ರಿಷಿ ಕಪೂರ್ ಸಾವಿನಲ್ಲೂ ಹರಿದಾಡಿತು ಸುಳ್ಳು ಸುದ್ದಿ; ಅದು ಕೊನೆಯ ವಿಡಿಯೊ ಅಲ್ಲ

ಇಡೀ ಜಗತ್ತು ಸಾಂಕ್ರಾಮಿಕ COVID-19 ವಿರುದ್ಧ ಹೋರಾಡುತ್ತಿರುವಾಗ, ಭಾರತದ ಚಿತ್ರರಂಗವೂ ಒಬ್ಬರ ಹಿಂದೆ ಒಬ್ಬರಂತೆ ಮೇರು ನಟರನ್ನು ಕಳೆದುಕೊಳ್ಳುತ್ತಿದೆ. 24 ಗಂಟೆಗಳ ಅವಧಿಯಲ್ಲಿ ಬಾಲಿವುಡ್ ನಟ ಇರ್ಫಾನ್ ಖಾನ್ ಮತ್ತು ರಿಷಿ ಕಪೂರ್ ಅವರ ನಿಧನರಾಗಿದ್ದಾರೆ.
ಇಬ್ಬರೂ ನಟರ ಸಾವಿನ ಸುದ್ದಿಯಿಂದ ಸಿನಿ ಪ್ರೇಮಿಗಳು ಆಘಾತಕ್ಕೊಳಗಾಗಿರುವುದು ನಿಜ. ಆದರೆ ಇಂಥ ದುಃಖಕರ ಘಟನೆಗಳ ನಡುವೆಯೂ ಸುಳ್ಳು ಸುದ್ದಿಗಳು ಹರಡುವುದು ನಿಂತಿಲ್ಲ. ಬಾಲಿವುಡ್ ನ ಮೇರು ನಟ ರಿಷಿ ಕಪೂರ್ ಸಾವಿನ ನಡುವೆಯೂ ಅವರ ಕುರಿತು ಸುಳ್ಳು ಸುದ್ದಿಯೊಂದು ಹರಿದಾಡಿ ಎಲ್ಲೆಡೆ ವೈರಲ್ ಆಗುತ್ತಿದೆ.
ರಿಷಿ ಕಪೂರ್ ಅವರ ಕೊನೆಯ ವೀಡಿಯೊ ಎಂದು ಹೇಳಿಕೊಳ್ಳುವ ವೀಡಿಯೊವೊಂದು ಬಂದಿದೆ. ಅಲ್ಲಿ ರಿಷಿ ಕಪೂರ್ ಅವರು ಆಸ್ಪತ್ರೆ ಬೆಡ್ ಮೇಲೆ ಮಲಗಿಕೊಂಡೇ ವೈದ್ಯಕೀಯ ಸಿಬ್ಬಂದಿ ಹಾಡಿದ ಹಾಡನ್ನು ಕೇಳುತ್ತಿದ್ದಾರೆ.
ಈ ವಿಡಿಯೋವು ರಿಷಿ ಕಪೂರ್ ಅವರ ಕೊನೆಯ ವಿಡಿಯೋ ಮತ್ತು ಅವರು ಸಾವಿನ ಹಾಸಿಗೆಯ ಮೇಲೆ ಕಾಣಿಸಿಕೊಂಡಿದ್ದಾರೆ ಎಂದು ಹಲವರು ಹೇಳಿಕೊಳ್ಳುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿಯು ರಿಷಿ ಕಪೂರ್ ಅವರ ಚಲನಚಿತ್ರದ ಗೀತೆ ಹಾಡಿದಾಗ ರಿಷಿ ಕಪೂರ್ ಅವರು ಖುಷಿಯಾಗುತ್ತಾರೆ ಮತ್ತು ಆಸ್ಪತ್ರೆಯ ಸಿಬ್ಬಂದಿಯನ್ನು ಆಶೀರ್ವದಿಸುತ್ತಾರೆ. ಚೆನ್ನಾಗಿ ಹಾಡುತ್ತೀಯ. ಜೀವನದಲ್ಲಿ ಆಸ್ತಿ, ಅಂತಸ್ತು, ಹೆಸರು ಸುಮ್ಮನೆ ಬರುವುದಿಲ್ಲ. ಕಠಿಣ ಪರಿಶ್ರಮದಿಂದ ಮಾತ್ರ ಸಾಧ್ಯ ಎಂದು ಹೇಳುತ್ತಾರೆ. ಆ ವಿಡಿಯೊ ಈಗ ವೈರಲ್ ಆಗಿದೆ.

ನಮ್ಮ ಫ್ಯಾಕ್ಟ್ ಚೆಕ್ ತಂಡ ವೀಡಿಯೊ ಸತ್ಯವನ್ನು ಪರಿಶೀಲಿಸಲು ಮುಂದಾಯಿತು. ಗೂಗಲ್ ಹುಡುಕಾಟವು ಎರಡು ಯೂಟ್ಯೂಬ್ ಪೋಸ್ಟ್‌ಗಳಿಗೆ ನಮ್ಮನ್ನು ಕರೆದೊಯ್ಯಿತು. ಈ ವೀಡಿಯೊವನ್ನು ಮೊದಲು ಫೆಬ್ರವರಿ 2020 ರಲ್ಲಿ ಪೋಸ್ಟ್ ಮಾಡಲಾಗಿದೆ. ಅಂದರೆ ಇದು ಎರಡು ತಿಂಗಳ ಹಳೆಯ ವಿಡಿಯೊ. ಹೀಗಾಗಿ ಈ ವಿಡಿಯೋ ಮೇರು ನಟನ ಕೊನೆಯ ವಿಡಿಯೋ ಅಲ್ಲ ಎಂದು ಖಚಿತವಾಗಿ ಒಪ್ಪಬಹುದು.
ಇದನ್ನೂ ಓದಿ: ಹಿರೋಹಿನ್ ಆದರು ಸಂತೂರ್ ಮಮ್ಮಿ
ರಿಷಿ ಕಪೂರ್ ಅವರು ಕಳೆದ ಒಂದು ವರ್ಷದಿಂದ ಪದೇ ಪದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಅವರನ್ನು ದೆಹಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಸಂಜೆ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ (ಏಪ್ರಿಲ್ 30, 2020) ಬೆಳಿಗ್ಗೆ 8.45 ಕ್ಕೆ ಅವರು ನಿಧನರಾದರು.
ತೀರ್ಮಾನ: ವೀಡಿಯೊ ನಿಜ, ಆದರೆ ಇದು ಮೇರು ನಟನ ಕೊನೆಯ ವೀಡಿಯೊ ಅಲ್ಲ.
ಸೂಚನೆ: ಫೇಸ್‌ಬುಕ್, ಟ್ವಿಟರ್ ಮತ್ತು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ದಾರಿತಪ್ಪಿಸುವ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಅಥವಾ ಫಾರ್ವರ್ಡ್ ಮಾಡಬೇಡಿ. ಹಾಗೆ ಮಾಡುವುದರಿಂದ ಸುಳ್ಳು ಹರಡುವವರಲ್ಲಿ ನೀವು ಕೂಡ ಒಬ್ಬರಾಗುತ್ತೀರಿ. ಸುಳ್ಳು ಸುದ್ದಿ ಹರಡುವುದು ಶಿಕ್ಷಾರ್ಹ ಅಪರಾಧ.

Trackbacks/Pingbacks