
ಲಡಕಾಸಿ ಸೈಕಲ್ ಗೂ ಕೆಲಸ ಕೊಟ್ಟ ಮಂಡ್ಯ ರೈತರು

ಕೃಷಿ ಸುಧಾರಣೆಗೆ ಅದೆಷ್ಟೋ ಹೊಸ ಪ್ರಯೋಗಗಳು ನಡೆಯುತ್ತಿವೆ. ನಾಟಿ ಮಾಡಲು, ಕಳೆ ಕೀಳಲು, ಬೆಳೆ ಕತ್ತರಿಸಲು ಟ್ರ್ಯಾಕ್ಟರ್, ಟಿಲ್ಲರ್ ಹೀಗೆ ಎಂತೆಂಥದ್ದೋ ಯಂತ್ರಗಳು ಮಾರುಕಟ್ಟೆಗೆ ಬಂದಿವೆ. ಆದರೆ, ಮಂಡ್ಯದ ರೈತರು ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ತಮ್ಮ ಹೊಲಗಳಲ್ಲಿ ಸೈಕಲ್ ಓಡಿಸುತ್ತಿದ್ದಾರೆ.
ಬೈಕ್ ಗಳ ಹಾವಳಿಯಿಂದ ಕಳೆದುಹೋಗಿದ್ದ ಆ ಸೈಕಲ್ ಗಳು ಈಗ ಎಷ್ಟು ಸದ್ದು ಮಾಡುತ್ತಿವೆ ಎಂದರೆ ಒಬ್ಬರನ್ನು ನೋಡಿ ಮತ್ತೊಬ್ಬ ರೈತರು ಬೆಳೆಗಳ ಮಧ್ಯೆ ಸೈಕಲ್ ಓಡಿಸಲು ಶುರು ಮಾಡಿದ್ದಾರೆ. ಕೂಲಿ ಆಳುಗಳ ಚಿಂತೆ ಇಲ್ಲ. ಯಂತ್ರಗಳಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕೆಂದಿಲ್ಲ. ಸುಮ್ಮನೆ ಸೈಕಲ್ ದೂಡಿಕೊಂಡು ಹೋದರೆ ಸಾಕು ಹೊಲದಲ್ಲಿ ಬೆಳೆದಿದ್ದ ಕಳೆಗಳೆಲ್ಲ ಕಿತ್ತು ಬೀಳುತ್ತವೆ.
ಅದೆಂಥ ಸೈಕಲ್ ಎಂದು ಹೌಹಾರ ಬೇಕಿಲ್ಲ. ಕೂಲಿಗಳ ಸಮಸ್ಯೆಯಿಂದ ಪಾರಾಗಲು ರೈತರೇ ಮುರುಕಲು ಸೈಕಲ್ ನಿಂದ ತಯಾರಿಸಿಕೊಂಡ ಯಂತ್ರವದು. ಕೃಷಿ ಸರಳೀಕರಣಕ್ಕೆ ಏನೇನೋ ಸಂಶೋಧನೆಗಳು ನಡೆಯುವಾಗ ಮಂಡ್ಯದ ಹೈದರು ಗುಜರಿ ಸೇರಬೇಕಿದ್ದ ಸೈಕಲ್ ನಿಂದ ಬಹುಪಯೋಗಿ ಸರಳ ಯಂತ್ರ ಕಂಡು ಹಿಡಿದು ಯಾವ ಎಂಜಿನಿಯರ್ ಗೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿದ್ದಾರೆ.
ರಾಗಿ, ಹೂವು, ಸೋಯಾ ಬೀನ್ ಹೀಗೆ ಇತರ ಬೆಳೆಗಳ ನಡುವಿನ ಕಳೆ ಕೀಳಲು, ಮಣ್ಣು ಒತ್ತರಿಸಲು ಸೈಕಲ್ ಕುಂಟೆ ಸರಳ ಸಾಧನವಾಗಿದೆ. ಮಂಡ್ಯದಲ್ಲಿ ಬಹುತೇಕ ರೈತರು ಇದನ್ನೇ ಬಳಸಲು ಆರಂಭಿಸಿದ್ದಾರೆ. ಮೇಲುಕೋಟೆಯಲ್ಲಿಯೇ ನೂರಕ್ಕೂ ಹೆಚ್ಚು ರೈತರು ಸೈಕಲ್ ಕುಂಟೆ ಬಳಸುತ್ತಿದ್ದಾರಂತೆ.
ಹೇಗಿದೆ ಸೈಕಲ್ ಕುಂಟೆ
ಮುರುಕಲು ಸೈಕಲ್ ನ ಮುಂದಿನ ಹ್ಯಾಂಡಲ್ ಚಕ್ರ ನೆಟ್ಟಗಿದ್ದರೆ ಆ ಸೈಕಲ್ ಅನ್ನು ಮಧ್ಯದಲ್ಲಿ ಕತ್ತರಿಸಿ ಪ್ಯಾಡಲ್ ಇರುವ ಭಾಗದಲ್ಲಿ ಕಬ್ಬಿಣದ ಎರಡು ಹಲ್ಲಿನ ಕುಂಟೆ ವೆಲ್ಡಿಂಗ್ ಮಾಡಲಾಗಿದೆ.
ಈ ಕುಂಟೆಯಿಂದ ಹೊಲದಲ್ಲಿ ಕಳೆ ಕೀಳಲು ಹೆಚ್ಚು ಆಳು, ದನಗಳು ಬೇಕಿಲ್ಲ. ಒಬ್ಬರೇ ಸೈಕಲ್ ದೂಡಿಕೊಂಡು ಹೋದರೆ ಸಾಕು. ಕುಂಟೆಯ ಹಲ್ಲುಗಳು ಮಣ್ಣು ಅಗೆಯುತ್ತವೆ. ಹೆಚ್ಚು ಆಳಕ್ಕೆ ಮಣ್ಣು ಅಗೆಯಬೇಕಿದ್ದರೆ ಸ್ಪಲ್ಪ ಶಕ್ತಿ ಉಪಯೋಗಿಸಬೇಕು. ಇಲ್ಲದಿದ್ದರೆ ಕುಂಟೆಯೇ ಭಾರಕ್ಕೆ ತಕ್ಕಷ್ಟು ಮಣ್ಣು ಅಗೆಯುತ್ತದೆ ಎನ್ನುತ್ತಾರೆ ಮಂಡ್ಯದ ರೈತ ದಿವಾಕರ್ ಅವರು. ಇದರಿಂದ ಮಾನವ ಕೂಲಿ, ಸಮಯ ಎರಡೂ ಉಳಿತಾಯವಾಗುತ್ತದೆ ಎಂದು ರೈತ ಸತೀಶ ಮೆಚ್ಚುಗೆ ಹೇಳಿಕೊಂಡರು.

ಸಮಸ್ಯೆಯಿಂದ ತಯಾರಾದ ಕುಂಟೆ
ಸೈಕಲ್ ಕುಂಟೆ ಮೂಲ ಶೋಧಕರು ಯಾರು ಎನ್ನುವುದು ಸ್ಪಷ್ಟವಿಲ್ಲ. ಆದರೆ, ತಮ್ಮ ಸ್ನೇಹಿತ ದಿವಾಕರ ಸೈಕಲ್ ಕುಂಟೆ ತಯಾರಿಸಿಕೊಂಡಿದ್ದ. ಅದನ್ನು ಈಗ ಎಲ್ಲರೂ ಬಳಸುತ್ತಿದ್ದಾರೆ ಎನ್ನುತ್ತಾರೆ ಮೇಲುಕೋಟೆಯ ರೈತ ಸತೀಶ.
ಕೂಲಿ ಆಳು ಸಿಗದೆ ಕೃಷಿ ಮಾಡುವುದು ಬಹಳ ಸಮಸ್ಯೆಯಾಗಿತ್ತು. ಹೀಗೆಯೇ ಒಂದು ಉಪಾಯ ಹೊಳೆದಾಗ ಮೂಲೆಯಲ್ಲಿದ್ದ ಸೈಕಲ್ ಕತ್ತರಿಸಿ ಕುಂಟೆ ಜೋಡಿಸಿದೆ. ಅದು ಕೆಲಸಕ್ಕೆ ಬಂತು. ಹೆಚ್ಚಿನ ಶ್ರಮ ಇಲ್ಲ. ಕೂಲಿ, ಆಳುಗಳ ಗೋಜು ಇಲ್ಲ. ಸೈಕಲ್ ದೂಡಿಕೊಂಡು ಹೋದರೆ ಸಾಕು ಎಂದು ದಿವಾಕರ ಅವರು ಸೈಕಲ್ ಕುಂಟೆ ತಯಾರಿಸಿದ ಬಗೆ ವಿವರಿಸಿದರು.