Select Page

ಉತ್ತರ ಕನ್ನಡ ಜಿಲ್ಲೆಯ ಮೂವರಿಗೆ ಯಕ್ಷಗಾನ ಅಕಾಡೆಮಿಯಿಂದ ಪ್ರಶಸ್ತಿ

ಉತ್ತರ ಕನ್ನಡ ಜಿಲ್ಲೆಯ ಮೂವರಿಗೆ ಯಕ್ಷಗಾನ ಅಕಾಡೆಮಿಯಿಂದ ಪ್ರಶಸ್ತಿ

ಕಾರವಾರ: ಕರ್ನಾಟಕ ಯಕ್ಷಗಾನ ಅಕಾಡೆಮಿಯು 2019ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿ ಪ್ರಕಟಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ಮೂವರು ಯಕ್ಷಗಾನ ಕಲಾವಿದರು ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಅಂಕೋಲಾ ತಾಲೂಕಿನ ಯಕ್ಷಗಾನ ಕಲಾವಿದ ಹಾಗೂ ವಿದ್ವಾಂಸರಾದ ಡಾ. ರಾಮಕೃಷ್ಣ ಗುಂದಿ ಅವರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಾ. ರಾಮಕೃಷ್ಣ ಅವರು ಏಳನೇ ತರಗತಿಯಿಂದಲೇ ಯಕ್ಷಗಾನ ಕಲೆ ಆರಂಭಿಸಿ ಪ್ರಸಿದ್ಧರಾಗಿದ್ದಾರೆ.

ಕುಮಟಾ ತಾಲೂಕಿನ ಮೂರೂರು ಗ್ರಾಮದ ಮೂರೂರು ರಾಮಚಂದ್ರ ಹೆಗಡೆ ಅವರು ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆರನೇ ತರಗತಿ ವರೆಗೆ ಓದಿರುವ ಇವರು ಯಕ್ಷಗಾನ ವೇಷಭೂಷಣ ತಯಾರಿಕೆ, ವೇಷಭೂಷಣ ಬಾಡಿಗೆ ಕೊಡುವುದನ್ನೇ ವೃತ್ತಿಯಾಗಿ ಸ್ವೀಕರಿಸಿ ಇಂದಿಗೂ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ.

ಯಲ್ಲಾಪುರದ ನಿವೃತ್ತ ಉಪನ್ಯಾಸಕ, ಯಕ್ಷಗಾನ ತಾಳಮದ್ದಲೆ ಮತ್ತು ಅರ್ಥದಾರಿ ಎಂ.ಎನ್. ಹೆಗಡೆ ಹಳವಳ್ಳಿ ಅವರಿಗೂ ಸಹ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಎಂ.ಎನ್. ಹೆಗಡೆ ಅವರು ಕೂಡ ಏಳನೇ ವಯಸ್ಸಿನಲ್ಲಿಯೇ ಯಕ್ಷಗಾಲ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಅಕ್ಟೋಬರ್ ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುವ ನಿರೀಕ್ಷೆ ಇದೆ. ಸದ್ಯ ಕೊರೊನಾ ಆತಂಕ ಇರುವುದರಿಂದ ಆಯಾ ಜಿಲ್ಲೆಯಲ್ಲಿಯೇ ಕಾರ್ಯಕ್ರಮ ಆಯೋಜಿಸಿ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸುವ ಬಗ್ಗೆಯೂ ಚರ್ಚೆ ನಡೆದಿದೆ.

ಯಕ್ಷಗಾನ ಕಲೆಯನ್ನು ಮೆಚ್ಚಿ ಜಿಲ್ಲೆಯ ಕಲಾವಿದರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ವಿದ್ವಾಂಸ ಡಾ. ರಾಮಕೃಷ್ಣ ಗುಂದಿ ಅವರು ದಿ ಸ್ಟೇಟ್ ನೆಟ್ವರ್ಕ್ ನೊಂದಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾಗಿದ್ದ ಖುಷಿ ನೀಡಿದೆ ಎಂದು ಅವರು ಅನಿಸಿಕೆ ಹಂಚಿಕೊಂಡಿದ್ದಾರೆ.

2019ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿ ಉಡುಪಿ ಜಿಲ್ಲೆಯ ಕಾರ್ಕಳದ ಅಂಬಾತನಯ ಮುದ್ರಾಡಿ ಅವರಿಗೆ ಘೋಷಣೆಯಾಗಿದೆ.

Leave a reply

Your email address will not be published. Required fields are marked *