ಪಾಟೀಲ್ ಪುಟ್ಟಪ್ಪ ಹೇಳಿದ ಬದುಕಿನ ನಾಲ್ಕು ಸ್ವಾರಸ್ಯ ಘಟನೆಗಳು

ಪಾಟೀಲ್ ಪುಟ್ಟಪ್ಪ ಹೇಳಿದ ಬದುಕಿನ ನಾಲ್ಕು ಸ್ವಾರಸ್ಯ ಘಟನೆಗಳು

ಕನ್ನಡ ಪತ್ರಿಕೋದ್ಯಮದ ಭೀಷ್ಮ, ಅಪ್ರತಿಮ ಕನ್ನಡ ಹೋರಾಟಗಾರ ಪಾಟೀಲ್ ಪುಟ್ಟಪ್ಪ ಬದುಕು ಈಗಲೂ ಹುಬ್ಬೇರಿಸುವಂಥದ್ದು. ವಕೀಲ ಶಿಕ್ಷಣದಿಂದ ಪತ್ರಕರ್ತನಾಗಿ, ಸಾಹಿತಿಯಾಗಿ, ಕನ್ನಡ ಹೋರಾಟಗಾರನಾಗಿ ಬೆಳೆದು ಇತಿಹಾಸವನ್ನೇ ಸೃಷ್ಟಿಸಿದ್ದಾರೆ.

ಅಂಥ ಅಪ್ರತಿಮ ಚೈತನ್ಯ ಪಾಟೀಲ ಪುಟ್ಟಪ್ಪ ಅವರು ತಮ್ಮ ಜೀವನದ ಕೆಲ ಮರೆಯಲಾಗದ ಘಟನೆಗಳನ್ನು ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆ ಘಟನೆಗಳನ್ನು ಪ್ರೀತಿಯ ಪಾಪು ಅವರು ಹೇಳಿದ ಮಾತಿನಲ್ಲಿಯೇ ನಿಮ್ಮ ಮುಂದೆ ಇಡುತ್ತಿದ್ದೇವೆ.

ಅಸಲಿಗೆ ಪಾಟೀಲ್ ಪುಟ್ಟಪ್ಪ ಅವರ ಮೂಲ ಹೆಸರು ಶಿವಕುಮಾರ. ಹಾವೇರಿ ಜಿಲ್ಲೆಯ ಕುರುಬಗೊಂಡ ಗ್ರಾಮದ ರೈತ ಕುಟುಂಬದಲ್ಲಿ ಹುಟ್ಟಿದ ಅವರು ನಂತರ ಎಲ್ಲರ ಪ್ರೀತಿಯ ಪಾಟೀಲ್ ಪುಟ್ಟಪ್ಪ ಆಗಿದ್ದಾರೆ. ಕೆಲ ವರ್ಷಗಳ ಹಿಂದೆ ವಾರ್ತಾ ಇಲಾಖೆ ನಿರ್ಮಿಸಿದ ಕಿರು ಚಿತ್ರದಲ್ಲಿ ತಮ್ಮ ಬದುಕಿನ ಕೆಲ ಘಟನೆಗಳನ್ನು ಪಾಪು ಹೇಳಿಕೊಂಡಿದ್ದಾರೆ.

ಘಟನೆ-1:
ರೈಲು ಕಲಿಸಿದ ಪಾಠ
ನಾನು ಶಾಲೆ ಸೇರಿದ್ದು 8 ನೇ ವಯಸ್ಸಿನಲ್ಲಿ. ಆಗ ನನಗೆ ಬೇಗ ವಿದ್ಯೆ ಹತ್ತಿದರೂ ಗಣೀತ ಮಾತ್ರ ಮೈ ಮೇಲಿನ ಮುಳ್ಳಿನಂತಾಗಿತ್ತು. ಉಳಿದೆಲ್ಲ ವಿಷಯಗಳಲ್ಲಿ ಬುದ್ಧಿವಂತಾಗಿದ್ದೆ. ಬ್ಯಾಡಗಿಯಲ್ಲಿ ಓದುತ್ತಿರುವಾಗ ರೈಲು ನೋಡಲು ಹೋಗುತ್ತಿದ್ದೆವು. ರೈಲು ಸದಾ ಚಲಿಸುತ್ತಿರುವ ವಾಹನ. ಅದರ ಚಲನಶೀಲತೆ ಬಲು ಇಷ್ಟ. ನಮ್ಮ ತಂಡದಲ್ಲಿ ಮುತ್ತೂರು ಎನ್ನುವ ಗೆಳೆಯ ಇದ್ದ. ಆಗಲೇ ಅವನು ಕೈಗೆ ವಾಚು ಕಟ್ಟುತ್ತಿದ್ದ. ಅಲ್ಲಿವರೆಗೆ ನಾವು ವಾಚು ನೋಡಿಯೇ ಇರಲಿಲ್ಲ.

ಒಮ್ಮೆ ರೈಲು ನೋಡುತ್ತಿದ್ದಾಗ ರೈಲು ಚಾಲಕನಿಗೆ ವಾಚು ತೋರಿಸಿದ. ರೈಲು ಹೊರಡಲು ಆರಂಭಿಸಿದರೂ ಆತ ವಾಚ್ ಕೊಡಲೇ ಇಲ್ಲ. ಆಗ ಮುತ್ತೂರುಗೆ ಸಿಟ್ಟು ಬಂದು ಕಲ್ಲು ಹೊಡೆದ. ರೈಲಿನ ಎಣ್ಣೆ ಡಬ್ಬಿಗೆ ಕಲ್ಲು ಬಿದ್ದು ಒಡೆಯಿತು. ಬಳಿಕ ಎಲ್ಲರೂ ಓಡಿ ಹೋದರು.

ರೈಲ್ವೆ ಚಾಲಕ ಮತ್ತು ಸಿಬ್ಬಂದಿ ನನ್ನನ್ನು ಹಿಡಿದರು. ನಾನೇ ಕಲ್ಲು ಹೊಡೆದವನು ಎಂದು ಅವರು ಹೇಳುತ್ತಿದ್ದರು. ಆದರೆ, ಅಲ್ಲೊಬ್ಬ ಅಧಿಕಾರಿ ಬಂದು. “ನೋ ನಾಟ್ ದಿಸ್ ಬಾಯ್’ (ಈ ಹುಡುಗ ಅಲ್ಲ) ಎಂದರು. ಆಗಲೇ ಸತ್ಯದ ಬಗೆಗಿನ ಹೋರಾಟದ ಮನೋಭಾವ ಬೆಳೆಯಿತು.

ಘಟನೆ-2
ನಾನು ನೋಡಿದ್ದು ಒಬ್ಬಳನ್ನೇ
ಆಕಸ್ಮಿಕವಾಗಿ ವಿಜಯಪುರಕ್ಕೆ ಹೋದಾಗ ಬಿ.ಎಂ. ಪಾಟೀಲ್ ಅವರ ಮಗಳನ್ನು ನೋಡಿದೆ. ನಾನು ನೋಡಿದ್ದು ಒಬ್ಬಳನ್ನೇ. ಅವಳೇ ಇಂದುಮತಿ. ಮದುವೆ ಆಗಿ ಬಂದಾಗ ಪತ್ನಿಗೆ ಅಡುಗೆ ಗೊತ್ತಿರಲಿಲ್ಲ. ಬಹಳ ಜಾಗೃತೆಯಿಂದ ಅಡುಗೆ ಕಲಿತಳು. ಒಮ್ಮೆ ಮೂರು, ಒಮ್ಮೆ ಎಂಟು ಜನರನ್ನು ಮನೆಗೆ ಕರೆದು ಕೊಂಡು ಬರುತ್ತಿದ್ದೆ. ಅವರೆಲ್ಲರಿಗೂ ಒಂದೇ ತಾಸಿನಲ್ಲಿ ಊಟ ಮಾಡಿ ಕಳುಹಿಸಬೇಕು ಎನ್ನುತ್ತಿದ್ದೆ. ಹೆಂಡತಿ ನನಗಾಗಿ ಸಾಕಷ್ಟು ಕಷ್ಟಪಟ್ಟಿದ್ದಾಳೆ.

ಘಟನೆ-3
ಎಚ್ಚರ ಆದಾಗ ಸಂಜೆ 5 ಆಗಿತ್ತು

ಪತ್ರಕರ್ತನಾಗಿ ಕೆಲಸ ಮಾಡುವ ಸಂದರ್ಭದಲ್ಲಿ ದೇವರೆ ನಿದ್ದಿ ಕೊಡು ಎನ್ನುವ ಸ್ಥಿತಿ ಇತ್ತು. ಒಂದು ದಿನ ಮುಂಜಾನೆ 3 ಗಂಟೆಗೆ ಮನೆಗೆ ಬಂದೆ. ಬೆಳಗ್ಗೆ 10 ಗಂಟೆಗೆ ಏಳಬೇಕು. ಪತ್ರಿಕೆಗೆ ಸಂಪಾದಕೀಯ ಬರೆಯಬೇಕು. ಆ ಮೇಲೆ ಮಲಗಿ ಮತ್ತೆ ಐದು ಗಂಟೆಗೆ ಹೋಗಬೇಕು ಎಂದುಕೊಂಡೆ. ಎಚ್ಚರ ಆದಾಗ ಗಡಿಯಾರದಲ್ಲಿ 3 ಗಂಟೆ ತೋರಿಸಿತು. ಗಡಿಯಾರ ನಿಂತಿದೆ ಎಂದು ಮುಳ್ಳು ತಿರುಗಿಸಿದೆ. ನಂತರ ಮತ್ತೊಮ್ಮೆ ಎಚ್ಚರ ಆದಾಗ ಪಶ್ಚಿಮ ದಿಕ್ಕಿನಿಂದ ಬೆಳಕು ಬೀಳುತ್ತಿತ್ತು. ಹೊರಗೆ ಹೋಗಿ ಕೇಳಿದಾಗ ಸಂಜೆ 5 ಗಂಟೆಯಾಗಿತ್ತು. ಊಟ ಇಲ್ಲ. ತಿಂಡಿ ಇಲ್ಲದೆ ಮುಂಜಾನೆ 3 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ನಿದ್ದೆ ಮಾಡಿದ್ದೆ. ಲಗುಬಗೆಯಿಂದ ಎದ್ದು ಆಫೀಸ್ ಗೆ ಹೋದೆ. ಸಂಪಾದಕೀಯ ಬರೆಯಬೇಕಿತ್ತು. ಅಂಥ ಜೀವನ ಬದುಕುವವರು ಈಗ ಯಾರೂ ಇಲ್ಲ. ಅಂಥದ್ದನ್ನು ಈಗಿನವರು ಬಯಸುವುದೂ ಇಲ್ಲ.

ಘಟನೆ-4
ಯಂತ್ರ ಪಡೆಯುವುದಕ್ಕೂ ಹಣ ಇರಲಿಲ್ಲ

ಒಮ್ಮೆ ಬಾಂಬೆ ಹೋಗಿದ್ದೆ. ಚಾಮರ್ ಬಾಬು ಎನ್ನುವವನಿದ್ದ. ಪ್ರೆಸ್ (ಮುದ್ರಣ ಯಂತ್ರ) ಮಾರುವವನಿದ್ದ. ದೊಡ್ಡ ಪೇಪರ್ ಪ್ರಿಂಟ್ ಮಾಡುವ ಯಂತ್ರ ಅದು. 5001 ರೂ.ಗೆ ಖರೀದಿಸಿದೆ. ಅಲ್ಲಿಯೇ ಮೂರು ಸಾವಿರ ರೂ. ಕ್ಯಾಶ್ ಕೊಟ್ಟೆ. ಬಾಕಿ ಎರಡು ಸಾವಿರ ರೂ. ಕೊಡಬೇಕಿತ್ತು.

ಒಂದು ದಿನ ರೈಲ್ವೆ ಮೂಲಕ ಯಂತ್ರ ಹುಬ್ಬಳ್ಳಿಗೆ ಬಂತು. ಎರಡು ಸಾವಿರ ರೂ. ಹಣ ಕಟ್ಟಿ ಯಂತ್ರ ಬಿಡಿಸಿಕೊಳ್ಳಬೇಕಿತ್ತು. ಆದರೆ, ಹಣ ಇರಲಿಲ್ಲ. ಅಷ್ಟೊತ್ತಿಗೆ ಭಾರತ ಸರ್ಕಾರದಿಂದ ಉತ್ತರ ಇಂಡಿಯಾ ಯೋಜನೆ ನೋಡಲು ಆಹ್ವಾನ ಬಂತು. ಎರಡು ವಾರ ಹೋಗಬೇಕಿತ್ತು.1956 ಜೂನ್ 21ಕ್ಕೆ ಹೋಗಬೇಕಿತ್ತು. ಅಷ್ಟರೊಳಗೆ ಹಣ ಕಟ್ಟಿ ಯಂತ್ರ ಪಡೆಯಬೇಕಿತ್ತು.

ಒಬ್ಬ ದೊಡ್ಡ ಮನುಷ್ಯರೊಬ್ಬರ ಬಳಿ ಹೋದೆ. ಜೂನ್ 22 ಡೇಟ್ ಹಾಕಿ ಚೆಕ್ ಕೊಟ್ಟರು. ಆ ಚೆಕ್ ಪಡೆದು ಹಣ ಕೊಡುವಂತೆ ಒಬ್ಬರ ಬಳಿ ಹೋಗಿ ಹಣ ಕೇಳಿದೆ. ಇಲ್ಲ ಆಗೋದಿಲ್ಲ ಎಂದರು. ಸಮಯ 12 ಆಯಿತು. 1.30ಕ್ಕೆ ರೈಲು ಹೊರಡಬೇಕಿತ್ತು.

ಆಗ ಬಸಣ್ಣ ವಾಲಿ ಅವರ ಬಳಿ ಕೇಳಿದೆ. ಈಗಷ್ಟೇ ಬ್ಯಾಂಕಿಗೆ ಹಣ ಕಟ್ಟಿ ಬಂದೆ. ಹಣ ಕಟ್ಟುವ ಅಧಿಕಾರ ನನಗಿದೆ. ಪಡೆಯುವ ಅಧಿಕಾರ ಇಲ್ಲ ಎಂದರು. ಆದರೂ ಚೆಕ್ ತೆಗೆದುಕೊಂಡು ಯಾರದೋ ಅಂಗಡಿಯಿಂದ ಹಣ ತಂದು ಕೊಟ್ಟರು. ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಂತರ ನಡೆದಿದ್ದೆಲ್ಲ ಇತಿಹಾಸವೇ ಆಗಿದೆ.

Leave a reply

Your email address will not be published. Required fields are marked *