ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸದಾ ಉನ್ನತ ಶ್ರೇಣಿಯಲ್ಲಿರುತ್ತಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಈ ಬಾರಿ ಶೇ.100 ರಷ್ಟು ಸಾಧನೆ ಮಾಡಲು ರಾತ್ರಿ ಓದು ಎನ್ನುವ ಪ್ರಯೋಗಾತ್ಮಕ ಸಾಹಸಕ್ಕೆ ಕೈ ಹಾಕಿದೆ.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ರಾತ್ರಿಯೂ ಶಾಲೆಗೆ ಕರೆಯಿಸಿ ಓದಲು ಹಚುತ್ತಿದೆ. ಶಿಕ್ಷಕರು ಸರದಿ ಪ್ರಕಾರದಲ್ಲಿ ವಿದ್ಯಾರ್ಥಿಗಳೊಂದಿಗೆ ಇದ್ದು ಮಾರ್ಗದರ್ಶನ ಮಾಡುತ್ತಿರುವುದು ವಿಶೇಷ. ಇದೊಂದು ವಿನೂತನ ಪ್ರಯೋಗವಾಗಿದ್ದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಧಿಕಾರಿಗಳ ಸಾಹಸ ಎಲ್ಲೆಡೆ ಗಮನಸೆಳೆಯುತ್ತಿದೆ. ಆಗಸ್ಟನಲ್ಲಿ ಬಂದ ಪ್ರವಾಹದಿಂದಾಗಿ ಚಿಕ್ಕೋಡಿಯಲ್ಲಿ ಸುಮಾರು ಎರಡು ತಿಂಗಳು ತರಗತಿಗಳು ನಡೆಯದೆ ಸಮಸ್ಯೆಯಾಗಿತ್ತು. ಪ್ರವಾಹ ಇಳಿದ ಬಳಿಕ ವಿಶೇಷ ತರಗತಿಗಳ ಮೂಲಕ ಪಠ್ಯಕ್ರಮ ಬೋಧನೆ ಪೂರ್ಣಗೊಳಿಸುತ್ತಿರುವ ಶಿಕ್ಷಕರು ಅದರ ಜತೆಯಲ್ಲಿಯೇ ಪರೀಕ್ಷಾ ಸಿದ್ಧತೆಗಾಗಿ ಅನೇಕ ಹೊಸ ಪ್ರಯೋಗಗಳನ್ನು ನಡೆಸುತ್ತಿದ್ದಾರೆ.

ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ಅವರು ಹೇಳುವಂತೆ, ಎಸ್ಸೆಸ್ಸೆಲ್ಸಿ ಹುಡುಗರು ಪ್ರತಿ ದಿನ ರಾತ್ರಿ 8 ಗಂಟೆಗೆ ಊಟ ಮುಗಿಸಿ ಸಮೀಪದ ಶಾಲೆಗೆ ಬರುತ್ತಾರೆ. ಅವರ ಜತೆಯಲ್ಲಿಯೇ ಸರದಿ ಪ್ರಕಾರ ಶಿಕ್ಷಕರೊಬ್ಬರು ಬರುತ್ತಾರೆ. ಆ ಶಿಕ್ಷಕರ ಮೇಲುಸ್ತುವಾರಿಯಲ್ಲಿ ವಿದ್ಯಾರ್ಥಿಗಳು ರಾತ್ರಿ 11 ಗಂಟೆವರೆಗೆ ಓದಿ ಶಾಲೆಯಲ್ಲಿಯೇ ಮಲಗುತ್ತಾರೆ. ಬೆಳಗ್ಗೆ ಮತ್ತೆ 5 ಗಂಟೆಗೆ ಎದ್ದು ಬೆಳಗ್ಗೆ 7 ಗಂಟೆವರೆಗೆ ಓದಿ ಮನೆಗೆ ಹೋಗುತ್ತಾರೆ.
ಶಾಲೆಯ ಶಿಕ್ಷಕರು ಬಾಲಕಿಯರು ಅಥವಾ ಅವರ ಪಾಲಕರ ಮೊಬೈಲ್ ಸಂಖ್ಯೆಗೆ ಮಿಸ್ ಕಾಲ್ ಕೊಟ್ಟು ಬಾಲಕಿಯರನ್ನು ಬೆಳಗ್ಗೆ ಓದಲು ಹಚ್ಚುತ್ತಾರೆ. ಬೆಳಗ್ಗೆ 9 ಗಂಟೆಗೆ ಎಲ್ಲರೂ ಮತ್ತೆ ಶಾಲೆಗೆ ಬರುತ್ತಾರೆ. ಆಗ ವಿಶೇಷ ತರಗತಿಗಳು ನಡೆಯುತ್ತವೆ. 10 ಗಂಟೆಗೆ ಪ್ರಾರ್ಥನೆ ನಡೆದು ಬಳಿಕ ಆರಂಭವಾಗುವ ಮೊದಲ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಎರಡು ನಿಮಿಷ ಧ್ಯಾನ ಮಾಡಿಸಲಾಗುತ್ತದೆ. ನಂತರ ಸಂಜೆ ವರೆಗೆ ತರಗತಿಗಳು ನಡೆಯುತ್ತವೆ.

ಆ ತರಗತಿ ಸಮಯದಲ್ಲಿ ವಿದ್ಯಾರ್ಥಿಗಳಿಗೆ 100*100 ಎನ್ನುವ ಪ್ರಾಯೋಗಿಕ ಪರೀಕ್ಷೆಯೊಂದು ನಡೆಯುತ್ತದೆ. ಅಂದರೆ, 100 ಪ್ರಶ್ನೆಗಳಿಗೆ ವಿದ್ಯಾರ್ಥಿಗಳು 100 ನಿಮಿಷಗಳಲ್ಲಿ ಪುಸ್ತಕ ನೋಡಿಕೊಂಡು ಉತ್ತರ ಬರೆಯಬೇಕು. ಹೀಗೆ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಉತ್ತರದ ಬಗೆಗಿನ ಗೊಂದಲ ನಿವಾರಣೆ ಆಗುತ್ತದೆ ಎನ್ನುವುದು ಶಿಕ್ಷಕರ ಅಭಿಪ್ರಾಯ.
ಸಂಜೆ ತರಗತಿ ಸಮಯದಲ್ಲಿ ಮತ್ತೆ ವಿದ್ಯಾರ್ಥಿಗಳಿಗೆ ಬಯಲು, ತರಗತಿ ಹೀಗೆ ಶಾಂತ ಪ್ರದೇಶಗಳಲ್ಲಿ ಗುಂಪು ಅಧ್ಯಯನ ನಡೆಯುತ್ತದೆ. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳೂ ಸಹ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವಂತೆ ಮಾಡುವುದು ಈ ಪ್ರಯತ್ನದ ಉದ್ದೇಶ ಎಂದು ಡಿಡಿಪಿಐ ಗಜಾನನ ಮನ್ನಿಕೇರಿ ತಿಳಿಸಿದರು.