ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ರೈತ ರವಿಲೋಚನ ಶ್ರೀನಿವಾಸ ಮಡಗಾಂವಕರ ಕೃಷಿಯಲ್ಲಿ ಸಾಫ್ಟ್‍ವೇರ್ ಎಂಜಿನಿಯರ್‍ಗಿಂತ ಹೆಚ್ಚು ದುಡಿಯುತ್ತಾರೆ. ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆದು ಸ್ವತಂತ್ರವಾಗಿ ಮಾರ್ಕೆಟಿಂಗ್ ಮಾಡುವುದು ಇವರ ಸ್ಪೇಷಾಲಿಟಿ. ಎಲ್ಲವೂ ಸಾವಯವ ಎನ್ನುವುದು ಈ ರೈತನ ಇಂಟೆಲಿಜೆನ್ಸಿ. ಇವರು ಕೃಷಿಯಲ್ಲಿಯೇ ವಾರ್ಷಿಕ 8.50 ಲಕ್ಷ ರೂ. ನಿವ್ವಳ ಲಾಭ ಗಳಿಸುತ್ತಾರೆ.

ಕೃಷಿ ಇವರಿಗೆ ಕೇವಲ ಹಣ ಗಳಿಕೆಯ ಮೂಲವಾಗಿರದೇ, ಅದೊಂದು ಫ್ಯಾಶನ್ ಕೂಡ ಹೌದು. ಕೃಷಿಯಲ್ಲಿಯ ಅವರ 55 ವರ್ಷಗಳ ಅನುಭವವನ್ನು ತೋಟದಲ್ಲಿ ಕಾಣಬಹುದು. ಸಿದ್ದಾಪುರ ತಾಲೂಕಿನ ಬಿಳಗಿ ಗ್ರಾಮದ ರೈತ ರವಿಲೋಚನ ಇವರು ಬರಡು ಭೂಮಿಯಲ್ಲೂ ಫಸಲು ತೆಗೆಯುವ ಕೃಷಿ ಡಾಕ್ಟರ್ ಇದ್ದಂತೆ.

ರೈತರ ಸೊರಗಿದ ಹೊಲ, ತೋಟಗಳನ್ನು ತಮ್ಮದೇ ತಂತ್ರದಿಂದ ನಳ ನಳಿಸುವಂತೆ ಮಾಡಿದ್ದಾರೆ. ಹಾಗಾಗಿ ಸುತ್ತ-ಮುತ್ತಲಿನ ಜನರಿಗೆಲ್ಲ ‘ರವಿ ರಾಯರು’ ಎಂದೇ ಚಿರಪರಿಚಿತರು.

ಹೇಗಿದೆ ಕೃಷಿ?

ರವಿಲೋಚನ ಸಿದ್ದಾಪುರ ತಾಲೂಕಿನ ಬಿಳಗಿ ಗ್ರಾಮದ ಪ್ರಗತಿಪರ ರೈತರು. ಎಸ್.ಎಸ್.ಎಲ್.ಸಿ.ಯವರೆಗೆ ವ್ಯಾಸಾಂಗ ಮಾಡಿದ್ದಾರೆ. ತಂದೆಯ ಅನಾರೋಗ್ಯದಿಂದ ಕುಟುಂಬದ ನಿರ್ವಹಣೆಗಾಗಿ ವಿದ್ಯಾಭ್ಯಾಸ ಮೊಟಕುಗೊಳಿಸಿ ಕೃಷಿ ಮಾಡಿ ಯಶಸ್ಸನ್ನು ಕಂಡಿದ್ದಾರೆ. ‘ಸಮಗ್ರ ಕೃಷಿ ಪದ್ಧತಿ’ ಅಳವಡಿಕೆಯಲ್ಲಿ ಉತ್ಪಾದನಾ ವೆಚ್ಚ ಕಡಿಮೆ ಮಾಡುವುದು ಹಾಗೂ ಉತ್ಪಾದನಾ ಮಟ್ಟ ಹೆಚ್ಚಿಸುವುದು ಇವರ ಉದ್ದೇಶ.

ಕೃಷಿಯಲ್ಲಿ ಅನೇಕ ನಾವಿನ್ಯ ತಾಂತ್ರಿಕತೆಗಳನ್ನು ಅನುಸರಿಸಿ ಆರ್ಥಿಕ ಸ್ಥಿರತೆಯಿಂದ ಸಾಧಕರಾಗಿ ವಾರ್ಷಿಕ 8.5 ಲಕ್ಷ ನಿವ್ವಳ ಆದಾಯ ಗಳಿಸುತ್ತಿದ್ದಾರೆ.         ತಮ್ಮ ಐದು ಎಕರೆ ಕೃಷಿ ಭೂಮಿಯಲ್ಲಿ ವಿವಿಧ ಬಗೆಯ 2000ಕ್ಕೂ ಹೆಚ್ಚು ಸಸ್ಯಗಳನ್ನು ಬೆಳೆಸಿ ಸಂರಕ್ಷಿಸಿದ್ದಾರೆ. 25 ಗುಂಟೆ ಭತ್ತದ ಕ್ಷೇತ್ರವನ್ನು ಒಳಗೊಂಡಂತೆ ಪ್ರಮುಖ ಬೆಳೆಯಾಗಿ ಅಡಿಕೆ ಬೆಳೆದು ಸಮಗ್ರ ಕೃಷಿ ಹಾಗೂ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಿದ್ದಾರೆ.

ತಮ್ಮ ತೋಟದಲ್ಲಿ 7 ಜಾತಿಯ ಕಾಳು ಮೆಣಸಿನ ಕಾಳುಗಳು, 5 ಜಾತಿಯ ಮಾವು, 3 ಜಾತಿಯ ಗೇರು, 3 ಜಾತಿಯ ತೆಂಗು ತಳಿಗಳನ್ನು ಸಂರಕ್ಷಿಸಿದ್ದಾರೆ. ಅಲ್ಲದೇ ಕೊಕೊ, ಹಲಸು, ಅಗಾರವುಡ್, ಸಿಲ್ವರ್ ಓಕ್, ಮಹಾಗನಿ, ಏಲಕ್ಕಿ, ಜಂಬೆ, ಅರಶಿಣ ಗಿಡಗಳು, ಜಾಯಿಕಾಯಿ, ಲವಂಗ, ದಾಲ್ಚಿನಿ, ಬಾಳೆಗಿಡ, ವಿವಿಧ ಜಾತಿಯ ಮೇವಿನ ಹುಲ್ಲುಗಳು, ತಿನ್ನುವ ಎಲೆ, ಪಪ್ಪಾಯಿ ಇನ್ನಿತರ ಬೆಳೆಗಳನ್ನು ತಮ್ಮ ತೋಟದಲ್ಲಿ ಬೆಳೆದಿದ್ದಾರೆ.

ತಮ್ಮ ಕೃಷಿ ಭೂಮಿಯ ಸುತ್ತಲೂ ಹಲಸು, ಮಾವು, ಗೇರು, ಗ್ಲಿರಿಸಿಡಿಯಾ, ಬಿದಿರು ಹೀಗೆ ಹಲವು ಜಾತಿಯ ಉಪಯುಕ್ತ ಕೃಷಿ ಅರಣ್ಯ ಮರಗಳನ್ನು ಬೆಳೆದಿದ್ದಾರೆ. ಪ್ರಮುಖ ಬೆಳೆಯ ಅಧಿಕ ಇಳುವರಿಯೊಂದಿಗೆ ಕಡಿಮೆ ಖರ್ಚಿನಲ್ಲಿ ಉಪ ಉತ್ಪನ್ನಗಳಿಂದ ಅಧಿಕ ಲಾಭ ಗಳಿಸುತ್ತಿದ್ದಾರೆ.

ಕೃಷಿಯಲ್ಲಿನ ವಿಶೇಷತೆಗಳು

* ಮಣ್ಣಿನ ಸಾರ ಸಂರಕ್ಷಿಸುವ ಸಲುವಾಗಿ ಜಮೀನಿನ ಬೆಳೆಗಳಿಗೆ ಪ್ಲಾಸ್ಟಿಕ್ ಮಲ್ಚಿಂಗ್ ಅಳವಡಿಸಿರುವುದು.

* ಅಡಿಕೆ ತೋಟದ ಮಧ್ಯೆ ಇರುವ ಕಾಲುವೆಗಳಲ್ಲಿ ಜೌಗು ತಡೆಗಟ್ಟಲು ಒಳಚರಂಡಿ ಮಾದರಿಯಲ್ಲಿ ಪೈಪ್‍ಗಳನ್ನು ಅಳವಡಿಸಿ ಮೇಲೆ ಬಿದ್ದ ನೀರು ಸಂಸ್ಕರಿಸಿ ಮುಖ್ಯ ಕಾಲುವೆ ಮುಖಾಂತರ ಹರಿದು ಹೋಗಲು ವ್ಯವಸ್ಥೆಗೊಳಿಸಿರುವುದು.

* ಸಾವಯವ ಕೃಷಿಗಾಗಿ ಬಯೋಡೈಜಸ್ಟರ್ ಮೂಲಕ ಗೊಬ್ಬರ ಉತ್ಪಾದನೆ ಹಾಗೂ ಅಲ್ಲಿನ ದ್ರವ ಪದಾರ್ಥವನ್ನು ಸಂಸ್ಕರಿಸಿ ಹನಿ ನೀರಾವರಿ ಪದ್ಧತಿಯಿಂದ ಗಿಡಗಳ ಬುಡಕ್ಕೆ ಸಾಗಣೆ.

* ಬಹು ಬೆಳೆಯಾಗಿ ಅಡಿಕೆ, ಕೊಕೊ, ಕಾಳು ಮೆಣಸು, ಏಲಕ್ಕಿ, ತೆಂಗು, ಹಲಸು, ಮಾವು ಹಾಗೂ ಅರಿಶಿಣ ಅಳವಡಿಕೆ ಮಾಡಿದ್ದಾರೆ.

* ಕೃಷಿ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಕೃಷಿ ವಿಶ್ವ ವಿದ್ಯಾಯಲದ ಸಂಪರ್ಕದಿಂದ ತಮ್ಮ ಬೆಳೆಗಳಿಗೆ ಸಮಗ್ರ ಪೋಷಕಾಂಶಗಳ ನಿರ್ವಹಣೆಗಾಗಿ ಜೀವಾಣು ಗೊಬ್ಬರ ಬಳಸುತ್ತಿದ್ದಾರೆ. ಬೆಳೆಗಳಿಗೆ ಕೀಟ ಹಾಗೂ ರೋಗ ನಿರ್ವಹಣೆಗೆ ಜೈವಿಕ ಪೀಡೆನಾಶಕ ಟ್ರೈಕೊಡರ್ಮ್, ಬೇವಿನ ಎಣ್ಣೆ ಸಿಂಪರಣೆ ಮಾಡುತ್ತಿದ್ದಾರೆ.

* ಕಾರ್ಮಿಕರ ಅಭಾವ ನಿವಾರಿಸಿಕೊಳ್ಳಲು ಪವರ್ ಟಿಲ್ಲರ್, ಸೀಡ್ ಡ್ರಮ್, ವೀಡ್ ಕಟರ್, ಸೋಲಾರ್ ಡ್ರೆಯರ್, ಮೋಟೋಕಾರ್ಡ್, ಎಲೆಕ್ಟ್ರಿಕ್ ಸ್ಪ್ರೆಯರ್ ಬಳಸುವುದರ ಜೊತೆಗೆ ಸ್ವತಃ ತಾವೇ ದುರಸ್ಥಿ ಮಾಡುತ್ತಾರೆ.

* ಕಾಳು ಮೆಣಸಿನ ಬಳ್ಳಿಗಳನ್ನು ಗಿಡಗಳ ಆಸರೆಯಲ್ಲಿ ಬೆಳೆಸುವ ಬದಲು ಪ್ರತ್ಯೇಕವಾಗಿ ‘ಬುಶ್ ಪೆಪ್ಪರ್’ ಆಗಿ ಅಭಿವೃದ್ಧಿಪಡಿಸುತ್ತಿದ್ದಾರೆ.

* ತಮ್ಮಲ್ಲಿಯ ಪರಿಶುದ್ಧ ಅರಿಶಿಣವನ್ನು ಸಂಸ್ಕರಿಸಿ ಪುಡಿಗೊಳಿಸಿ ಹಿಟ್ಟುನ್ನು ಹಾಗೂ ಉತ್ಕøಷ್ಠ ಕಾಳು ಮೆಣಸಿನ ಬೆಳೆಯನ್ನು ತಾವೇ ಸ್ವತಃ ನೇರ ಹಾಗೂ ಆನ್‍ಲೈನ್‍ನಲ್ಲಿ ಪಾರ್ಸೆಲ್ ಮೂಲಕ ದಕ್ಷಿಣ ಕರ್ನಾಟಕದ ವಿವಿಧ ಭಾಗಗಳಿಗೆ ಹಾಗೂ ಹೈದರಾಬಾದ್ ವಿವಿಧ ಭಾಗಗಳಿಗೆ ತಲುಪಿಸುತ್ತಾರೆ. ಆನ್‍ಲೈನ್ ಮೂಲಕವೇ ಆರ್ಡರ್ ಮಾಡಿ ಗ್ರಾಹಕರು ತಮಗೆ ಬೇಕಾದ ಪದಾರ್ಥವನ್ನು ಪಡೆಯುತ್ತಾರೆ.

* 2013ರಲ್ಲಿ ಧಾರವಾಡ ಕೃಷಿ ವಿದ್ಯಾಲಯವು ಇವರಿಗೆ ‘ಇನ್ನೊವೆಟಿವ್ ಫಾರ್ಮರ್’ ಎಂದು ಗೌರವಿಸಿದರೆ, ಬಾಗಲಕೋಟ ತೋಟಗಾರಿಕಾ ವಿಶ್ವವಿದ್ಯಾನಿಲಯವು 2018ರಲ್ಲಿ ‘ಶ್ರೇಷ್ಠ ತೋಟಗಾರಿಕಾ ರೈತ’ ಎಂದು ಗೌರವಿಸಿದೆ. ಇವರು ರೇಡಿಯೋ ಕಾರ್ಯಕ್ರಮದಲ್ಲಿ ಹೈಬ್ರಿಡ್ ಭತ್ತದ ಬೇಸಾಯದ ಕುರಿತು ಹಾಗೂ ಚಂದನ ವಾಹಿನಿಯಲ್ಲಿ ಬಾಳೆಗಿಡ, ತೋಟಗಾರಿಕೆ ಹಾಗೂ ಕೃಷಿಯ ಕುರಿತು ಮಾಹಿತಿ ನೀಡಿದ್ದಾರೆ.

* ಇವರ ತೋಟವನ್ನು ವೀಕ್ಷಿಸಲು ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಕೃಷಿ ಹಾಗೂ ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು ಭೇಟಿ ನೀಡುತ್ತಾರೆ.

ರವಿಲೋಚನ ಅವರ ಸಂಪರ್ಕದ ಮಾಹಿತಿ : 9481461849, 8762633255

ಲೇಖನ, ಚಿತ್ರ, ವಿಡಿಯೋ ಸಂದರ್ಶನ:
ದರ್ಶನ ಹರಿಕಾಂತ
ಶಿಕ್ಷಕರು, ಬಿಳಗಿ,, ಸಿದ್ದಾಪುರ, 9448806661