ಮಳೆಯಿಂದ ತೇವಾಂಶ ಹೆಚ್ಚಾಗಿ ಕಬ್ಬಿನಲ್ಲಿ ಬಿಳಿ ನೊಣಗಳ ಹಾವಳಿ ಹೆಚ್ಚಾಗುತ್ತಿದೆ. ಈ ನೊಣಗಳು ಬೆಳೆಯ ಬೆಳವಣಿಗೆಯನ್ನು ಕುಂಟಿತಗೊಳಿಸುವುದಲ್ಲದೆ ಇಳುವರಿಯನ್ನೂ ಹಾಳು ಮಾಡುತ್ತದೆ. ಹಾಗಂತ ಅತಿರೇಕದಿಂದ ರಾಸಾಯನಿಕ ಔಷಧ ಸಿಂಪಡಿಸುವುದು ಸಹ ಯೋಗ್ಯವಲ್ಲ. ಔಷಧ ಬಳಕೆ ಹೇಗಿರಬೇಕು ಎಂದು ಕೃಷಿ ತಜ್ಞರು ಮಾಹಿತಿ ನೀಡಿದ್ದಾರೆ.

ಬಿಳಿ ನೊಣವು ಆಸರೆ ಬೆಳೆಗಳಾದ ಕಬ್ಬು, ಜೋಳ, ಬಿದಿರು ಹಾಗೂ ಇನ್ನಿತರ ಹುಲ್ಲಿನ ಜಾತಿಗೆ ಸೇರಿರುವ ಬೆಳೆಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಮಣ್ಣಿನಲ್ಲಿದ್ದಂತಹ ತೇವಾಂಶ ಹೆಚ್ಚಾಗಿ ಪೊರೈಸಿದ ಸಾರಜನಕ ಬೆಳೆಗೆ ಸಮರ್ಪಕವಾಗಿ ದೊರೆಯದೆ ಇರುವುದರಿಂದ ಬಿಳಿನೊಣದ ಬಾದೆ ಏಕಾಏಕಿಯಾಗಿ ಹೆಚ್ಚಾಗಿದೆ.

ಮರಿ ಮತ್ತು ಪ್ರೌಢ ಕೀಟಗಳು ಸತತವಾಗಿ ಎಲೆಯ ಕೆಳಭಾಗದಿಂದ ರಸ ಹೀರುವುದರಿಂದ ಎಲೆಗಳು ಹಳದಿ ಹಾಗೂ ಗುಲಾಬಿ ಅಥವಾ ನೇರಳೆ/ಕೆಂಪು ಬಣ್ಣಕ್ಕೆ ತಿರುಗಿ ನಂತರ ಒಣಗಿ ಹೋಗುತ್ತವೆ. ಬಿಳಿನೊಣದ ಕೋಶದ ಕವಚ ಕಪ್ಪು ಬಣ್ಣದಿಂದ ಕೂಡಿರುವುದರಿಂದ ಎಲೆಗಳು ಬೀಳಿ ಮತ್ತು ಕಪ್ಪು ಚುಕ್ಕೆಗಳಾಗಿ ಕಾಣುತ್ತದೆ.

ಸಕ್ಕರೆ ಅಂಶ ಕೂಡಿದ ಪದಾರ್ಥದಿಂದಾಗಿ ಎಲೆಯ ಮೇಲ್ಭಾಗದಲ್ಲಿ ಕಪ್ಪು ಬೂಷ್ಟ ಬೆಳೆಯುತ್ತದೆ. ಇದರಿಂದ ಕಬ್ಬಿನ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಹಾಗೂ ಶೇ.25-30 ರಷ್ಟು ಇಳುವರಿ ಕಡಿಮೆಯಾಗುತ್ತದೆ.

ಇದನ್ನು ಓದಿ: ಶುಂಠಿ: ಕಡಿಮೆ ಬಿತ್ತನೆಯಲ್ಲಿ ಅಧಿಕ ಇಳುವರಿ ಟಿಪ್ಸ್

ನಿರ್ವಹಣೆಗೆ ಏನು ಮಾಡಬೇಕು

ರೈತರು ಬಿಳಿ ನೊಣದ ಬಾಧೆ ಕಂಡ ತಕ್ಷಣ 0.5 ಗ್ರಾಂ. ಥಯೋಮಿಥಾಕ್ಸಾಮ್ 25 ಡಬ್ಲ್ಯೂ.ಜಿ ಅಥವಾ 2 ಮೀ.ಲೀ. ಡೈಮಿಥೋಯೆಟ್ 30 ಇ.ಸಿ. ಅಥವಾ 0.5 ಮಿ.ಲಿ. ಇಮಿಡಾಕ್ಲೋಪ್ರಿಡ 17.8 % ಎಸ್.ಎಲ್. ಅಥವಾ ಎಸಿಪೇಟ 75 % ಎಸ್.ಪಿ. 1.5 ಗ್ರಾಂ ಅಥವಾ ಎಸಿಟಾಮಾಪ್ರಿಡ 20 % ಎಸ್.ಪಿ. 0.5 ಗ್ರಾಂ ಪ್ರತಿ ಲೀಟರ ನೀರಿಗೆ + ಜೊತೆಗೆ ಶೇ. 2 ರ ಯೂರಿಯಾ (20 ಗ್ರಾಂ) ಪ್ರತಿ ಲೀಟರ್ ನೀರಿನಲ್ಲಿ ಬೆರಿಸಿ ಸಿಂಪರಣೆ ಮಾಡಬೇಕು.

ಇದನ್ನು ಓದಿ: ಕೃಷಿ ಸ್ಟಾರ್ಟಪ್: ರೈತರ ಉತ್ಪನ್ನಗಳಿಗೆ ಭರ್ಜರಿ ಡಿಮಾಂಡ್

ಕೀಟದ ತೀವ್ರತೆಗೆ ಅನುಗುಣವಾಗಿ 15 ದಿನಗಳ ಅಂತರದಲ್ಲಿ ಎರಡನೇಯ ಸಿಂಪರಣೆ ಮಾಡಬೇಕು. ಮೇಲ್ಗೊಬ್ಬರವಾಗಿ ನೀರು ಕೊಟ್ಟ ನಂತರ ಪ್ರತಿ ಎಕರೆಗೆ 20-25 ಕಿ.ಗ್ರಾಂ ಯೂರಿಯಾ + ಜೊತೆಗೆ ಹರಳು ರೂಪದ ಕೀಟನಾಶಕಗಳಾದ ಕ್ಲೋರ್ಯಾಂಟ್ರಿನಿಲಿಪ್ರೊಲ್ 0.4 ಜಿ.ಆರ್ @ 5 ಕಿ.ಗ್ರಾಂ ಪ್ರತಿ ಎಕರೆಗೆ ಕೊಡುವುದು ಸೂಕ್ತ.

ಇದನ್ನು ಓದಿ: ಬೆಳೆ ನುಂಗುವ ಶಂಕು ಹುಳು ನಿಯಂತ್ರಿಸುವ ಕ್ರಮಗಳು

ಕಬ್ಬಿನ ಪರಿಸರದಲ್ಲಿ ಪರಭಕ್ಷಕ ಕೀಟ (ಗುಲಗಂಜಿ ಹುಳು) ಹಾಗೂ ಜೈವಿಕ ಶೀಲಿಂದ್ರ (ಅಕ್ರಿಮೊನಿಯಂ ಜೈಲ್ಯಾನಿಕಂ) ಕಂಡುಬಂದಲ್ಲಿ ಅವನ್ನು ಉತ್ತೇಜಿಸುವುದು. (ಇಂತಹ ಸಮಯದಲ್ಲಿ ರಾಸಾಯನಿಕವನ್ನು ಬಳಸುವುದು ಸೂಕ್ತವಲ್ಲ).

ಇದನ್ನು ಓದಿ: ಸೂರ್ಯಕಾಂತಿ ಬೆಳೆಯಲ್ಲಿ ರೋಗ ಕಂಡರೆ ತಕ್ಷಣವೇ ಹೀಗೆ ಮಾಡಿ

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ಡಾ. ಬಸವರಾಜ ಅವರ ಮೊಬೈಲ್ ಸಂಖ್ಯೆ 9945488197 ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆ ತಿಳಿಸಿದೆ.