ಹುಲಿ ಎಂದರೆ ಅದೊಂದು ಕ್ರೂರ ಪ್ರಾಣಿ, ಕಾಡಿನಲ್ಲಿ ವಾಸಿಸುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ, ದಟ್ಟಾರಣ್ಯದಲ್ಲಿರುವ ಹುಲಿಗಳು ಜೀವನ ರೀತಿನ ಹೇಗಿರುತ್ತದೆ. ಅವುಗಳು ಯಾಕೆ ಮನುಷ್ಯರ ಮೇಲೆ ದಾಳಿ ಮಾಡುತ್ತವೆ ಎನ್ನುವ ಬಗ್ಗೆ ತಿಳಿಯಲು ಹೊರಟಾಗ ನಮಗೆ ಸಿಕ್ಕಿದ್ದು ಹುಲಿ ಬೇಟೆಗಾರನಷ್ಟೇ ಅಷ್ಟೇ ಅಲ್ಲ ರೊಮ್ಯಾಂಟಿಕ್ ಕೂಡ ಹೌದು.

ಹಿಂದೆ ಕಾಡಿನ ರಾಜ ಎಂದು ಸಿಂಹನಿಗೆ ಹೇಳುತ್ತಿದ್ದರು. ಕತೆಗಳಲ್ಲೂ ಸಿಂಹನೇ ರಾಜನಾಗಿರುತ್ತಿದ್ದ. ಈಗ ಸಿಂಹಗಳು ಎಲ್ಲಿವೆ. ಕರ್ನಾಟಕದಲ್ಲಂತೂ ಪ್ರಾಣಿ ಸಂಗ್ರಹಾಲಯಗಳಲ್ಲಷ್ಟೇ ಕಾಣಲು ಸಾಧ್ಯ. ಆ ಹಿನ್ನೆಲೆಯಲ್ಲಿ ಸದ್ಯದ ಮಟ್ಟಿಗೆ ಅಳಿವಿನಂಚಿನಲ್ಲಿರುವ ಹುಲಿಯೇ ಕಾಡಿನ ಬಲಿಷ್ಠ ಪ್ರಾಣಿ. ಆತನ ಕಿಲಾಡಿತನ ತಿಳಿದರೆ ಬಲು ಜೋರು ಎನಿಸುತ್ತದೆ.

ಹುಲಿಗಳು ಯಾವತ್ತಿಗೂ ಗುಂಪಾಗಿ ಜೀವಿಸುವುದೇ ಇಲ್ಲ. ಅದು ಒಂಟಿ ಜೀವಿ. ಹಾಗಾಗಿ ಅವುಗಳಲ್ಲಿ ಕದನಗಳು ಆಗಾಗ ನಡೆಯುತ್ತಿರುತ್ತವೆ. ಅದೇ ಕುತೂಹಲ ಹಿಡಿದು ಒಂದಷ್ಟು ಪುಸ್ತಕಗಳನ್ನು ತಿರುವಿದಾಗ ತಿಳಿಯಿತು. ಹುಲಿಗಳ ಕಾದಾಟಕ್ಕೆ ಏನು ಕಾರಣ ಎಂದು.

ಭಾರತದ ರಾಜ ಪರಂಪರೆ ರೀತಿಯಲ್ಲಿಯೇ ಹುಲಿಗಳು ಕಾಡಿನೊಳಗೆ ತಮ್ಮದೇ ಸಾಮ್ರಾಜ್ಯ ಸ್ಥಾಪಿಸಿಕೊಂಡಿರುತ್ತವೆ. ಆ ಪ್ರದೇಶಕ್ಕೆ ತಾನೊಬ್ಬನೇ ಪಾಳೆಗಾರನಾಗಿ ಇರಬೇಕು ಎನ್ನುವುದು ಹುಲಿಯ ಸಹಜ ಗುಣ.

ಮೂತ್ರದಿಂದಲೇ ಗಡಿ ನಿಗದಿ
ಹುಲಿಗಳು ತನ್ನ ಪ್ರಾಂತ್ಯವನ್ನು ಸ್ಪಷ್ಟವಾಗಿ ನಿಗದಿಮಾಡಿಕೊಂಡು ಅದರೊಳಗೆ ಒಂಟಿಯಾಗಿ ಜೀವಿಸುತ್ತವೆ. ಹುಲಿಯ ಸರಹದ್ದಿನ ವ್ಯಾಪ್ತಿ ಆ ಪ್ರದೇಶದಲ್ಲಿ ದೊರೆಯುವ ಬೇಟೆ ಆದಾರದ ಮೇಲೆ ನಿರ್ಧಾರವಾಗಿತ್ತದೆ. ಗಂಡು ಹುಲಿಗಾದರೆ ಆ ಸುತ್ತಲಿನ ಪರಿಸರದಲ್ಲಿ ಇರಬಹುದಾದ ಹೆಣ್ಣು ಸಂಗಾತಿಗಳ ಮೇಲೆ ನಿರ್ಧಾರಿತವಾಗುತ್ತದೆ.

ಸಾಮಾನ್ಯವಾಗಿ ಹೆಣ್ಣು ಹುಲಿಯ ಪ್ರಾಂತ್ಯ 2೦ ಚದರ್ ಕಿ.ಮೀ. ಇದ್ದರೆ ಒಂದು ಗಂಡು ಹುಲಿಯ ಪ್ರಾಂತ್ಯ 6೦ ರಿಂದ 1೦೦ ಚದರ್ ಕಿ.ಮೀ. ವಿಸ್ತಾರವಾಗಿರುತ್ತದೆ. ಒಂದು ಗಂಡು ಹುಲಿಯ ಪ್ರಾಂತ್ಯವು ಹಲವು ಹೆಣ್ಣು ಹುಲಿಗಳ ಸರಹದ್ದನ್ನು ಸಹ ಒಳಗೊಂಡಿರುತ್ತದೆ.

ತಮ್ಮ ಸರಹದ್ದನ್ನು ಮರಗಳನ್ನು ಮೂತ್ರದಿಂದ ಗುರುತುಮಾಡಿ ನಿಗದಿಮಾಡಿಕೊಳ್ಳುತ್ತವೆ. ಗಡಿಯುದ್ದಕ್ಕೂ ಮಲದಿಂದ ಗುರುತಿನ ಚಿಹ್ನೆಗಳನ್ನು ಹಾಕಿರುತ್ತವೆ. ಬೇರೆ ಹುಲಿಗಳು ಸಹ ಆ ಗಡಿಯನ್ನು ಅರಿಯುತ್ತವೆ. ತನ್ನ ಪ್ರಾಂತ್ಯದೊಳಗೆ ಮತ್ತೊಂದು ಗಂಡು ಹುಲಿ ವಾಸಿಸುವುದನ್ನು ಹುಲಿ ಸಾಮಾನ್ಯವಾಗಿ ಸಹಿಸುವುದಿಲ್ಲ.

ಅಲ್ಲದೆ, ಗಂಡು ಹುಲಿಗಳು ಮತ್ತೊಂದು ಹುಲಿಗಳೊಂದಿಗೆ ಸೇರುವುದಿಲ್ಲ. ಆದರೆ, ಹೆಣ್ಣು ಹುಲಿಗಳೊಂದಿಗೆ ಈ ನಿಯಮಕ್ಕೆ ವಿನಾಯಿತಿ ಮಾಡಿಕೊಂಡಿವೆ. ಬೇಟೆಯನ್ನು ಕೆಲವೊಮ್ಮೆ ಹೆಣ್ಣು ಹುಲಿಯೊಂದಿಗೆ ಸೇರಿ ಉಣ್ಣುವುದನ್ನು ವನ್ಯಜೀವಿ ತಜ್ಞರು ಸಾಕ್ಷೀಕರಿಸಿದ್ದಾರೆ. ಆದರೆ, ಹೆಣ್ಣು ಹುಲಿಯು ಎಂದಿಗೂ ಗಂಡು ಹುಲಿಯನ್ನು ತನ್ನ ಮರಿಗಳ ಬಳಿ ಸುಳಿಯಲು ಬಿಡುವುದಿಲ್ಲ.

ಬೆಳೆಯುತ್ತಲೇ ದೂರ ದೂರ
ಹುಲಿಯ ಹೆಣ್ಣು ಮರಿಗಳು ಪ್ರೌಢಾವಸ್ಥೆಯನ್ನು ತಲುಪಿ ತನ್ನದೇ ಆದ ನೆಲೆಯನ್ನು ಸ್ಥಾಪಿಸುವಾಗ ಮೊದಲು ತಮ್ಮ ತಾಯಿಯ ವಾಸಸ್ಥಳದ ಆಸುಪಾಸಿನಲ್ಲಿಯೇ ಜಾಗ ಹುಡುಕುತ್ತವೆ. ಆದರೆ, ಗಂಡು ಮರಿಯು ಪ್ರಾರಂಭದಲ್ಲಿಯೇ ತನ್ನ ತಾಯಿ ಮತ್ತು ಸೋದರಿಯರಿಂದ ದೂರ ಸಾಗಿ ತನ್ನ ಪ್ರತ್ಯೇಕ ನೆಲೆಯನ್ನು ಗುರುತಿಸಿಕೊಳ್ಳುತ್ತದೆ.

ಮೊದಮೊದಲು ಗಂಡು ಮರಿಯು ಹುಲಿರಹಿತ ಪ್ರದೇಶದಲ್ಲಿ ಅಥವಾ ಇನ್ನೊಂದು ದೊಡ್ಡ ಗಂಡು ಹುಲಿಯ ಪ್ರಾಂತ್ಯದ ಒಂದು ಭಾಗದಲ್ಲಿ ಜೀವನ ಆರಂಭಿಸುತ್ತದೆ. ಬೆಳೆದು ಬಲಶಾಲಿಯಾಗುತ್ತಿದ್ದಂತೆ ಕ್ರಮೇಣ ಅಲ್ಲಿನ ಮೂಲ ಗಂಡು ಹುಲಿಗೆ ಸವಾಲೆಸೆಯುತ್ತದೆ. ಆ ಸಂದರ್ಭದಲ್ಲಿ ಭೀಕರ ಕಾಳಗ ನಡೆದು ಕಡಿಮೆ ಬಲವುಳ್ಳ ಹುಲಿ ಸಾಯುತ್ತದೆ ಅಥವಾ ಪ್ರಾಂತ್ಯವನ್ನೇ ಬಿಟ್ಟು ಓಡಿಹೋಗುತ್ತದೆ. ಕಾಡಿನ ಹುಲಿಗಳಲ್ಲಿ ಯುವ ಗಂಡು ಹುಲಿಗಳ ಸಾವಿಗೆ ಇದು ದೊಡ್ಡ ಕಾರಣ ಎನ್ನುತ್ತಾರೆ ವನ್ಯಜೀವಿ ತಜ್ಞರು.

ಪರಸ್ಪರ ಅಸಹನೆಗೆ ಕಾದಾಟ
ಗಂಡು ಹುಲಿಗಳಲ್ಲಿ ಪರಸ್ಪರರ ಬಗ್ಗೆ ಅಸಹನೆ ಹೆಣ್ಣು ಹುಲಿಗಳಿಗಿಂತ ಅಧಿಕ. ಸರಹದ್ದುಗಳ ವ್ಯಾಪ್ತಿಯ ಬಗ್ಗೆ ವಿವಾದವುಂಟಾದಾಗ ಮುಖಾಮುಖಿ ಏರ್ಪಡುತ್ತವೆ. ಆದರೆ ಈ ಸನ್ನಿವೇಶದಲ್ಲಿ ಘೋರ ಕಾಳಗ ಅಪರೂಪ. ತಮ್ಮ ತಮ್ಮ ಶಕ್ತಿ ತೋರಿಸುತ್ತ ಎದುರಾಳಿ ಯನ್ನು ಹೆದರಿಸುವ ಯತ್ನಗಳು ಹೆಚ್ಚಾಗಿರುತ್ತವೆ. ಸೋಲೊಪ್ಪುವ ಹುಲಿಯು ತನ್ನ ಬೆನ್ನ ಮೇಲೆ ಉರುಳಿ ಹೊಟ್ಟೆಯ ಕೆಳಭಾಗವನ್ನು ಎದುರಾಳಿಗೆ ತೋರಿಸುವುದು ಶರಣಾಗತಿಯ ಸೂಚನೆ. ಇಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ವಿಜೇತ ಹುಲಿಯು ಸೋತವನನ್ನು ತನ್ನ ಪ್ರಾಂತ್ಯದಲ್ಲಿಯೇ ಉಳಿಯಗೊಡುವುದು ಸಹ ಇದೆ.

ಆದರೆ, ಗಂಡು ಹುಲಿಗಳ ನಡುವೆ ತೀವ್ರ ವಿವಾದ ಒಂದು ಹೆಣ್ಣಿನ ಬಗ್ಗೆ ಸಂಭವಿಸುವುದು. ಇಂತಹ ಸಂದರ್ಭಗಳಲ್ಲಿ ನಡೆಯುವ ಕದನ ಒಮ್ಮೊಮ್ಮೆ ಹುಲಿಯ ಸಾವಿನೊಂದಿಗೆ ಮುಗಿಯುತ್ತದೆ.

ಕಾಡಿನ ರಣ ಬೇಟೆಗಾರ
ಹುಲಿ ಸಾಮಾನ್ಯವಾಗಿ ಸತ್ತು ಬಿದ್ದಿರುವ ಪ್ರಾಣಿಯ ಮಾಂಸವನ್ನು ಮುಟ್ಟುವುದಿಲ್ಲ. ಅದು ಬೇಟೆಯಾಡಿಯೇ ತಿನ್ನುತ್ತದೆ. ಯಾವುದೇ ಪ್ರಾಣಿಯನ್ನು ಬೇಟೆಯಾಡುವಾಗಲು ಹುಲಿ ಮೊದಲು ಅದನ್ನು ಅಟ್ಟಾಡಿಸುತ್ತದೆ. ನಂತರ ಕುತ್ತಿಗೆಯನ್ನೇ ಕಚ್ಚಿ ಕೊಲ್ಲುತ್ತದೆ. ಕಾಡುಕೋಣ ಹುಲಿಯ ಮೆಚ್ಚಿನ ಆಹಾರದಲ್ಲಿ ಒಂದು. ಮುದಿ ವಯಸ್ಸಿನಲ್ಲಿ ಅಥವಾ ಪೆಟ್ಟಾಗಿ ದುರ್ಬಲವಾದಾಗ ಕೆಲವೊಮ್ಮೆ ಮಾನವರ ಮೇಲೂ ದಾಳಿ ಮಾಡುತ್ತದೆ. ಮೊಲ, ಹಸು, ಮೊಸಳೆ, ನವಿಲು, ಹೆಬ್ಬಾವುಗಳನ್ನೂ ತಿನ್ನುತ್ತವೆ.