
ತೆಪ್ಪಸಾಲು ಅರಣ್ಯದೊಳಗಿನ ಮರಳಿನ ತೀರ: ಪಶ್ಚಿಮ ಘಟ್ಟದ ವಂಡರ್ ಬೀಚ್

ಮರಳಿನ ಮೇಲಿನ ಆಟ, ಕಡಲಿನ ತೀರ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರವಾಸದಲ್ಲಿ ವಿಶೇಷ ಅನುಭವ ಕೊಡುವ ಪ್ರಕೃತಿಯ ವಿಸ್ಮಯ ತಾಣಗಳು ಅವು. ಮರಳು ಎಂದ ಕೂಡಲೆ ನಮಗೆ ಮೊದಲು ನೆನಪಾಗುವುದು ಸಮುದ್ರದ ತೀರಗಳು. ಆದರೆ, ಅರಣ್ಯದೊಳಗೆ ಅಂಥದ್ದೇ ವಿಶಾಲವಾದ ಮರಳಿನ ತೀರ ಸಿಕ್ಕರೆ ಹೇಗೆ?
ಆಶ್ಚರ್ಯಪಡಬೇಡಿ. ಅಂಥದ್ದೇ ಸ್ಥಳವೊಂದರ ಮಾಹಿತಿ ಇಲ್ಲಿದೆ. ಸಮುದ್ರ ತೀರದಲ್ಲಿ ಇರುವಂತೆಯೇ ಮರಳಿನ ರಾಶಿ, ತಿಳಿಯಾದ ನೀರಿನ ತುಂಟಾಟ, ಪ್ರಕೃತಿಯೊಂದಿಗೆ ಇಂಪಾದ ಸಂವಾದ, ಚಾರಣ, ಫೈರ್ ಕ್ಯಾಂಪ್ ಹೀಗೆ ಮಲೆನಾಡು, ಕರಾವಳಿ, ಅರಣ್ಯದ ಸೊಬಗನ್ನು ಒಟ್ಟಿಗೇ ಅನುಭವಿಸಬಹುದು.
ಆ ಸ್ಥಳದ ಹೆಸರು ‘ತೆಪ್ಪಸಾಲು’. ಇದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನಿಂದ 30 ಕಿ.ಮೀ. ದೂರದ ಹಾವಿನಬೀಳು ಗ್ರಾಮದಲ್ಲಿ ಇದೆ. ಅಘನಾಶಿನಿ ನದಿ ದಡದಲ್ಲಿರುವ ಈ ಪ್ರದೇಶ ಸಮುದ್ರದ ಮರಳಿನ ತೀರದಂತೆ ವಿಶಾಲವಾಗಿಯೂ, ಮನೋಹರವಾಗಿಯೂ ಕಾಣುತ್ತದೆ.
ಪ್ರಕೃತಿ ಮಡಿಲಲ್ಲಿ ಹಾದು ಹೋಗುವ ನದಿಯು ತನ್ನ ಸೌಂದರ್ಯದಿಂದ ಕಣ್ಸೆಳೆಯುತ್ತದೆ. ಅದರಲ್ಲೂ ನಿಸರ್ಗ ಪ್ರೇಮಿಗಳಿಗಂತೂ ಹಬ್ಬದ ವಾತಾವರಣ ಸೃಷ್ಠಿಸುತ್ತದೆ. ನಿಸರ್ಗ ಫೋಟೊಗ್ರಾಫಿಗೆ ಹೇಳಿ ಮಾಡಿಸಿದ ತಾಣ ಎಂದರೆ ತಪ್ಪಾಗಲಾರದು.
ಸಿದ್ದಾಪುರ ತಾಲ್ಲೂಕಿನಲ್ಲಿ ಬೇರೆಲ್ಲೂ ಈ ರೀತಿಯ ನದಿತೀರ ಕಾಣಸಿಗುವುದು ಅಪರೂಪ. ಮಕ್ಕಳಿಗೆ ನೀರಿನಾಟ, ಮರಳಿನಾಟ ಆಡಲು ಸೂಕ್ತವಾದ ಸ್ಥಳ. ಅಷ್ಟೇ ಅಲ್ಲದೇ ರಾತ್ರಿ ಫೈರ್ ಕ್ಯಾಂಪ್ ಮಾಡಲೂ ಸಹ ಅತ್ಯಂತ ಯೋಗ್ಯವಾದ ಸ್ಥಳ. ಕುಟುಂಬದೊಂದಿಗೆ, ಸ್ನೇಹಿತರೊಂದಿಗೆ ನಿಸರ್ಗದ ಸೌಂದರ್ಯ ಸವಿಯಲು ಯೋಗ್ಯ ಸ್ಥಳ.
ನದಿ ತೀರದ ಗುಂಟ ವಿಶಾಲವಾದ ಮರಳಿನ ದಿಬ್ಬ ಸಮುದ್ರ ತೀರದಂತೆಯೇ ಕಾಣುತ್ತದೆ. ಅದರ ಒಂದು ಬದಿಯಲ್ಲಿ ಮರಗಳ ರಾಶಿ ಇದೆ. ನೆರಳಿನಲ್ಲಿ ಸಹ ಭೋಜನ ತುಂಬಾ ಖುಷಿ ಕೊಡುತ್ತದೆ. ಈ ಸ್ಥಳವನ್ನು ಗೂಗಲ್ ಮ್ಯಾಪ್‍ನಲ್ಲಿಯೂ ಗುರುತಿಸಬಹುದು.

ಈ ಸ್ಥಳಕ್ಕೆ ‘ಗೇಜ್‍ಕಟ್’ ಎಂದೂ ಕರೆಯುತ್ತಾರೆ. ಸುಮಾರು 40 ವರ್ಷಗಳ ಹಿಂದೆ ಕರ್ನಾಟಕ ಸರ್ಕಾರ ಈ ಸ್ಥಳದಲ್ಲಿ ಅಣೆಕಟ್ಟು ನಿರ್ಮಿಸಲು ಗುರುತಿಸಿತ್ತು. ಅಂದಾಜು 9 ವರ್ಷಗಳವರೆಗೆ ಮಳೆಗಾಲ ಹಾಗೂ ಬೇಸಿಗೆಗಾಲದಲ್ಲಿ ನೀರಿನ ಹರಿಯುವಿಕೆಯ ವೇಗವನ್ನು ಪರೀಕ್ಷಿಸಿದ್ದರು. ಅಲ್ಲದೇ ನದಿಯ ಮಧ್ಯ ಭಾಗದಲ್ಲಿರುವ ಬಂಡೆಗಲ್ಲುಗಳನ್ನು ಸಿಡಿಮದ್ದುಗಳಿಂದ ಸ್ಪೋಟಿಸಿ, ಸಮತಟ್ಟು ಮಾಡಿ ಕಾಂಕ್ರಿಟ್‍ನ ಅಡಿಪಾಯ ಹಾಕಿ ನೀರು ಒಂದೇ ಅಳತೆಯಲ್ಲಿ ಹರಿಯುವಂತೆ ಮಾಡಿದ್ದಾರೆ.
ಈ ಕಾಂಕ್ರಿಟ್ ಅಡಿಪಾಯ ಈಗಲೂ ಇದೆ. ಮಣ್ಣಿನ ಪರೀಕ್ಷೆಗಾಗಿ ನದಿಯ ಎರಡೂ ದಂಡೆಯ ಮೇಲೆ ನಿರ್ಮಿಸಿದ ಬಾವಿಯಾಕಾರದ ಹೊಂಡಗಳು ಕಾಣಬಹುದು. ತಾಂತ್ರಿಕ ಕಾರಣಗಳಿಂದಾಗಿ ಅಣೆಕಟ್ಟು ನಿರ್ಮಿಸುವುದು ಅಸಾಧ್ಯವಾದ್ದರಿಂದ 1979ರಲ್ಲಿ ಕೆಲಸ ಸ್ಥಗಿತಗೊಳಿಸಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಹೋಗುವುದು ಹೇಗೆ?
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಿಂದ ಬಿಳಗಿ ಮಾರ್ಗವಾಗಿ ಸೋವಿನಕೊಪ್ಪದಿಂದ ಬರಬಹುದು ಅಥವಾ ಸಿದ್ದಾಪುರದಿಂದ ಹಾರ್ಸಿಕಟ್ಟಾ ಮಾರ್ಗವಾಗಿ ಚಿಟ್ಟಟ್ಟೆಮನೆ ಮಾರ್ಗವಾಗಿಯೂ ಬರಬಹುದು. ಹುಲ್ಕುತ್ರಿ ಸರಕಾರಿ ಶಾಲೆಯಿಂದ ಅಂದಾಜು 2.5 ಕಿ.ಮೀ. ಕಿರಿದಾದ ರಸ್ತೆಯ ಮೂಲಕ ಸಾಗಿದರೆ ಅರಣ್ಯದೊಳಗಿನ ಮರಳಿನ ತೀರವನ್ನು ಸೇರಬಹುದು.
ಚಿತ್ರ, ವಿಡಿಯೊ, ಲೇಖನ: ದರ್ಶನ ಹರಿಕಂತ್ರ.
ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹುಲ್ಕುತ್ರಿ.