ರೇಷ್ಮೆ ಕೃಷಿಯಲ್ಲಿ ರೇಷ್ಮೆ ಹುಳು ಸಾಕಾಣಿಕೆಯನ್ನು ಯಶಸ್ವಿಯಾಗಿ ಮಾಡಲು, ಸಾಕಾಣಿಕೆ ಮನೆ ಮತ್ತು ಹುಳು ಗೂಡು ಕಟ್ಟಿಸಲು ಅನೇಕ ವಿಧದ ಸಲಕರಣೆಗಳು ಅಗತ್ಯ. ಈ ಎಲ್ಲ ವ್ಯವಸ್ಥೆಗಳು ರೇಷ್ಮೆ ಮೊಟ್ಟೆಗಳ ಪ್ರಮಾಣದ ಆಧಾರದ ಮೇಲೆ ನಿರ್ಧರಿತವಾಗುತ್ತವೆ. ರೇಷ್ಮೆ ಮನೆ ಹೇಗಿರಬೇಕು ಎನ್ನುವ ಬಗ್ಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಯೋಜನಾಬದ್ಧವಾದ ವೈಜ್ಞಾನಿಕ ಸಲಹೆಗಳನ್ನು ನೀಡಿದೆ. ಅದರ ವಿವರ ಇಲ್ಲಿದೆ.

ಒಂದು ಎಕರೆ ನೀರಾವರಿ ತೋಟಕ್ಕೆ ಎರಡು ತಾಕುಗಳಿಗೆ 300 ಮೊಟ್ಟೆಗಳ ಸಾಕಾಣಿಕೆಗೆ ಬೇಕಾದ ಸಲಕರಣೆಗಳು.

ಹುಳು ಸಾಕಾಣಿಕೆ ಮನೆ: ಚಾಕಿ ಸಾಕಾಣಿಕೆ ಮನೆ 10*12 ಮತ್ತು ಪಡಸಾಲೆ.
ಬೆಳೆದ ಹುಳು ಸಾಕಾಣಿಕೆ ಮನೆ: 22*60 ವಿಸ್ತೀರ್ಣ (5 ಅಂತಸ್ತಿನ ಮೇಜು ಎರಡು ಸಾಲುಗಳಲ್ಲಿಟ್ಟು ಹುಳು ಸಾಕಾಣಿಕೆ ಮಾಡಲು 50*20 ವಿಸ್ತೀರ್ಣ+ಸೊಪ್ಪು ಶೇಖರಣೆ ಕೊಠಡಿ 12*10 +ಊಜಿ ನಿಯಂತ್ರಣ ಉಪಕೊಠಡಿ 7*10).
ಗೂಡುಕಟ್ಟಿಸುವ ಮನೆ: 80*15.

ಈ ಮನೆಗಳು ನೊಣ, ಇಲಿ ಇನ್ನಿತರ ಪ್ರಾಣಿಗಳು ನುಸುಳದಂತೆ, ಸೋಂಕು ನಿವಾರಣೆ ಮಾಡುವಂತೆ ನಿರ್ಮಾಣವಾಗಿರಬೇಕು. ರೇಷ್ಮೆ ಹುಳುಗಳ ಬೆಳವಣಿಗೆಗೆ ಬೇಕಾದ ಉಷ್ಣಾಂಶ, ತೇವಾಂಶ, ಗಾಳಿ ಸಂಚಾರ, ರೋಗ ರಹಿತ ವಾತಾವರಣ, ಬೆಳಕಿನಂಥ ಸೂಕ್ತ ವಾತಾವರಣ ಇರಬೇಕು.

ಉಷ್ಣವಲಯ ಪ್ರದೇಶದಲ್ಲಿ ಕಟ್ಟುವ ಹುಳು ಸಾಕಾಣಿಕೆ ಮನೆಯು ಉಷ್ಣಾಂಶವನ್ನು ಕಡಿಮೆ ಮತ್ತು ತೇವಾಂಶವನ್ನು ಹೆಚ್ಚಿಸಲು ಅನುಕೂಲವಾಗುವಂತೆ ಇರಬೇಕು. ಸಾಕಾಣಿಕೆ ಮನೆಯ ವಿಸ್ತೀರ್ಣ ಮೊಟ್ಟೆಗಳ ಪ್ರಮಾಣವನ್ನು ನಿರ್ಧರಿಸಿದ್ದು, ಆ ಪ್ರಕಾರವೇ ಮನೆ ನಿರ್ಮಾಣ ಮಾಡಬೇಕು.

ಮನೆ ಕಟ್ಟುವ ಸ್ಥಳ ಹಿಪ್ಪುನೇರಳೆ ತೋಟದ ಸಮೀಪ ಅಥವಾ ತೋಟದಲ್ಲಿಯೇ ಇದ್ದರೆ ಉತ್ತಮ. ಸಾಧ್ಯವಾದಷ್ಟು ಎತ್ತರವಾದ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡಲು ಸೂಕ್ತವಾದ ಜಾಗದಲ್ಲಿ ಇರಬೇಕು.

ಪೂರ್ವ, ಪಶ್ಚಿಮ ದಿಕ್ಕಿನಲ್ಲಿ ಉದ್ದವಾಗಿರುವಂತೆ ಮನೆ ಕಟ್ಟುವುದು ಒಳ್ಳೆಯದು. ರೆಂಬೆ ಪದ್ಧತಿಯಲ್ಲಿ, ಒಂದು ರೋಗರಹಿತ ಮೊಟ್ಟೆಗೆ ಸರಾಸರಿ 4.0-4.5 ಚದರ್ ಅಡಿ ನೆಲದ ಅಳತೆಯಂತೆ ಸಾಕಾಣಿಕೆ ಮನೆ ಬೇಕಾಗುತ್ತದೆ.

ಮನೆಗಳನ್ನು ಸ್ಥಳೀಯವಾಗಿಯೇ ಸಿಗುವ ಟೊಳ್ಳು ಇಟ್ಟಿಗೆಯಿಂದ ದಪ್ಪನೆ ಗೋಡೆ ಕಟ್ಟಬೇಕು. ಛಾವಣಿಗೆ ಹುಲ್ಲು ಸೋಗೆ ಗರಿ ಹೊದಿಸಬೇಕು. ಸೂರ್ಯನ ಶಾಖವನ್ನು ಹೀರದೆ ಹಿಂದಕ್ಕೆ ಪ್ರತಿಫಲಿಸುವಂತಹ ವಸ್ತುಗಳನ್ನು ಬಳಸುವುದು ಉತ್ತಮ.

ಮನೆಯ ಸುತ್ತ ಕನಿಷ್ಠ ಮೂರು ಅಡಿ ಅಗಲ ಮತ್ತು ಭೂಮಿಯಿಂದ ಮೂರು ಅಡಿ ಎತ್ತರದಲ್ಲಿ ಸಜ್ಜೆಯನ್ನು ನಿರ್ಮಿಸಬೇಕು. ಅದರಿಂದ ಮನೆ ಶುಭ್ರವಾಗಿ ಇಟ್ಟುಕೊಳ್ಳಬಹುದು.

ಎಲ್ಲಾ ಗೋಡೆ ಮತ್ತು ನೆಲವು ನುಣುಪಾಗಿ ಸೋಂಕುಗಳನ್ನು ನಿವಾರಣೆ ಮಾಡಲು ಸಹಾಯಕವಾಗಿರಬೇಕು. ಗಾಳಿ ಸಂಚಾರಕ್ಕೆ ಮನೆಯ ಪ್ರತಿ 10 ಅಡಿ ಉದ್ದಕ್ಕೆ ಒಂದು ಕಿಟಕಿ ಅಳವಡಿಸಬೇಕು. ಅದರ ಕೆಳಗೆ ಮತ್ತು ಮೇಲೆ ತಲಾ ಎರಡು ಗವಾಕ್ಷಿಗಳು ಅಳವಡಿಸಿರಬೇಕು.

ಕೃಪೆ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ