ಪ್ರೇಮ ಕತೆ: ಸವಾಲು ಗೆದ್ದ ಪ್ರೇಮ ಕಾವ್ಯ

ಪ್ರೇಮ ಕತೆ: ಸವಾಲು ಗೆದ್ದ ಪ್ರೇಮ ಕಾವ್ಯ

ಎರಡು ಕುಟುಂಬಗಳು ದೂರಾದ ಮೇಲೆ ಕಾವ್ಯಾಳಿಗೆ ಮೋಹನನ ಸೆಳೆತ ಹೋಗಲಿಲ್ಲ. ಕಾವ್ಯಾಳದ್ದು ಮೊದಲಿನಿಂದಲೂ ಬಯಸಿದ್ದನ್ನು ಪಡೆಯಬೇಕು ಎಂಬ ಹಠ. ತಡಮಾಡದೆ ಮೋಹನನಿಗೆ ಫೋನ್ ಮಾಡಿ. ನೀವು ನನಗೆ ಇಷ್ಟ ಆಗಿದ್ದೀರಿ. ಹಾಗಾಗಿ ನಾನು ನಿಮ್ಮನ್ನೇ ಮದುವೆಯಾಗೋದು ಅಂದಳು.

ಹಿಂದಿನ ಭಾಗ ಓದಿ: ಕುಟುಂಬದ ಬಿರುಕಿನಲ್ಲಿ ಮೊಳಕೆಯೊಡೆದ ಪ್ರೀತಿ

ಅನಿರೀಕ್ಷಿತ ಪ್ರಸ್ತಾವಕ್ಕೆ ಮೋಹನ ದಂಗಾಗಿ ಹೋದ. ಹುಡುಗಿ ವಿಚಾರದಲ್ಲಿಯೇ ಎರಡೂ ಕುಟುಂಬಗಳ ನಡುವೆ ಜಗಳ ನಡೆದಿದೆ. ಅಂಥದರಲ್ಲಿ ಈ ಹುಡುಗಿ ನನ್ನನ್ನೇ ಮದುವೆ ಆಗ್ತೀನಿ ಅಂತಾಳಲ್ಲ. ಇದು ಸಮಸ್ಯೆಯನ್ನೇ ಮೈ ಮೇಲೆ ಎಳೆದುಕೊಂಡಂಗಲ್ವ ಎಂದು ಯೋಚಿಸಿದ. ಸುಮ್ಮನೆ ಏನೇನೊ ಮಾತನಾಡ ಬೇಡಿ. ಈ ಮದುವೆ ಅಸಾಧ್ಯ. ಮನೆಯವರು ಒಪುವುದಿಲ್ಲ ಎಂದು ಸಬೂಬು ಹೇಳಿ ಮೋಹನ ಫೋನ್ ಇಟ್ಟ.

ಆದರೆ, ಮೋಹನನಿಗೆ ಹುಡುಗಿಯೊಬ್ಬಳಿಂದ ಈ ರೀತಿ ನೇರವಾಗಿ ಪ್ರೇಮ ನಿವೇದನೆ ಎಂದೂ ಬಂದಿರಲಿಲ್ಲ. ಕಾವ್ಯಳ ಮಾತಿನಿಂದ ಒಳಗೊಳಗೇ ಖುಷಿಗೊಂಡ. ಮಾರನೇ ದಿನ ಮತ್ತೆ ಕಾವ್ಯ ಫೋನ್ ಮಾಡಿ ಹಠ ಹಿಡಿದು ಕೇಳಿದಳು. ಮದುವೆ ಆಗಲು ನಿಮಗೆ ಇಷ್ಟ ಇದೆಯೊ ಇಲ್ಲವೊ ಎಂದು. ನೀನು ನನಗೆ ಇಷ್ಟ. ಆದರೆ ಮನೆಯವರಿಗೆ ಇಷ್ಟ ಆಗಬೇಕಲ್ಲ ಎಂದು ಇಬ್ಬರಲ್ಲಿಯೂ ಸವಾಲುಗಳ ಮೇಲೆ ಸವಾಲು, ಚರ್ಚೆಯ ಮೇಲೆ ಚರ್ಚೆ ನಡೆಯಿತು. ಕೊನೆಗೆ ಇಬ್ಬರೂ ಒಂದು ತೀರ್ಮಾನಕ್ಕೆ ಬಂದರು. ಮನೆಯವರನ್ನು ಒಪ್ಪಿಸಲು ಪ್ರಯತ್ನ ಮಾಡುವುದು. ಒಪ್ಪದೇ ಇದ್ದರೆ ಮುಂದೆ ನಿರ್ಧಾರ ಮಾಡಿದರಾಯಿತು ಎಂದು.

ಎಲ್ಲರದ್ದು ಪ್ರೀತಿ ಹುಟ್ಟಿದ ಮೇಲೆ ಮನೆಯವರ ಸಮಸ್ಯೆ ಎದುರಿಸಿದರೆ, ಇವರದ್ದು ಮನೆಯವರ ಸಮಸ್ಯೆ ಸೃಷ್ಟಿಯಾದ ಮೇಲೆ ಪ್ರೀತಿಸಿದರು. ವಿಚಿತ್ರವಾದ ಸವಾಲಿನಲ್ಲಿ ಇಬ್ಬರೂ ಮನೆಯವರ ಎದುರು ತಮ್ಮ ಪ್ರೀತಿಯ ಪ್ರಸ್ತಾಪ ಮಾಡಿದರು. ಅದು ಮತ್ತಷ್ಟು ವಿಕೋಪಕ್ಕೆ ಹೋಯಿತು. ಸಂಬಂಧಿಕರು ಕತೆಯ ಮೇಲೆ ಕತೆ ಹೆಣೆಯಲು ಶುರು ಮಾಡಿದರು. ಮೋಹನ ಮತ್ತು ಕಾವ್ಯ ಜರ್ಜರಿತರಾದರು. ಮನೆಯವರು ಒಪ್ಪದೇ ಇದ್ದರೆ ಮದುವೆ ಬೇಡ ಎಂದು ಇಬ್ಬರೂ ಆರಂಭದಲ್ಲಿ ಅಂದುಕೊಂಡಿದ್ದರು. ಆದರೆ, ಪ್ರೀತಿ ಗೆಲ್ಲುವ ಹೋರಾಟದಲ್ಲಿ ಇಬ್ಬರೂ ಪರಸ್ಪರ ಪ್ರೀತಿಯಲ್ಲಿ ಮುಳುಗಿ ಹೋಗಿದ್ದರು. ಒಬ್ಬರನ್ನು ಒಬ್ಬರು ಬಿಟ್ಟಿರಲಾರದಷ್ಟು ಹತ್ತಿರವಾಗಿದ್ದರು.

****
ಎರಡೂ ಕುಟುಂಬಗಳಲ್ಲಿ ಮತ್ತೆ ಶಾಂತಿ ಕದಡಿತು. ಪ್ರತಿ ದಿನ ಮೋಹನ್, ಕಾವ್ಯಳ ಪ್ರೀತಿಯ ಚರ್ಚೆಗಳೇ ನಡೆಯುತ್ತಿದ್ದವು. ಮೋಹನ ಮತ್ತು ಕಾವ್ಯಳ ಸಂಬಂಧಿಕರು ಮದುವೆ ವಿಚಾರದಿಂದ ದೂರಾಗುತ್ತಿದ್ದಂತೆಯೇ ತಂದೆ, ತಾಯಿಯರಲ್ಲಿ ಮಕ್ಕಳ ಮೇಲೆ ಕನಿಕರ ಬೆಳೆಯಲು ಶುರುವಾಯಿತು. ಪರಸ್ಪರ ಎರಡೂ ಕುಟುಂಬದವರ ಬಗ್ಗೆ ಆರೋಪ ಮಾಡುವ ಮಾತುಗಳು ಹೋಗಿ. ಮನವರಿಕೆ ಮಾಡಿಕೊಳ್ಳುವ ಮಟ್ಟಕ್ಕೆ ಬಂದಿತು.

ಹೀಗಿರುವಾಗಲೇ ಮದುವೆ ಎನ್ನುವುದು ಕುಟುಂಬದ ಪ್ರತಿಷ್ಠೆಯ ವಿಷಯ ಎನ್ನುವುದಕ್ಕಿಂತ ಎರಡು ಜೀವಗಳು ಒಂದಾಗಿ ಬಾಳಬೇಕು. ಖುಷಿ ಹರಡಬೇಕು ಎನ್ನುವ ಸತ್ಯ ಅರಿವಾಗಿ ಎರಡೂ ಕುಟುಂಬಗಳು ಮತ್ತೊಮ್ಮೆ ಮಾತುಕತೆಗೆ ಸಿದ್ಧರಾದರು. ಈ ಬಾರಿ ಸಂಬಂಧಿಕರು ಮಾತುಕತೆಯಲ್ಲಿ ಇರಲಿಲ್ಲ. ಅವರಲ್ಲಿ ಒಬ್ಬರು ಅಡ್ಡ ಬಾಯಿ ಬಿಟ್ಟರೂ ಮತ್ತೊಂದು ಕಾದಾಟಕ್ಕೆ ಎರಡೂ ಕುಟುಂಬ ನಿಲ್ಲಬೇಕಾಗುತ್ತದೆ ಎನ್ನುವ ಆತಂಕ ಇತ್ತು.

ಸಾಕಷ್ಟು ಮದುವೆ ಮತ್ತು ಕೌಟುಂಬಿಕ ಸಮಸ್ಯೆಗಳಲ್ಲಿ ಸಂಬಂಧ ಬೆಳೆಸುವವರಿಗಿಂತ ಇಲ್ಲದ ಮಾತನಾಡಿ ಜಗಳ ಹಚ್ಚಿ ಹೋಗುವವರೇ ಹೆಚ್ಚು. ಅದರ ಫಲ ಅನುಭವಿಸಲು ಅವರು ಯಾರೂ ಇರುವುದಿಲ್ಲ ಎನ್ನುವ ವಾಸ್ತವ ಎರಡೂ ಕುಟುಂಬಕ್ಕೆ ತಿಳಿದ ಮೇಲೆ ಕಡಿಮೆ ಮಾತಿನಲ್ಲಿ ಅದ್ದೂರಿ ಮದುವೆ ನಿಶ್ಚಯವಾಯಿತು. ಮೋಹನ ಮತ್ತು ಕಾವ್ಯಳ ಮದುವೆ ಅಚ್ಚುಕಟ್ಟಾಗಿ ನೆರವೇರಿತು. ನವ ದಂಪತಿಯ ಸುಖ ಸಂಸಾರ ಎರಡೂ ಕುಟುಂಬಗಳಲ್ಲಿ ಖುಷಿ ಅರಳಿಸಿತು. ಕಾವ್ಯ ತಾಯಿ ಆದಳು. ಮೋಹನ ಕೆಲಸದಲ್ಲಿ ಬಡ್ತಿಯಾಗಿ ಗೌರವದ ಜೀವನ ಸಾಗಿತು.

ಮುಗಿಯಿತು.

Leave a reply

Your email address will not be published. Required fields are marked *