ವೈರಲ್: ಉಚಿತವಾಗಿ ₹ 5,000 ಕೊಡುವ ವೆಬ್ ಸೈಟ್ ನ ನಿಜ ಬಣ್ಣ ಬಯಲು

FG (ಫೆಡರಲ್ ಸರ್ಕಾರ) ಅಂತಿಮವಾಗಿ ಪ್ರತಿ ನಾಗರಿಕರಿಗೆ ಉಚಿತ Rs.5,000 ಪರಿಹಾರ ನಿಧಿಗಳನ್ನು ನೀಡಲು ಪ್ರಾರಂಭಿಸಿದೆ. ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ನಿಮ್ಮ ಹಣವನ್ನು ಪಡೆಯಿರಿ ನನಗೆ ಈಗಾಗಲೆ ಬಂದಾಗಿದೆ.
https://bit.ly/free-funds-for-citizen
Note : ನೀವು ಒಮ್ಮೆ ಮಾತ್ರ ಕ್ಲೈಮ್ ಮಾಡಬಹುದು ಮತ್ತು ಕ್ರೆಡಿಟ್ ಪಡೆಯಬಹುದು ಮತ್ತು ಇದು ಸೀಮಿತವಾಗಿದೆ ಆದ್ದರಿಂದ ನಿಮ್ಮ ಈಗಿನ ತ್ವರಿತತೆಯನ್ನು ಪಡೆಯಿರಿ.
ಹೀಗೊಂದು ಮೆಸೇಜ್ ವಾಟ್ಸಾಪ್ ಗ್ರೂಪ್ ಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಎಲ್ಲರೂ ಒಬ್ಬರಿಂದೊಬ್ಬರಿಗೆ ಮೆಸೇಜ್ ಫಾರ್ವರ್ಡ್ ಮಾಡುತ್ತಿದ್ದಾರೆ. ಆದರೆ, ಇದೊಂದು ನಕಲಿ ವೆಬ್ ಸೈಟ್ ಆಗಿದ್ದು, ಸುಮ್ಮನೆ ಜನರನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದೆ ಎನ್ನುವುದಕ್ಕೆ ಹಲವು ಸಾಕ್ಷಿಗಳು ಇವೆ.
ಈ ಸಂದೇಶ ಮತ್ತು ವೆಬ್ ಸೈಟ್ ಸರ್ಕಾರದೊಂದಿಗೆ ಯಾವುದೇ ರೀತಿಯ ಸಂಬಂಧವನ್ನು ಹೊಂದಿಲ್ಲ. ವಿಚಿತ್ರ ಎಂದರೆ, ಕೀನ್ಯಾ ದೇಶದಲ್ಲಿಯೂ ಇದೇ ವೆಬ್ ಸೈಟ್, ಇದೇ ರೀತಿಯ ಸಂದೇಶದೊಂದಿಗೆ ವೈರಲ್ ಆಗಿದೆ. ಭಾರತೀಯ ರೂಪಾಯಿ ಬದಲಾಗಿ ಶಿಲ್ಲಿಂಗ್ ಗಳಲ್ಲಿ ಹಣ ಪಡೆಯಬಹುದು ಎಂದಿದೆ. ಆ ಲಿಂಕ್ ಇರುವ ಸಂದೇಶ ಸಹ ಭಾರತದಲ್ಲಿ ವೈರಲ್ ಆಗಿದೆ.

COVID-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಸರ್ಕಾರ ವಿಧಿಸಿರುವ ಲಾಕ್‌ಡೌನ್ ನಿರ್ಬಂಧಗಳಿಂದಾಗಿ ಆರ್ಥಿಕತೆ ಮೇಲೆ ಸವಾಲು ಎದುರಾಗಿರುವ ಸಮಯದಲ್ಲಿಯೇ ಈ ಸಂದೇಶವನ್ನು ಪ್ರಸಾರ ಮಾಡಲಾಗುತ್ತಿದೆ. ಜನರು ಸಹ ಸರ್ಕಾರದಿಂದ ಸಹಾಯ ಸಿಗುತ್ತಿದೆ ಎಂದು ಸಂದೇಶವನ್ನು ನಂಬುತ್ತಿದ್ದಾರೆ.
ಈ ವೆಬ್ ಸೈಟ್ ಅಸಲಿಯತ್ತು ಪರೀಶೀಲಿಸಿದಾಗ ಹಲವು ಸಂಶಯದ ಅಂಶಗಳು ಕಂಡು ಬಂದವು.
1. ವೆಬ್‌ಸೈಟ್‌ನಲ್ಲಿನ ಕೆಲವು ಅಂಶಗಳು ಎಂದಿಗೂ ಬದಲಾಗುತ್ತಿಲ್ಲ. ಎಷ್ಟೇ ಬಾರಿ ವೆಬ್‌ಸೈಟ್‌ಗೆ ಭೇಟಿ ನೀಡಿದಾಗಲೂ ನಿಖರವಾಗಿ 1,936 ಲಾಕ್‌ಡೌನ್ ಪ್ಯಾಕೇಜ್‌ಗಳನ್ನು ನೀಡಲು ಉಳಿದಿವೆ ಎಂದು ಪುಟ ತೋರಿಸುತ್ತದೆ. ಈ ಅಂಕಿ ಎಂದಿಗೂ ಬದಲಾಗುವುದಿಲ್ಲ.

2. ವೆಬ್ ಸೈಟ್ ಸಂದೇಶಗಳಿಗೆ ಪ್ರತಿಕ್ರಿಯಿಸುತ ಹೋದಾಗ ಮೊದಲು ನೀವು ಯಾವ ದೇಶದವರು ಎಂದು ಕೇಳುತ್ತದೆ. ಪ್ರತಿಕ್ರಿಯಿಸಿದ ಬಳಿಕ ₹ 2,000, ₹ 5,000 ಮತ್ತು ₹ 10,000 ಇದರಲ್ಲಿ ಒಂದು ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳುವಂತೆ ಕೇಳುತ್ತದೆ. ಕ್ಲಿಕ್ ಮಾಡಿದ ಬಳಿಕ ಯಾಕಾಗಿ ಇಂಟರ್ನೆಟ್, ಬಟ್ಟೆ, ಆಹಾರ ಆಯ್ಕೆ ಕಾಣಿಸುತ್ತದೆ. ಯಾವುದಾದರು ಒಂದು ಆಯ್ಕೆಯನ್ನು ಕ್ಲಿಕ್ ಮಾಡಿದ ಬಳಿಕ ಸಂದೇಶವನ್ನು 7 ವಾಟ್ಸಾಪ್ ಗುಂಪುಗಳಿಗೆ ಫಾರ್ ವರ್ಡ್ ಮಾಡಿದ ಬಳಿಕ ನಿಮ್ಮ ಬ್ಯಾಂಕ್ ಮಾಹಿತಿ ಕೇಳಲಾಗುತ್ತದೆ. ಅದನ್ನು ಭರ್ತಿ ಮಾಡಿದ ತಕ್ಷಣ ಹಣ ಜಮಾ ಆಗುತ್ತದೆ ಎನ್ನುವ ಸಂದೇಶ ತೋರಿಸುತ್ತದೆ.
ಓದಿ: ನೌಕರರ ನಿವೃತ್ತಿ ವಯಸ್ಸು 50 ವರ್ಷಕ್ಕೆ ಇಳಿಕೆ ಸುದ್ದಿ: ಕೇಂದ್ರ ಸರ್ಕಾರ ಹೇಳಿದ್ದೇನು?

3. ಈ ಸಮೀಕ್ಷೆಯನ್ನು ಮುಗಿಸಿದ ನಂತರ, ವೆಬ್‌ಸೈಟ್ ಫೇಸ್‌ಬುಕ್ ಕಾಮೆಂಟ್ ವಿಭಾಗಗಳನ್ನು ಹೋಲುವ ಹಲವಾರು ಕಾಮೆಂಟ್‌ಗಳನ್ನು ಪ್ರದರ್ಶಿಸುತ್ತದೆ. ವೆಬ್‌ಸೈಟ್ ನೀಡುವ ಪ್ರಯೋಜನಗಳನ್ನು ಬಳಕೆದಾರರು ಸ್ವೀಕರಿಸಿದ್ದಾರೆ ಎಂದು ತಿಳಿಸುತ್ತದೆ. ಅಲ್ಲದೆ ಈಗಷ್ಟೇ ಲೈಕ್ ಮಾಡಿದ್ದಾರೆ. ಒಂದು ನಿಮಿಷದ ಹಿಂದೆ ಲೈಕ್ ಮಾಡಿದ್ದಾರೆ ಎಂಬುದನ್ನೂ ತಿಳಿಸುತ್ತದೆ. ಆದರೆ, ಯಾವಾಗ ಈ ಪುಟ ನೋಡಿದರೂ ಲೈಕ್ ಮಾಡಿರುವವ ಸಂಖ್ಯೆ ‘204,208 ಮತ್ತು ಕಾಮೆಂಟ್‌ಗಳ ಸಂಖ್ಯೆ 173,330 ತೋರಿಸುತ್ತದೆ. ಒಮ್ಮೆಯೂ ಬದಲಾಗುವುದಿಲ್ಲ.
ಓದಿ: ಕೊರೊನಾ ಸಹಾಯತಾ ಯೋಜನೆಯಡಿ ಎಲ್ಲರಿಗೂ ಒಂದು ಸಾವಿರ ರೂ. ನಿಜವೇ?

4. ಅಲ್ಲದೆ, ಕೇಂದ್ರ ಅಥವಾ ರಾಜ್ಯ ಸರಕಾರದ ವೆಬ್ ಸೈಟ್ ಗಳು .nic.in ಅಥವಾ .gov.in ವಿಳಾಸ ಹೊಂದಿರುತ್ತದೆ. ಅಲ್ಲದೆ, ಆ ಎಲ್ಲ ವೈಬ್ ಸೈಟ್ ಗಳು ಭದ್ರತೆ ಹೊಂದಿರುತ್ತದೆ. ಹರಿದಾಡುತ್ತಿರುವ ಲಿಂಕ್ ನ ವೆಬ್ ಸೈಟ್ http://fund.ramaphosafoundations.com/ ಎಂಬ ವಿಳಾಸ ಹೊಂದಿದೆ.
ಓದಿ: ರಿಷಿ ಕಪೂರ್ ಸಾವಿನಲ್ಲಿಯೂ ಹರಿದಾಡಿತು ಸುಳ್ಳು ಸುದ್ದಿ
ತೀರ್ಮಾನ: ಈ ರೀತಿಯ ಪರಿಶೀಲನೆಯ ಬಳಿಕ ಇದೊಂದು ನಕಲಿ ಮತ್ತು ಸತ್ಯಾಂಶವಿಲ್ಲದ ವೆಬ್ ಸೈಟ್ ಎನ್ನುವುದು ಖಚಿತವಾಗುತ್ತದೆ.
