ಜೇನು ಕೃಷಿ ಮಾಡುವುದು ಎಷ್ಟು ಸುಲಭ ಗೊತ್ತಾ?

ಜೇನುತುಪ್ಪಕ್ಕೆ ಅನಾದಿ ಕಾಲದಿಂದಲು ಆಯುರ್ವೇದ, ಪೂಜೆ, ಯಜ್ಞ ಯಾಗಾದಿಗಳಲ್ಲಿ ಪವಿತ್ರವಾದ ಸ್ಥಾನವಿದೆ. ಅಷ್ಟೇ ಅಲ್ಲದೇ ಇದನ್ನು ‘ದ್ರವ ಬಂಗಾರ’ವೆAದೇ ಕರೆಯಲಾಗುತ್ತದೆ. ಸುಮಾರು 2೦೦ ವರ್ಷಗಳ ಹಿಂದೆಯೇ ಜೇನು ಹುಳುಗಳನ್ನು ಪಳಗಿಸುವ ಅಥವಾ ಸಾಕುವ ತಂತ್ರಗಾರಿಕೆಯನ್ನು ಮನುಷ್ಯ ಕಲಿತುಕೊಂಡಿದ್ದ. ಆಗಿನಿಂದಲು ಮನುಷ್ಯ ಜೇನುಹುಳುಗಳ ಸಾಕಾಣಿಕೆಯಲ್ಲಿ ಹಲವಾರು ಹೊಸ ಹೊಸ ಆವಿಷ್ಕ್ಕಾರಗಳನ್ನು ಮಾಡುತ್ತಾ ಬಂದಿದ್ದಾನೆ.
ಕೃಷಿ ಭೂಮಿ ಇಲ್ಲದ ಕೂಲಿ ಕಾರ್ಮಿಕರು, ನಿರುದ್ಯೋಗಿಗಳು ಕೂಡಾ ತಮ್ಮ ಜೀವನಾಧಾರಕ್ಕೆ ಜೇನು ಕೃಷಿಯನ್ನು ಅವಲಂಬಿಸಬಹುದಾಗಿದೆ. ಹಾಗೆಯೆ ಸಮಗ್ರ ಕೃಷಿ ಪದ್ದತಿಯಲ್ಲಿ ಇದೊಂದು ಉಪ ಆದಾಯದ ಮೂಲವು ಹೌದು.
ಮುಖ್ಯವಾಗಿ ಜೇನು ಕೃಷಿಯಿಂದ ನಮಗೆ ಜೇನು ತುಪ್ಪ, ಮೇಣ, ಜೇನು ವಿಷ, ರಾಜಶಾಹಿ ರಸಗಳಂತ ಉಪ ಉತ್ಪನ್ನಗಳು ದೊರೆಯುತ್ತವೆ. ಜೇನು ಹುಳುಗಳಿಂದಾಗುವ ಪರಾಗಸ್ಪರ್ಶ ಕ್ರಿಯೆ ಬೆಳೆಗಳ ಅಧಿಕ ಇಳುವರಿಗೆ ಸಹಕಾರಿ.
ನಿರುದ್ಯೋಗಿ ಯುವಕರುಗಳಿಗೆ ಜೇನುಕೃಷಿ ಒಂದು ಆಶಾದಾಯಕ ಅವಕಾಶ. ಒಂದು ಅಂದಾಜಿನ ಪ್ರಕಾರ ಸುಮಾರು 4 ಲಕ್ಷ ಜನ ಭಾರತದಲ್ಲಿ ಜೇನುಕೃಷಿಕರಿದ್ದು ಸುಮಾರು 54 ಲಕ್ಷ ಜೇನು ಕುಟುಂಬಗಳನ್ನು ಹೊಂದಿದ್ದಾರೆ. 90-95 ಸಾವಿರ ಟನ್ ಜೇನು ತುಪ್ಪವನ್ನು ಉತ್ಪಾದಿಸುತ್ತಿದ್ದಾರೆ.
ಜೇನುಕೃಷಿ ಉದ್ಯಮದಲ್ಲಿ ತೊಡಗಿಸಿಕೊಳ್ಳುವುದಕ್ಕೆ ವಿಫುಲ ಅವಕಾಶಗಳಿವೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬೇಡಿಕೆಯಿರುವ ರಾಜಶಾಹಿ ರಸ, ಪರಾಗ ಹಾಗೂ ಜೇನು ವಿಷಗಳನ್ನು ವೈಜ್ನಾನಿಕ ಕ್ರಮದಲ್ಲಿ ಸಂಗ್ರಹಿಸಿ ವಿದೇಶಗಳಿಗೆ ರಫ್ತು ಮಾಡಿದರೆ ಸಾಕಷ್ಟು ಲಾಭ ಪಡೆಯಬಹುದು.

ಕೃಷಿ ಚಟುವಟಿಕೆಯ ಜೊತೆಗೆ ಜೇನುಕೃಷಿಯ ಉಪ ಉತ್ಪನ್ನಗಳ ಮಾರಾಟ ಮಾಡಿ ಆದಾಯ ಗಳಿಸಬಹುದಾಗಿದೆ. ಜೇನುಕೃಷಿಯಿಂದ ಕೃಷಿ ಉತ್ಪನ್ನವೂ ಹೆಚ್ಚುತ್ತದೆ. ಇಷ್ಟೆಲ್ಲಾ ಮಾಡುವುದಕ್ಕೆ ನಮ್ಮಲ್ಲಿ ಜಾಗವಿಲ್ಲ ಅನ್ನುವ ಕೊರಗೂ ಬೇಡ. ಯಾಕೆಂದರೆ ಯಾವುದೇ ಜಮೀನು ಇಲ್ಲದ ವ್ಯಕ್ತಿ ಕೂಡ ಜೇನುಕೃಷಿ ಮಾಡಿ ಸಾಕಷ್ಟು ಆದಾಯ ಗಳಿಸಬಹುದು.
ಜೇನು ಕೃಷಿ ಪುರುಷ ಅಥವಾ ಮಹಿಳೆಯೆಂಬ ಬೇದವಿಲ್ಲದೆ ಯಾರು ಬೇಕಾದರೂ ಮಾಡಬಹುದು. ಜೇನು ತುಪ್ಪಕ್ಕೆ ವಿಶೇಷ ಮಾರುಕಟ್ಟೆ ಅಗತ್ಯ ಇಲ್ಲ. ಎಲ್ಲ ಕಡೆಯೂ ಜೇನು ತುಪ್ಪಕ್ಕೆ ವ್ಯಾಪಕ ಬೇಡಿಕೆ ಇದೆ.
ಜೇನು ತುಪ್ಪದ ಶಕ್ತಿ
ಜೇನು ತುಪ್ಪದಲ್ಲಿ ಸಾಕಷ್ಟು ಪ್ರಮಾಣದ ಲವಣಗಳು, ಕಾರ್ಬೊಹೈಡ್ರೆಟ್, ಶರ್ಕರ ಹಾಗೂ ಇತರ ಅಂಶಗಳು ಒಳಗೊಂಡಿರುತ್ತವೆ. ಜೇನು ತುಪ್ಪಕ್ಕೆ ಬೇಡದೆ ಇರುವ ಕೊಬ್ಬಿನಾಂಶವನ್ನು ಕರಗಿಸುವ ಶಕ್ತಿಯಿರುತ್ತದೆ ಅಷ್ಟೇ ಅಲ್ಲದೇ ಜೇನುತುಪ್ಪದಲ್ಲಿ ಬಿ 6, ಥಯಮಿನ್, ರೈಬೋಘ್ಲೇವಿನ್, ಪ್ಯಾಟೋಥೆನಿಕ್ ಆಮ್ಲ, ಅಮೈನೋ ಆಸಿಡ್ ಹಾಗೂ ಲವಣಗಳಾದ ಕ್ಯಾಲ್ಸಿಯಂ, ಜಿಂಕ್ ಅಂಶಗಳಿದ್ದು ಜೇನುತುಪ್ಪದಲ್ಲಿ ರಕ್ತದಿಂದ ಸಕ್ಕರೆಯ ಅಂಶವನ್ನು ಹೀರಿಕೊಳ್ಳುವ ಅಂಶವು ಚೆನ್ನಾಗಿರುತ್ತದೆಯೆಂದು ಎಂದು ತಿಳಿದುಬಂದಿದೆ.
ಜೇನು ಕೃಷಿ ಮಾಡುವುದು ಹೇಗೆ?
ಜೇನು ಕೃಷಿ ಮಾಡಲು ಆಸಕ್ತಿ ಇರುವವರು ಸಂಪನ್ಮೂಲ ಕ್ರೋಡೀಕರಣಕ್ಕೆ ತೋಟಗಾರಿಕೆ ಇಲಾಖೆಯನ್ನು ಒಮ್ಮೆ ಸಂಪರ್ಕಿಸಬಹುದು. ಅಥವಾ ಇಲಾಖೆಗಳು ನಡೆಸುವ ಜೇನು ಕೃಷಿ ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡು ಪ್ರಾಯೋಗಿಕ ಅನುಭವ ಪಡೆಯಬೇಕು. ಆ ಬಳಿಕವೇ ಜೇನು ಕೃಷಿ ಮಾಡಲು ಮುಂದಾಗುವುದು ಒಳ್ಳೆಯದು. ಇದಕ್ಕೆ ಹೆಚ್ಚಿನ ಖರ್ಚು ಏನೂ ಇಲ್ಲ. ಸರಿಯಾದ ಕ್ರಮದಲ್ಲಿ ಜೇನು ಪೆಟ್ಟಿಗೆ ತಯಾರಿಸಿ ಆರಂಭಿಸಬಹುದು. ಇತ್ತೀಚೆಗೆ ಜೇನು ಪೆಟ್ಟಿಗೆ ಮಾರುಕಟ್ಟೆಯೂ ಸಿಗುತ್ತಿವೆ.
ಲೇಖನ: -ಡಾ. ವಿನಯ ಕುಮಾರ್. ಎಂ.ಎ., ಸಹಾಯಕ ಪ್ರಾಧ್ಯಾಪಕ,
ತೋಟಗಾರಿಕೆ ಸಂಶೋಧನೆ ಮತ್ತು ವಿಸ್ತರಣೆ ಕೇಂದ್ರ,
ದೇವಿಹೊಸೂರು, ಹಾವೇರಿ,
ಮೊಬೈಲ್ 9164405294.
ಕೃಪೆ: ವಾರ್ತಾ ಇಲಾಖೆ

Trackbacks/Pingbacks