ಕನ್ನಡ ನೆಲದಲ್ಲಿ ಅಣ್ಣಾಹಜಾರೆ ತವರಿನ ಜೋಳದ ಕಮಾಲ್

ಕನ್ನಡ ನೆಲದಲ್ಲಿ ಅಣ್ಣಾಹಜಾರೆ ತವರಿನ ಜೋಳದ ಕಮಾಲ್

ಭ್ರಷ್ಟಾಚಾರ ವಿರುದ್ದ ಧ್ವನಿ ಎತ್ತಿದ ಮಹಾರಾಷ್ಟ್ರದ ರಾಲೇಗಣಸಿದ್ದಿ ಗ್ರಾಮದ ಅಣ್ಣಾ ಹಜಾರೆ ಅವರು ತಮ್ಮ ವಿಚಾರಗಳಿಂದ ಇಡೀ ದೇಶವನ್ನೇ ಎಚ್ಚರಿಸಿದ್ದರು. ಈಗ ಅವರದ್ದೇ ಊರಿನಿಂದ ರೈತನೊಬ್ಬ ತಂದ ಜೋಳದ ತಳಿ ಕನ್ನಡದ ನೆಲದಲ್ಲಿ ಭಾರೀ ಕಮಾಲ್ ಮಾಡುತ್ತಿದೆ. ಕೃಷಿಯಲ್ಲಿ ಹೊಸ ಬದಲಾವಣೆಗೆ ಪ್ರೇರೇಪಣೆ ನೀಡುತ್ತಿದೆ.

ರಾಲೇಗಣಸಿದ್ದಿ ಗ್ರಾಮದಿಂದ ಬಂದ ಆ ಜೋಳದ ಗುಣಲಕ್ಷಣವೇ ಬಲು ರೋಚಕ. ಮುತ್ತಿನಂತೆ ಕಟ್ಟುವ ತೆನೆ ಒಂದೆಡೆಯಾದರೆ, ಜಾನುವಾರುಗಳು ಬಲು ಮೆಚ್ಚುಗೆಯಿಂದ ಆ ಮೇವನ್ನು ಚಪ್ಪರಿಸುತ್ತವೆ. ಇಂಥ ಬಹುಪಯೋಗಿ ಜೋಳವು ಅಣ್ಣಾ ಹಜಾರೆ ಅವರು ದೇಶದಲ್ಲಿ ತಂದ ಕ್ರಾಂತಿಕಾರಿ ಬದಲಾವಣೆಯ ರೀತಿಯಲ್ಲಿಯೇ ಚಮತ್ಕಾರಿ ಗುಣ ಹೊಂದಿದೆ.

ಜೋಳ ಉತ್ತರಕ ರ್ನಾಟಕದ ಪ್ರಮುಖ ಬೆಳೆ. ನಾನಾ ಸಮಸ್ಯೆಗಳ ಕಾರಣಕ್ಕೆ ಜೋಳದ ಅನೇಕ ತಳಿಗಳು ಕಣ್ಮರೆಯಾಗುತ್ತಿವೆ. ಇಂಥ ಕಣ್ಮರೆಯಾದ ಜೋಳದ ತಳಿಗಳನ್ನು ಹುಡುಕಿ ಅವುಗಳನ್ನು ಮತ್ತೆ ಪ್ರಚಲಿತಕ್ಕೆ ತರುವ ಸಾಹಸದಲ್ಲಿರುವ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿಯ ರೈತ ಕಲ್ಲಪ್ಪ ಪಂಡಿತಪ್ಪ ನೇಗಿನಹಾಳ ಮಾದರಿ ರೈತರಲ್ಲಿ ಒಬ್ಬರು.

ಸುಮಾರು 24 ಜೋಳದ ತಳಿಗಳನ್ನು ಸಂಗ್ರಹಿಸಿಕೊಂಡಿರುವ ಕಲ್ಲಪ್ಪ ಅವರಲ್ಲಿ ಅಣ್ಣಾ ಹಜಾರೆ ಅವರ ತವರಿನ ಪುಲೆ ಯಶೋಧ ಎನ್ನುವ ತಳಿ ಸಂಗ್ರಹ ಮಾಡಿಕೊಂಡ ಬಗೆ ರೋಚಕವಾಗಿದೆ. ಇಂಥ ಅಪರೂಪದ ತಳಿಗಳನ್ನು ಕಲ್ಲಪ್ಪ ಮಕ್ಕಳಂತೆ ಜೋಪಾನ ಮಾಡುತ್ತಿದ್ದಾರೆ.

ಐದು ವರ್ಷದ ಹಿಂದೆ ಕೃಷಿ ಇಲಾಖೆ ಸಹಯೋಗದಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದ್ದ ರೈತರು ಅಣ್ಣಾ ಹಜಾರೆ ಅವರ ತವರೂರು ರಾಲೇಗಣ ಸಿದ್ದಿಯಲ್ಲಿ ಒಂದು ದಿನ ತಂಗಿದ್ದರು. ಆ ಪ್ರವಾಸದಲ್ಲಿ ಕಲ್ಲಪ್ಪಅವರೂ ಇದ್ದರು.

ರಾಲೇಗಣ ಸಿದ್ದಿಗೆ ಹೋದಾಗ ಅಣ್ಣಾ ಹಜಾರೆ ಅವರೇ ರೈತರಿಗೆ ಊಟದ ವ್ಯವಸ್ಥೆ ಮಾಡಿದ್ದರು. ಸುಮಾರು ಎರಡು ತಾಸು ರೈತರೊಂದಿಗೆ ಮಾತನಾಡಿದ ಅಣ್ಣಾ ಹಜಾರೆ ಅವರು “ಭಾರತ ಕೇವಲ ದೇಶವಲ್ಲ. ನಮ್ಮ ಉಸಿರು. ದೇಶಕ್ಕಾಗಿ ಕಿಂಚಿತ್ತಾದರೂ ನಮ್ಮ ಸೇವೆ ಇರಬೇಕು’ ಎಂದು ಹಿಂದಿಯಲ್ಲಿ ಹೇಳಿದ್ದರು. “ಹಿಂದಿ ಭಾಷೆ ನಮಗೆ ಅರ್ಥವಾಗದೆ ಇದ್ದರೂ ನನ್ನ ದೇಶದ ಬಗ್ಗೆ ಅವರು ಹೇಳಿದ ಮಾತು ನಮ್ಮ ಮನಸ್ಸು ಮುಟ್ಟಿತ್ತು’ ಎನ್ನುವ ಕಲ್ಲಪ್ಪ ಅವರ ನೆನಪು ಒಂದು ಕ್ಷಣ ಮೈ ಜುಮ್ ಎನಿಸುತ್ತದೆ.

ಜೋಳದ ತಳಿ ಸಂಗ್ರಹಿಸುವ ಹವ್ಯಾಸವಿದ್ದ ಕಲ್ಲಪ್ಪ ಅವರು ರಾಲೇಗಣ ಸಿದ್ದಿಯಲ್ಲಿ ಸೊಂಪಾಗಿ ಬೆಳೆದಿದ್ದ ಎರಡು ಭಿನ್ನ ತಳಿಯ ಜೋಳದ ತೆನೆಯನ್ನು ಊರಿಗೆ ತಂದಿದ್ದರು. ಅದರಲ್ಲಿ ಒಂದರ ಹೆಸರು ಪುಲೆಯಶೋಧ ಎಂದು ಸ್ಥಳಿಯರು ಹೇಳಿದ್ದರು ಎಂದು ಕಲ್ಲಪ್ಪ ಜೋಳದ ಹಿನ್ನಲೆಯನ್ನು ವಿವರಿಸಿದರು.

ಕಲ್ಲಪ್ಪ ಜೋಳದ ಒಂದು ತೆನೆಯನ್ನು ಬೂದಿಯಲ್ಲಿ ಇಟ್ಟು ಬೀಜ ಮಾಡಿ ಮೊದಲು ತಮ್ಮ ಜಮೀನಿನ ನಾಲ್ಕು ಗುಂಟೆಯಲ್ಲಿ ಬಿತ್ತನೆ ಮಾಡಿದರು. ಒಂದು ತೆನೆಯಿಂದಾದ ಬೀಜ ಇಂದು ಉತ್ತರ ಕರ್ನಾಟಕದ  ಸುಮಾರು ಎರಡು ಸಾವಿರ ಎಕರೆ ಪ್ರದೇಶದಲ್ಲಿ ಬೆಳೆಯುತ್ತಿದೆ. ಉತ್ತರ ಕರ್ನಾಟಕ ಭಾಗದ ಕೆಲ ರೈತರ ಮೆಚ್ಚಿನ ತಳಿಯಾಗಿದೆ.

ಪುಲೆ ಯಶೋಧಾ ವಿಶೇಷತೆ:
ಈ ಜೋಳದಲ್ಲಿ ಮುತ್ತಿನ ರೀತಿ ತೆನೆ ಕಟ್ಟುತ್ತದೆ. ಕೆಂಪು ರೋಗ ಬರುವುದಿಲ್ಲ. ಇತರ ಜೋಳಗಳ ರೀತಿ ರವದಿ ಬಿಡುವುದಿಲ್ಲ. ಮೇವಿನಲ್ಲಿ ಕಬ್ಬಿನ ರೀತಿಯ ಸಿಹಿ ಅಂಶ ಇವೆ. ಹಾಗಾಗಿ ದನಗಳು ಹೆಚ್ಚು ಇಷ್ಟಪಡುತ್ತವೆ. ಈ ಜೋಳದಿಂದ ಮಾಡಿದ ರೊಟ್ಟಿಯೂ ಮೆದುವಾಗಿರುತ್ತದೆ. ತಿನ್ನಲು ಬಲು ರುಚಿ ಎನ್ನುತ್ತಾರೆ ಕಲ್ಲಪ್ಪ.

ಇದು ಒಂದು ಎಕರೆಗೆ 8 ರಿಂದ 10 ಕ್ವಿಂಟಾಲ್ ಇಳುವರಿ ನೀಡುತ್ತದೆ. ನೀರಾವರಿಯಲ್ಲಿ ಇನ್ನೂ ಹೆಚ್ಚಿನ ಇಳುವರಿ ನೀಡುತ್ತದೆ. ಈ ಬೆಳೆಯ ಭಿತ್ತನೆ ಬೀಜ ಮುದೋಳ, ಜಮಖಂಡಿ, ಗುಲ್ಬರ್ಗಾ ಹಾವೇರಿ ಹೀಗೆ ಉತ್ತರ ಕರ್ನಾಟಕದ ಬಹುಪಾಲು ಪ್ರದೇಶಗಳಲ್ಲಿ ಪ್ರಸಿದ್ಧಿಯಾಗಿದೆ. ಎಲ್ಲ ರೈತರು ಕಲ್ಲಪ್ಪ ಅವರ ಬಳಿ ಬಂದು ಜೋಳದ ತಳಿ ಪಡೆಯುತ್ತಿದ್ದಾರೆ.

ಚಿಗುರುತ್ತಿದೆ 24 ಜೋಳದ ತಳಿಗಳು
ಕಲ್ಲಪ್ಪ ಅವರ ಬಳಿ 11 ಎಕರೆ ಭೂಮಿಯಿದ್ದು ಎಲ್ಲವನ್ನೂ ಸಾವಯವದಲ್ಲಿ ಬೇಸಾಯ ಮಾಡುತ್ತಿದ್ದಾರೆ. 5 ಎಕರೆ ಭೂಮಿಯಲ್ಲಿ ವಿವಿಧ ತಳಿಯ ಜೋಳ ಬೆಳೆದಿದ್ದಾರೆ. ಒಟ್ಟು 24 ತಳಿಗಳು ಇವರ ಹೊಲದಲ್ಲಿ ನಳನಳಿಸುತ್ತಿವೆ. ಹಲವಾರು ಹಿರಿಯ ರೈತರು ಬಂದು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೃಷಿಯೊಂದಿಗೇ ಜೀವನ ನಡೆಸುತ್ತಿರುವ ಕಲ್ಲಪ್ಪ ಕೇವಲ ಲಾಭವನ್ನಷ್ಟೇ ನೋಡದೆ ದೇಶೀಯ ತಳಿಗಳನ್ನೂ ಕಾಪಾಡಿ ಮಾದರಿ ಎನಿಸಿದ್ದಾರೆ. ಕಲ್ಲಪ್ಪ ಅವರ ಕೃಷಿ ಸಿದ್ದಾಂತವೂ ವಿಶೇಷವಾಗಿದೆ.

ರೈತ ಕಲ್ಲಪ್ಪ ಪಂಡಿತಪ್ಪ ನೇಗಿನಹಾಳ

ಜೋಳದ ತಳಿಗಳ ವೈವಿಧ್ಯತೆ:
ದೋಸೆ ಜೋಳ: ಬಿಳಿವರ್ಣದ ದಪ್ಪ ಕಾಳು ದಂಡು ಎತ್ತರ ಹಾಗೂ ಹೆಚ್ಚು ಮೇವಿನ ಇಳುವರಿ.
ಪುಟಾಣಿ ಜೋಳ: ಬಿಳಿ ವರ್ಣದ ಸಣ್ಣ ಕಾಳು, ಜೋಳದ ವಡೆ ಖಾದ್ಯ ತಯಾರಿಕೆಯಲ್ಲಿ ಬಳಕೆ.
ಪುಲೆ ಯಶೋಧಾ:- ಬಿಳಿ ವರ್ಣದ ಉದ್ದನೆಯ ಕಾಳು, ತೆನೆಯೂ ಉದ್ದನೆಯ ಆಕಾರ.
ಪಿಂಜರ ಅಥವಾ ಚೌರಿ ಜೋಳ:- ಈ ತನೆಯ ಗಾತ್ರ ಆಕಾರ ವಿಭಿನ್ನ ಹಾಗೂ ಆಕರ್ಷಣೀಯ. ಪಕ್ಷಿಗಳು ಕೂಡಲು ಬಾರದಷ್ಟು ಹಗುರ.
ಕಾಲಾಗುಂಡು:- 550 ವರ್ಷಗಳಷ್ಟು ಹಿಂದಿನ ತಳಿ, ದಪ್ಪನೆಯ ದಿಂಡು, ಉತ್ಕೃಷ್ಠ ಮೇವು, ಇಳುವರಿ ಹೆಚ್ಚು, ತಟ್ಟಿ ಅಥವಾ ಗುಡಿಸಲು ಮಾಡಲು ಇದರ ದಿಂಡು ಉಪಯೋಗ.
ಸೇಡಂ ಜೋಳ:- ಕಾಳಿನ ಮೂಗು ಕಪ್ಪು ಬಣ್ಣದಿದ್ದು ರೊಟ್ಟಿ ಬಿರುಸು.
ಮೂಗುತಿ:- ಸಾಧಾರಣ ಗುಣಮಟ್ಟದ ಮೇವು ರೊಟ್ಟಿ ಬಿರುಸು.
ಮಾಲ್ದಂಡಿ:- ದುಂಡನೆಯ ಬಿಳಿವರ್ಣದ ಕಾಳು 5 ರಿಂದ 6 ಅಡಿ ಬೆಳೆಯುವ ದಂಡು ಜಾನುವಾರಗಳಿಗೆ ಉತ್ತಮ ಮೇವು.
ಕೋಡಮುರಕ: ತಿಳಿ ಬಿಳಿವರ್ಣದ ದಪ್ಪನೆಯ ಕಾಳು. ಬಾಗಿದ ತೆನೆ ಈ ತಳಿಯ ವೈಶಿಷ್ಠ.

ರೈತ ಕಲ್ಲಪ್ಪ ನೇಗಿನಾಳ ಅವರ ಸಂಪರ್ಕ ಸಂಖ್ಯೆ ಬೇಕಿದ್ದರೆ ಕಳಗಡೆ ಇರುವ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.


ಚಿತ್ರ, ವಿಡಿಯೊ, ಲೇಖನ: ವಿನೋದ ಪಾಟೀಲ, ಚಿಕ್ಕಬಾಗೇವಾಡಿ.

Leave a reply

Your email address will not be published. Required fields are marked *