Select Page

ಅಮವಾಸ್ಯೆಯ ದಿನವೇ ಗೋಕರ್ಣ ಸಮುದ್ರದಲ್ಲಿ ಕೊಚ್ಚಿ ಹೋದ ಬಾಲಕರು

ಅಮವಾಸ್ಯೆಯ ದಿನವೇ ಗೋಕರ್ಣ ಸಮುದ್ರದಲ್ಲಿ ಕೊಚ್ಚಿ ಹೋದ ಬಾಲಕರು

ಕಾರವಾರ: ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ಬಾಲಕರು ಅಮವಾಸ್ಯೆಯ ದಿನವೇ ಬೆಳ್ಳಂಬೆಳಗ್ಗೆ ಗೋಕರ್ಣದಲ್ಲಿ ಅರಬ್ಬಿ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದಾರೆ.

ಮೈಸೂರು, ಮಂಡ್ಯ ಜಿಲ್ಲೆಯ ಎಂಟು ಜನ ಬಾಲಕರು ಇನೋವಾ ಕಾರಿನೊಂದಿಗೆ ಗೋಕರ್ಣಕ್ಕೆ ಬಂದಿದ್ದರು. ಬುಧವಾರ ಸಂಜೆ ಗೋಕರ್ಣಕ್ಕೆ ಬಂದಿದ್ದ ಅವರು ಗುರುವಾರ ಬೆಳಗ್ಗೆ 6.30 ರಷ್ಟೊತ್ತಿಗೆ ಗೋಕರ್ಣದ ಕರಿಯಪ್ಪ ಕಟ್ಟೆ ಬಳಿ ಈಜಲು ಹೋಗಿದ್ದರು.

ಅದರಲ್ಲಿ ಇಬ್ಬರು ಬಾಲಕರು ಹಠಮಾಡಿ ನೀರಿ ಇಳಿದಾಗ ತೆರೆಗೆ ಸಿಲುಕಿ ಆಳಕ್ಕೆ ಹೋಗಿದ್ದಾರೆ. ಅದರಲ್ಲಿ ಒಬ್ಬರ ಮೃತದೇಹ ಪತ್ತೆಯಾಗಿದೆ. ಮತ್ತೊಬ್ಬ ಕಾಣೆಯಾಗಿದ್ದಾರೆ. ಎಲ್ಲರೂ 15 ವರ್ಷದಿಂದ 19 ವರ್ಷದೊಳಗಿನವರು ಎನ್ನುವುದು ಆಘಾತಕಾರಿ ಸಂಗತಿ.

ಮೈಸೂರಿನ ಜೆ.ಪಿ. ನಗರದ ಸುಹಾಸ ವಿ. (17 ವರ್ಷ) ಎನ್ನುವವನ ಮೃತ ದೇಹ ಕರಿಯಪ್ಪ ಕಟ್ಟೆ ಬಳಿಯೇ ಸಿಕ್ಕಿದೆ. ಅದೇ ಜಿಲ್ಲೆಯ ಉಲ್ಲಾಸ ವಿ. (15 ವರ್ಷ) ಎನ್ನುವ ಬಾಲಕ ಕಾಣೆಯಾಗಿದ್ದಾರೆ. ಬಾಲಕನಿಗಾಗಿ ಹುಡುಕಾಟ ನಡೆದಿದೆ.

ಕರಿಯಪ್ಪನ ಕಟ್ಟೆ ಬಳಿ ಅಪಾಯಕಾರಿ ಅಲೆಗಳು ಬರುತ್ತಿರುವ ಕಾರಣಕ್ಕೆ ಅಲ್ಲಿ ಯಾರಿಗೂ ಈಜಲು ಹೋಗುತ್ತಿಲ್ಲ. ಅಲ್ಲದೆ, ಬೇರೆ ಸಮಯದಲ್ಲಿ ವಿದೇಶಿಗರು ಅಲ್ಲಿ ಇರುತ್ತಿದ್ದರು. ಆದರೆ, ಬಾಲಕರು ಬೆಳಗ್ಗೆಯೇ ಈಜಲು ಹೋಗಿದ್ದರಿಂದ ಸ್ಥಳದಲ್ಲಿ ಯಾರೂ ಇರಲಿಲ್ಲ. ಬೇರೆ ಸಮಯದಲ್ಲಾಗಿದ್ದರೆ ವಿದೇಶಿಗರಾದರೂ ಕಾಪಾಡುತ್ತಿದ್ದರು ಎಂದು ಸ್ಥಳೀಯರು ಮರುಗಿದರು.

ಬಾಲಕರು ಕೊಚ್ಚಿ ಹೋಗಿರುವ ಸ್ಥಳದಲ್ಲಿಯೇ ಹಿಂದಿನ ವರ್ಷವೂ ಇದೇ ತಿಂಗಳಲ್ಲಿ ನಾಲ್ಕೈದು ಜನರು ಈಜಲು ಹೋಗಿ ಮೃತಪಟ್ಟಿದ್ದರು. ಬಾಲಕರು ಕೂಡ ಅಲ್ಪ ಸ್ವಲ್ಪ ಈಜು ಗೊತ್ತಿದ್ದರೂ, ಸಮುದ್ರದ ಸೆಳೆತ ತಡೆಯಲಾಗದೆ ಜೀವ ಕಳೆದುಕೊಂಡಿದ್ದಾರೆ ಎಂದು ಗೋಕರ್ಣ ಪೊಲೀಸರು ತಿಳಿಸಿದ್ದಾರೆ.

Leave a reply

Your email address will not be published. Required fields are marked *