
ಆನ್ ಲೈನ್ ಶಿಕ್ಷಣ ನೀಡಲು ಮರವೇರಿ ಕುಳಿತ ಶಿಕ್ಷಕ; ಬೇವಿನ ಮರದ ಮೇಲಿಂದಲೇ ಪಾಠ

ಬೇಡಿಕೆ ಈಡೇರಿಸಿಕೊಳ್ಳುವುದಕ್ಕಾಗಿ ಮೊಬೈಲ್ ಟವರ್ ಏರಿದವರ ಸುದ್ದಿ ಕೇಳಿದ್ದೇವೆ. ಮನೆಯಲ್ಲಿ ಹಠ ಮಾಡಿ ಮರ ಏರಿ ಕುಳಿದ ಮಕ್ಕಳನ್ನೂ ನೋಡಿದ್ದೇವೆ. ಇಲ್ಲೊಬ್ಬ ಶಿಕ್ಷಕ ಮಕ್ಕಳಿಗೆ ಆನ್ ಲೈನ್ ನಲ್ಲಿ ಪಾಠ ಮಾಡುವ ಸಲುವಾಗಿಯೇ ಮರವೇರಿ ಕುಳಿತಿದ್ದಾರೆ.
ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಪಾಠ ಮಾಡುವ ಸಲುವಾಗಿ ನೆಟ್ವರ್ಕಗಾಗಿ ಹಳ್ಳಿಯ ಹೊಲದಲ್ಲಿದ್ದ ಬೇವಿನ ಮರ ಏರಿದ್ದಾರೆ. ನಿತ್ಯ ಅಲ್ಲಿಂದಲೇ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಆ ಶಿಕ್ಷಕನ ವೃತ್ತಿ ನಿಷ್ಠೆ ಈಗ ದೇಶದ ಗಮನ ಸೆಳೆದಿದೆ.
ಕೋಲ್ಕತ್ತ ಮೂಲದ ಇತಿಹಾಸ ವಿಷಯ ಶಿಕ್ಷಕ ಸುಭ್ರತಾ ಪಾಠಿ ಎನ್ನುವವರು ಇಂಥದ್ದೊಂದು ವೃತ್ತಿ ನಿಷ್ಠೆಯಿಂದ ಸುದ್ದಿಯಾಗಿದ್ದಾರೆ. ಲಾಕ್‌ಡೌನ್ ವೇಳೆ ತಮ್ಮ ಕರ್ತವ್ಯ ನಿರ್ವಹಿಸಲು ಯಾವುದೇ ಹಿಂಜರಿಕೆ ಇಲ್ಲದೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ.
ಸುಭ್ರತಾ ಅವರು ಕೋಲ್ಕತ್ತ ನಗರದಿಂದ 200 ಕಿ.ಮೀ ದೂರದಲ್ಲಿರುವ ಹಳ್ಳಿಯಿಂದ ಮಕ್ಕಳಿಗೆ ಆನ್‌ಲೈನ್ ಮೂಲಕ ಶಿಕ್ಷಣ ನೀಡುತ್ತಿದ್ದಾರೆ. ಹೀಗೆ ಶಿಕ್ಷಣ ನೀಡುವ ಸಲುವಾಗಿ ಅವರು ಮಾಡಿದ ಸಾಹಸವೇ ಬಲು ರೋಚಕವಾಗಿದೆ.
ಕೋಲ್ಕತ್ತದ ಎರಡು ಶಿಕ್ಷಣ ಸಂಸ್ಥೆಗಳಲ್ಲಿ ಇತಿಹಾಸ ಶಿಕ್ಷಕರಾಗಿ ಸುಭ್ರತಾ ಪಾಠಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಲಾಕ್‌ಡೌನ್ ನಿಂದಾಗಿ ಎಲ್ಲೆಡೆ ಆನ್ ಲೈನ್ ಶಿಕ್ಷಣ ನಡೆಯುತ್ತಿದೆ. ಅದೇ ರೀತಿ ಸುಭ್ರತಾ ಅವರು ಸಹ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ನೀಡಲು ನೆಟ್ವರ್ಕ್ ನೊಂದಿಗೆ ಸಾಹಸ ಮಾಡುತ್ತಿದ್ದಾರೆ.
ಪಶ್ಚಿಮ ಬಂಗಳಾದ ಬಂಕುರ ಜಿಲ್ಲೆಯ ಅಹಂದ ಹಳ್ಳಿಯಲ್ಲಿರುವ ಸುಭ್ರತಾ ಅವರು ಆನ್ ಲೈನ್ ಕ್ಲಾಸ್ ಆರಂಭಿಸಲು ಮುಂದಾದಾಗ ಮೊಬೈಲ್ ನೆಟ್ವರ್ಕ್ ಸಮಸ್ಯೆ ಎದುರಾಯಿತು. ಮೊಬೈಲ್ ಪರದೆ ಮೇಲೆ ನೆಟ್ವರ್ಕ್ ಕಾಣಿಸಿದರೂ ಮರು ಕ್ಷಣದಲ್ಲಿ ಮಾಯವಾಗುತ್ತಿತ್ತು. ಏನು ಮಾಡಿದರೂ ಸರಿಯಾಗಿ ನೆಟ್ವರ್ಕ್ ಸಿಗದೆ ಇದ್ದಾಗ ಅವರಿಗೆ ಆಸರೆಯಾಗಿದ್ದು ಬೇವಿನ ಮರ. ಮರದ ಮೇಲೆ ಮೊಬೈಲ್ ಗೆ ನೆಟ್ವರ್ಕ್ ಸಿಕ್ಕಿದ್ದರಿಂದ ಅಲ್ಲಿಂದಲೇ ಬೋಧನೆ ಆರಂಭಿಸಿದ್ದಾರೆ.
ಸುಭ್ರತಾ ಅವರು ನೆಟ್ವರ್ಕ್ ನೆಪ ಹೇಳಿ ಕರ್ತವ್ಯದಿಂದ ನುಣುಚಿಕೊಳ್ಳಬಹುದಿತ್ತು. ಹಾಗೆ ಮಾಡದೆ ಮನೆಯ ಸಮೀಪದ ಹೊಲದಲ್ಲಿರುವ ಬೇವಿನ ಮರ ಹತ್ತಿದ್ದಾರೆ. ಸ್ನೇಹಿತರ ಸಹಾಯ ಪಡೆದು ಮರದ ಮೇಲೆ ಸುರಕ್ಷಿತವಾಗಿ ಕುಳಿತುಕೊಳ್ಳಲು ಬಿದಿನಿಂದ ಅಟ್ಟದ ರೀತಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪ್ರತಿದಿನ ಬೆಳಿಗ್ಗೆ ಮರವೇರಿ ಕುಳಿತು ಪಾಠ ಮಾಡುತ್ತಿದ್ದಾರೆ. ನೆಟ್‌ವರ್ಕ್ ಸಮಸ್ಯೆ ಇಲ್ಲದೇ ವರ್ಕ್ ಫ್ರಮ್ ಹೋಮ್ ಕೆಲಸ ನಿರ್ಹಿಸುತ್ತಿದ್ದಾರೆ.
ಗಾಳಿ, ಬಿಸಿಲಿಗೂ ಜಗ್ಗದೆ ಪಾಠ
ಮರ ಅಂದ ಮೇಲೆ ಗಾಳಿಯ ರಭಸ ಎದುರಿಸಲೇ ಬೇಕು. ಅದರಂತೆ ಸುಭ್ರತಾ ಅವರು ಬೇವಿನ ಮರದಲ್ಲಿ ಬಿಸಿಲು, ಗಾಳಿ ಸಮಸ್ಯೆ ಕಾಡುತ್ತಿದೆಯಂತೆ. 35 ವರ್ಷದ ಸುಭ್ರತಾ ಅವರು ಅದನ್ನೆಲ್ಲ ನಿರ್ವಹಿಸುತ್ತಿದ್ದಾರೆ.
ಬೆಳಗ್ಗೆ ಬೇವಿನ ಮರ ಏರುವಾಗಲೇ ನೀರು, ಒಂದಷ್ಟು ಆಹಾರ ತೆಗೆದುಕೊಂಡು ಹೋಗುತ್ತಾರೆ. ಆಗಾಗ ಶೌಚಾಲಯಕ್ಕೂ ಹೋಗಬೇಕಾಗುತ್ತದೆ. ಅದೆಲ್ಲದಕ್ಕೂ ಸುಭ್ರತಾ ಅವರು ತಕ್ಕಮಟ್ಟಿಗೆ ವ್ಯವಸ್ಥೆ ಮಾಡಿಕೊಂಡಿದ್ದಾರಂತೆ.
“ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೋಲ್ಕತ್ತದಿಂದ ನನ್ನ ಹುಟ್ಟೂರು ಅಹಂದಗೆ ಪ್ರಯಾಣ ಬೆಳೆಸಿದೆ. ಆದರೆ, ಊರಿನಲ್ಲಿ ನೆಟ್‌ವರ್ಕ್ ಸಮಸ್ಯೆ ಇದ್ದ ಕಾರಣ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಾಯಿತು. ನನ್ನ ಈ ಪ್ರಯತ್ನಕ್ಕೆ ವಿದ್ಯಾರ್ಥಿಗಳೇ ಸ್ಪೂರ್ತಿ. ನನಗೂ ಪಾಠ ಬೋಧನೆ ಖುಷಿ ಕೊಡುತ್ತಿದೆ’ ಎನ್ನುತ್ತಾರೆ ಸುಭ್ರತಾ ಪಾಠಿ.