ ನಡೆದಿಲ್ಲ. ಇದೊಂದು ಪ್ರಯೋಗ ನಡೆದರೆ ಶಿಕ್ಷಕರ ಅರ್ಧ ದಷ್ಟು ಭಾರ ಕಡಿಮೆಯಾಗುತ್ತದೆ.

ಸಂಬಂಧಿಸಿದ ಸುದ್ದಿ: ಶಿಕ್ಷಕರಿಗೆ ಕೊರೊನಾ ಸಂಪರ್ಕ ತಂಡದ ಕೆಲಸ!

ಶಿಕ್ಷಕರ ಕೊರತೆ ನೀಗಿಸಿ ಎಲ್ಲ ಶಾಲೆಗಳನ್ನು ಡಿಜಿಟಲ್ ವ್ಯವಸ್ಥೆಗೆ ತಂದು ಬಿಟ್ಟರೆ ನಮ್ಮ ಶಿಕ್ಷಕರು ಸರಕು ವಾಹನವಲ್ಲ ರೈಲಿನಂತೆ ವೇಗವಾಗುತ್ತಾರೆ. ಡಿಜಿಟಲ್ ವ್ಯವಸ್ಥೆ ತರುವುದು ಎಂದರೆ ತಂತ್ರಾಂಶ ರೂಪಿಸುವುದು ಅಲ್ಲ. ಎಲ್ಲ ಶಾಲೆಗಳಲ್ಲಿ ಕಂಪ್ಯೂಟರ್ ಆಧಾರಿತ ಕೆಲಸಗಳು ನಡೆಯಬೇಕು. ಅದಕ್ಕೆ ತಕ್ಕ ಸಾಮಗ್ರಿಗಳನ್ನು ಪೂರೈಸಬೇಕು. ದೆಹಲಿ ಮಾದರಿ ಅನುಸರಿಸಿದರೆ ಅದಕ್ಕಿಂತ ದೊಡ್ಡ ಭಾಗ್ಯ ಮತ್ತೊಂದಿಲ್ಲ.

ಈ ವಿಚಾರಗಳು ಇಲ್ಲಿಗೆ ನಿಲ್ಲಬಾರದು. ಚರ್ಚೆಗೆ ಒಳಪಡಲೇ ಬೇಕು. ಅಲ್ಲವೆ?