ಶಿವಮೊಗ್ಗದಲ್ಲಿ ಕದ್ದ ಶ್ರೀಗಂಧ ಬನವಾಸಿ ಪೊಲೀಸರ ಬಲೆಗೆ

ಕಾರವಾರ: ಬನವಾಸಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದಾಗಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಂತರ್ ಜಿಲ್ಲಾ ಶ್ರೀಗಂಧ ಕಳ್ಳ ಸಾಗಣೆ ಜಾಲವೊಂದು ಪತ್ತೆಯಾಗಿದೆ.
ಶಿರಸಿ ತಾಲೂಕಿನ ಬನವಾಸಿ ಪೊಲೀಸರು ಬುಧವಾರ ಇಬ್ಬರನ್ನು ಬಂಧಿಸಿ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದ ಬನವಾಸಿ ಮೂಲಕ ಶಿರಸಿಗೆ ಸಾಗಿಸುತ್ತಿದ್ದಾಗ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಆರೋಪಿಗಳು ಈ ಹಿಂದೆಯೂ ಹಲವು ಬಾರಿ ಇದೇ ರೀತಿ ಶ್ರೀಗಂಧ ಸಾಗಣೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಕರಕುಶಲ ವಸ್ತುಗಳನ್ನು ಮಾಡುವ ಸಲುವಾಗಿ ಶ್ರೀಗಂಧವನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು ಎರಡು ಲಕ್ಷ ರೂ. ಮೌಲ್ಯದ 6 ಗಂಧದ ತುಂಡುಗಳನ್ನು ಹಾಗೂ ಸಾಗಾಣಿಕೆಗೆ ಬಳಸಿದ ಸ್ವಿಪ್ಟ್ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಸಿಕ್ಕಿ ಬಿದ್ದಿದ್ದು ಹೇಗೆ?
ಆರೋಪಿಗಳು ಕಾರಿನಲ್ಲಿ ಶ್ರೀಗಂಧವನ್ನು ಸಾಗಿಸುತ್ತಿದ್ದರು. ಶ್ರೀಗಂಧ ಕಳ್ಳ ಸಾಗಣೆಯಾಗುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಬನವಾಸಿಯಲ್ಲಿ ಕಾರನ್ನು ತಡೆದು ತಪಾಸಣೆ ನಡೆಸಿದ್ದಾರೆ. ಆಗ ಇಬ್ಬರು ಪರಾರಿಯಾಗಿದ್ದು, ಇನ್ನಿಬ್ಬರು ಸಿಕ್ಕಿಬಿದ್ದಿದ್ದಾರೆ.
ಬಂಧಿತ ಆರೋಪಿಗಳನ್ನು ಮಹೇಶ ಗುಡಿಗಾರ, ಗಣೇಶ ಗುಡಿಗಾರ ಎಂದು ಗುರುತಿಸಲಾಗಿದೆ. ಫೀರ್ ಖಾನ್, ಶಬಾನ್ ಫೀರ್ ಖಾನ್ ಎನ್ನುವವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬನವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬನವಾಸಿ ಠಾಣೆ ಸಬ್ ಇನ್ ಸ್ಪೆಕ್ಟರ್ ಮಹಾಂತೇಶ ನಾಯಕ, ಸಿಬ್ಬಂದಿ ಶಿವರಾಜ, ರಾಜೇಶ, ಗಣೇಶ ಕಾರ್ಯಾಚರಣೆಯಲ್ಲಿದ್ದರು.

Super