ಹೋಳಿ ಹಬ್ಬ ಎಂದ ಕೂಡಲೇ ಬಣ್ಣ ನೆನಪಾಗುತ್ತವೆ. ಮಕ್ಕಳು ಪಿಚಕಾರಿಯಲ್ಲಿ ಬಣ್ಣದ ನೀರು ಹಾರಿಸಿ ಖುಷಿ ಹಂಚಿಕೊಳ್ಳುವುದು, ಪರಸ್ಪರ ಬಣ್ಣ ಬಳಿದು ಆನಂದಿಸುವುದು ಕಣ್ಣೆದುರು ಬರುತ್ತದೆ. ಈ ಬಣ್ಣದಾಟಕ್ಕೂ ಒಂದು ಇತಿಹಾಸವಿದೆ ಎನ್ನುವುದು ತಿಳಿದ ವಿಷಯ.

ಉತ್ತರ ಕನ್ನಡ ಜಿಲ್ಲೆಯ ಹೋಳಿ ಹಬ್ಬದ ವೈಭವವೇ ಭಿನ್ನ. ಹೋಳಿಯನ್ನು ಸುಗ್ಗಿ ಎಂದು ಆಚರಿಸುವ ಹಾಲಕ್ಕಿ ಒಕ್ಕಲಿಗರಿಗೆ ಸುಗ್ಗಿ ಕುಣಿತ ಎನ್ನುವ ವಿಶೇಷ ಸಂಸ್ಕೃತಿ ದೇವ ಗಣದಿಂದ ಬಂದ ಕಲೆ ಎನ್ನುವುದು ಕುತೂಹಲಕರ ಇತಿಹಾಸ. ಜಾನಪದ ಗಾನ ಕೋಗಿಲೆ ಎಂದು ದೇಶವೇ ಪರಿಚಯಿಸುವ ಸುಕ್ರಜ್ಜಿ (ಸುಕ್ರಿ ಬೊಮ್ಮು ಗೌಡ) ನಾಡಿನ ಈ ಸುಗ್ಗಿ ಸೊಬಗು ತಿಳಿದಷ್ಟು ರೋಮಾಂಚನ.

ವಿಡಿಯೊ ವೀಕ್ಷಿಸಿ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕುಮಟಾ, ಗೋಕರ್ಣ, ಅಂಕೋಲ ಹಾಗೂ ಕಾರವಾರ ಪ್ರದೇಶದ ಗುಡ್ಡದ ಅಂಚಿನಲ್ಲಿ ಹೆಚ್ಚಾಗಿ ಹಾಲಕ್ಕಿ ಒಕ್ಕಲಿಗರ ವಾಸವಿದೆ. ಹಾಲಕ್ಕಿ ಒಕ್ಕಲಿಗರ ಸುಗ್ಗಿ ರಾಗ ವರ್ಣರಂಜಿತ ಸಮಾವೇಶ. ಈ ಸುಗ್ಗಿ ಕುಣಿತವನ್ನು ಉತ್ತರ ಕನ್ನಡದ ವಿವಿಧ ಜನಾಂಗಳಾದ ನಾಯ್ಕರು (ನಾಮದಾರಿ), ಕೊಮಾರಪಂಥರು, ಗ್ರಾಮ ಒಕ್ಕಲಿಗರು, ಅಂಬಿಗರು, ಮುಕ್ರಿಯರು ಸಹ ಆಡುತ್ತಾರೆ. ಇದರಲ್ಲಿ ಹಾಲಕ್ಕಿಯವರಿಗೆ ಈ ಕಲೆ ಹೇಗೆ ಬಂತು ಎನ್ನುವುದಕ್ಕೆ ಆಡು ಮಾತಿನಿಂದ ಬಂದ ದಂಥ ಕತೆಗಳಿವೆ.

ಶಿವನ ಮಕ್ಕಳು ಕೊಟ್ಟ ಕಲೆ
ಒಮ್ಮೆ ಕೈಲಾಸದಲ್ಲಿ ಗಂಗೆ – ಗೌರಿಯರ ಮಕ್ಕಳಿಗೆ ಯಾವುದಾದರು ಕಲೆಯನ್ನು ಕಲಿಯಬೇಕೆಂಬ ಮನಸ್ಸಾಗುತ್ತದೆ. ಶಿವ ಅವರಿಷ್ಟದಂತೆ ಗುರುವಿನ ಬಳಿಗೆ ಕಳುಹಿಸುತ್ತಾನೆ. ಗುರು ಚೆನ್ನಿಮನ್ನೆ, ಹಾಣಿ, ಚೆಂಡಾಟ ಕಲಿಸಲೆ? ಎಂದು ಕೇಳಿದಾಗ ಮಕ್ಕಳು ತಿರಸ್ಕರಿಸುತ್ತಾರೆ. ಕೋಲಾಟ ಹರಿಜನರಾಡುವ ಆಟ. ಸಂಗಾಬಾಳ್ಯ ಸಿದ್ದರ ಆಟ, ಯಕ್ಷಗಾನ ಹೈಗರು ಆಡುವ ಆಟವೆಂದು ತಿರಸ್ಕರಿಸುತ್ತಾರೆ. ಆಗ ಗುರು ಸುಗ್ಗಿಯ ಕುಣಿತದೊಂದಿಗೆ ಅದನ್ನು ನಿಮಗೆ ಕಲಿಸಿದರೆ ನಿಮ್ಮ ತಂದೆ ತಾಯಿಗಳು ಒಪ್ಪುವುದಿಲ್ಲ ಎಂದು ಹೇಳಿದಾಗ ಮಕ್ಕಳು ಸುಗ್ಗಿ ಕುಣಿತವನ್ನೆ ಕಲಿಸುವಂತೆ ಒತ್ತಾಯ ಮಾಡುತ್ತಾರೆ.

ಅವರ ಒತ್ತಾಯಕ್ಕೆ ಮಣಿದು ಗುರು ಸುಗ್ಗಿ ಕುಣಿತ ಕಲಿಸಿ ಕೊಡುತ್ತಾರೆ. ಮಕ್ಕಳು ಊರಿನ ಮನೆಮನೆಯ ಮುಂದೆ ಸುಗ್ಗಿ ಕುಣಿತ ಪ್ರದರ್ಶನ ನೀಡಲು ಹೊರಡುತ್ತಾರೆ. ಇದನ್ನು ಗಮನಿಸಿದ ಶಂಕರ ನಮ್ಮಂತಹವರಿಗೆ ಇದು ಯೋಗ್ಯವಲ್ಲ ಎಂದು ಹೇಳಿ ಮಕ್ಕಳಿಗೆ ಶಾಪ ನೀಡುತ್ತಾನೆ. ಆಗ ಮಕ್ಕಳ ಕೈಯಲ್ಲಿದ್ದ ಕೋಲು ಕುಂಚ ನೆಲಕ್ಕೆ ಬೀಳುತ್ತದೆ. ಅಷ್ಟರಲ್ಲಿ ಹಾಲಕ್ಕಿ ಹುಡುಗನೊಬ್ಬ ಅದನ್ನು ಎತ್ತಿ ಕೊಳ್ಳುತ್ತಾನೆ. ಆಗ ಹುಡುಗರು ಎಲ್ಲವನ್ನು ಹಾಲಕ್ಕಿ ಹುಡುಗನಿಗೆ ಒಪ್ಪಿಸುತ್ತಾರೆ. ಗುರುಗಳು ಐದು ದಿನಗಳ ಕಾಲ ಮಾಂಸಹಾರ ತ್ಯಜಿಸಿ ಹಸಿರು ಗಿಡಗಳನ್ನು ಕಡಿಯದೆ ದೇವರನ್ನು ಪೂಜಿಸಿ, ಈ ಕಲೆಯನ್ನು ಪ್ರದರ್ಶಿಸಬೇಕೆಂದು ಕರಾರು ಹಾಕುತ್ತಾರೆ. ಇದರಿಂದ ಇಂದಿಗೂ ಈ ಸುಗ್ಗಿಯ ಕುಣಿತ ನಡೆದುಕೊಂಡು ಬಂದಿದೆ ಎನ್ನುವುದು ಕಲಾವಿದರು ಹೇಳುವ ಕತೆ.

ಸುಗ್ಗಿ ಮೇಳ, ಕರಡಿ ಕುಣಿತ
ಹಿರಿ ಸುಗ್ಗಿಯ ಪ್ರಮುಖ ಶೀರೋಭೂಷಣವಾದ ಬಣ್ಣ ಬಣ್ಣದ ಕಾಗದ ಚೆಂಡು ಬೆಗಡೆಗಳಿಂದ ಅವುಗಳ ಮೇಲೆ ಹಕ್ಕಿ ಕುಳಿತಂತೆ ಕಾಣುವ ಹಾಗೆ ಗುಡಿಗಾರರು ತಯಾರಿಸುತ್ತಾರೆ. ಸುಗ್ಗಿ ಕುಣಿಯುವವರು ಪಾಯಿಜಾಮ ಧರಿಸಿ ಕೆಂಪು ಹಳದಿ ಬಣ್ಣದ ನಿಲುವಂಗಿ ಹಾಕಿ ಮೇಲೆ ಜಾಕಿಟು ಧರಿಸಿ ಸೊಂಟಕ್ಕೆ ತುಂಡು ವಸ್ತ್ರಗಳನ್ನು ಕಟ್ಟಿಕೊಳ್ಳುತ್ತಾರೆ. ತಲೆಗೆ ರುಮಾಲು ಸುತ್ತಿ ತುರಾಯಿಯನ್ನು ಪೂಜಿಸಿ ಕಟ್ಟಿಕೊಳ್ಳುತ್ತಾರೆ.

ಸುಗ್ಗಿಯ ವೇಷ ಭೂಷಣಗಳನ್ನು ಧರಿಸಿದ ಕಲಾವಿದರು ಕೈಯಲ್ಲಿ ಕೋಲುಗಳನ್ನು ಹಿಡಿದು ಹಿಮ್ಮೆಳದ ವಾದ್ಯದ ಗತ್ತಿಗನುಗುಣವಾಗಿ ಕುಣಿಯುತ್ತಾರೆ. ಪದಗಾರರು ಪದಗಳನ್ನು ಹಾಡುತ್ತಾರೆ. ಕುಣಿಯುವವರ ಕುಣಿತ ಹಾಗೂ ಅಂಗಾಗ ವಿನ್ಯಾಸ ಭಂಗಿಯೂ ಬದಲಾಗುತ್ತದೆ. ವಾದ್ಯಮೇಳದ ಲಯ ಗತಿಗಳಿಗನುಗುಣವಾಗಿ ಚೋಹೋಚೋ, ಸೋಹೋಚೋ ಎಂದು ಹಾಡುತ್ತಾ ವಿವಿಧ ಭಂಗಿಯಲ್ಲಿ ಕುಣಿಯುತ್ತಾರೆ. ದಿನಕರ ದೇಸಾಯಿ ಅವರು ಇದೇ ಪದವನ್ನು ಬಳ್ಳಿ ಸುಗ್ಗಿಗೆ ವಿಶೇಷ ಹಾಡು ಬರೆದು ಸಂಯೋಜಿಸಿದ್ದು ಇಂದಿಗೂ ಬಳಕೆಯಲ್ಲಿದೆ.

ಸುಗ್ಗಿ ತಂಡದ ಪ್ರವಾಸ
ಪದಲಾದ ಪದ್ಧತಿಯಲ್ಲಿ ಸುಗ್ಗಿ ಕುಣಿತದ ತಂಡ ಹೋಳಿ ಹಬ್ಬಕ್ಕಿಂತ ಒಂದು ವಾರದ ಮೊದಲು ತಂಡ ಕಟ್ಟಿಕೊಂಡು ಪ್ರವಾಸ ಹೊರಡುತ್ತದೆ. ಊರಿನ ವಿವಿಧ ಮನೆಗಳ ಮುಂದೆ, ದೇವಸ್ಥಾನಗಳ ಮುಂದೆ ಸುಗ್ಗಿ ತಂಡ ಕುಣಿಯುತ್ತದೆ. ಆ ತಂಡದಲ್ಲಿ ಕರಡಿ ಮುಖವಾಡ ಧರಿಸುವ ತಂಡವೂ ಇರುತ್ತದೆ. ಆ ಮೇಳದ ವೈಭವವನ್ನು ನೋಡುವುದೇ ಒಂದು ಆನಂದ. ಸುಗ್ಗಿ ದಿನ ಅಂಕೋಲಾ ತಾಲೂಕಿನಲ್ಲಿ ವಿಶೇಷ ಮೆರವಣಿಗೆ ನಡೆಯುತ್ತದೆ. ಅಲ್ಲಿ ರಾಜಕೀಯ, ಪ್ರಸ್ತುತ ಸ್ಥಿತಿಯನ್ನು ಅಣಕಿಸುವ ವಿಶೇಷ ರೂಪಕಗಳು, ಹಾಸ್ಯ ತುಣುಕುಗಳು ನೋಡಲು ಸಿಗುತ್ತವೆ.

ಲೇಖನ, ವಿಡಿಯೊ: ಜಿ. ಶಿವರಾಜ