ಇತ್ತೀಚೆಗೆ ವೈದ್ಯಲೋಕಕ್ಕೆ ಸವಾಲಾಗುವ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ವೈದ್ಯಲೋಕಕ್ಕೂ ಮಿಗಿಲಾದ ಕೆಲ ಸಮಸ್ಯೆಗಳಿಗೆ ದೈವಲೋಕದಲ್ಲಿ ಪರಿಹಾರ ಕಂಡುಕೊಳ್ಳುವ ನಂಬಿಕೆ ಭಾರತೀಯರಲ್ಲಿದೆ. ಅಂಥದ್ದೇ ಶಕ್ತಿಯುಳ್ಳ ಓಕಳಿ ಹೊಂಡದ ಕನ್ಯೆಯಮ್ಮ ಸಂತಾನ, ಋತುಮತಿ ತೊಂದರೆ ಸೇರಿದಂತೆ ಸ್ತ್ರೀಯರಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದಾಳೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನೆಬೈಲ್ ಗ್ರಾಮದಲ್ಲಿ ಅನಾದಿ ಕಾಲದಿಂದಲೂ ಓಕಳಿ ಹೊಂಡದ ಕನ್ಯೆಯಮ್ಮ ನೆಲೆಸಿದ್ದಾಳೆ. ಹೆಣ್ಣು ಮಕ್ಕಳು ಸಕಾಲದಲ್ಲಿ ಋತುಮತಿಯಾಗದೆ ಇದ್ದರೆ, ಓಕಳಿ ಹೊಂಡದ ಕನ್ಯೆಯಮ್ಮ ದೇವಿಗೆ ಪ್ರಾರ್ಥನೆ ಸಲ್ಲಿಸಿ, ಗುಡಿ ಪಕ್ಕದ ಕೆರೆಯ ನೀರಿನಿಂದ ತೀರ್ಥಸ್ನಾನ ಮಾಡಿದರೆ ಋತುಮತಿಯಾಗುತ್ತಾರೆ ಎಂಬ ನಂಬಿಕೆ ತಲೆತಲಾಂತರಗಳಿಂದ ನಡೆದುಬರುತ್ತಿದೆ.

ಅಂಕೋಲಾದಿಂದ 8.5 ಕಿ.ಮೀ. ದೂರದ ಹೊನ್ನೆಬೈಲ್ ಗ್ರಾಮದ ಕೆಳಗಿನ ಮಂಜಗುಣಿ ರಸ್ತೆಯ ಪಕ್ಕದ ಕಾಲು ದಾರಿಯ ಮೂಲಕ ಸಾಗಿ ಭತ್ತದ ಗದ್ದೆ ಬಯಲಿನ ಒಂದು ಬದಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಚಿಕ್ಕದೊಂದು ಗುಡಿ ಕಂಡುಬರುತ್ತದೆ. ಇದುವೇ ಕನ್ಯೆಯಮ್ಮ ದೇವಿಯ ಗುಡಿ. ಅದರ ಪಕ್ಕದಲ್ಲಿರುವ ಕೆರೆಗೆ ‘ಓಕಳಿ ಹೊಂಡ’ ಎನ್ನುತ್ತಾರೆ. ಆ ಹೊಂಡದಲ್ಲಿ ಸಿಕ್ಕಿರುವ ಕನ್ಯೆಯಮ್ಮ ದೇವಿಗೆ ಓಕಳಿ ಹೊಂಡದ ಕನ್ಯೆಯಮ್ಮ ಎಂದು ಕರೆಯುತ್ತಾರೆ. ಈ ಕೆರೆಯ ನೀರೇ ಪವಿತ್ರತೆಗೆ ಹೆಸರಾಗಿದೆ.

ಸಂತಾನ ಕರುಣಿಸುವ ಕನ್ಯೆಯಮ್ಮ :

ಕನ್ಯೆಯಮ್ಮ ಸಂತಾನ ಕರುಣಿಸುವ ದೇವಿಯಾಗಿಯೂ ಹೆಸರಾಗಿದ್ದಾಳೆ. ಸಂತಾನ ಭಾಗ್ಯಕ್ಕಾಗಿ 10-15 ವರ್ಷಗಳಿಂದ ವೈದ್ಯಕೀಯ ಚಿಕಿತ್ಸೆಗಾಗಿ ಅಲೆದಾಡಿ ಫಲ ಕಾಣದೇ ಹತಾಶರಾದ ಅನೇಕರು ಹಿತೈಷಿಗಳ ಸಲಹೆ ಮೇರೆಗೆ ಕನ್ಯೆಯಮ್ಮ ದೇವಿ ಬಳಿ ಬಂದು ಐದು ಸೋಮವಾರ ತೀರ್ಥಸ್ನಾನ ಮಾಡಿ ಸಂತಾನ ಭಾಗ್ಯ ಕಂಡಿದ್ದಾರೆ. ಇದಕ್ಕೆ ಅರ್ಚಕರು ಹಾಗೂ ಸುತ್ತಲಿನ ಜನ ಹಲವಾರು ನಿದರ್ಶನಗಳನ್ನು ನೀಡುತ್ತಾರೆ. ಇಷ್ಟಾರ್ಥ ನೆರವೇರಿದ ಬಳಿಕ ಪುನಃ ಇಲ್ಲಿಗೆ ಬಂದು ದೇವಿಗೆ ಹರಕೆ ಒಪ್ಪಿಸಿ ಕೃತಾರ್ತರಾಗುತ್ತಾರೆ.

ಕನ್ಯೆಯಮ್ಮ

ಪ್ರತಿ ಸೋಮವಾರ ವಿಶೇಷ ಪೂಜೆ :

ಕನ್ಯೆಯಮ್ಮ ದೇವಿಗೆ ಪ್ರತಿ ಸೋಮವಾರದ ದಿನ ಪೂಜೆ ನಡೆಯುತ್ತದೆ. ಈ ದಿನ ಭಕ್ತರ ಸಂಖ್ಯೆಯೂ ಹೆಚ್ಚಿರುತ್ತದೆ. ಭಕ್ತರು ದೇವಿಗೆ ಹಣ್ಣು-ಕಾಯಿಯೊಂದಿಗೆ ವಿಶೇಷವಾಗಿ ತೀರ್ಥಸ್ನಾನಕ್ಕೆ ನೀರು ಕೆಂಪಗಾಗಲು ಕುಂಕುಮ ತರಬೇಕು. ನೀರು ಕೆಂಪಾದಷ್ಟು ಕನ್ಯೆಯಮ್ಮ ಪ್ರಸನ್ನಳಾಗಿ ಇಷ್ಟಾರ್ಥವನ್ನು ನೇರವೇರಿಸುತ್ತಾಳೆ ಎಂದು ಇಲ್ಲಿಯ ಅರ್ಚಕ ವಾಸುದೇವ ಮೋನಪ್ಪ ನಾಯ್ಕ ಹೇಳುತ್ತಾರೆ.

ಸ್ತ್ರೀ ರೋಗ ತಜ್ಞರು ಓಕಳಿ ಹೊಂಡದ ನೀರಿನಲ್ಲಿ ಪ್ಲ್ಯಾಂಟ್ ಹಾರ್ಮೋನುಗಳು ಚರ್ಮದ ಮೂಲಕ ದೇಹ ಸೇರಿ ಋತುಮತಿ ಆಗುವಂತೆ ಸಹಕರಿಸಲು ಸಾಧ್ಯವಿದೆ ಎಂದು ಹೇಳುತ್ತಾರೆ. ಮನೋವಿಜ್ಞಾನಿಗಳ ಪ್ರಕಾರ ದೇಹ ಮತ್ತು ಮನಸ್ಸು ಪರಸ್ಪರ ನಿಕಟ ಸಂಬಂಧ ಹೊಂದಿರುವುದರಿಂದ ನಂಬಿಕೆಯು ಮಾನಸಿಕ ಸಿದ್ಧತೆಯನ್ನು ಉಂಟುಮಾಡಿ ದೈಹಿಕ ಬದಲಾವಣೆಗಳು ಆಗಲು ಸಾಧ್ಯವಿದೆ. ಇದಕ್ಕೆ ಪರಿಸರವೂ ಉತ್ತೇಜನಕಾರಿಯಾಗಬಲ್ಲದು ಎನ್ನುತ್ತಾರೆ.

ಅರ್ಚಕರ ಸಂಪರ್ಕ ಮಾಹಿತಿ: 7892043253, 7676718987, 9980294014

ಲೇಖನ, ವಿಡಿಯೊ, ಚಿತ್ರ:

ದರ್ಶನ ಹರಿಕಾಂತ, ಶಿಕ್ಷಕರು, ಬಿಳಗಿ.