ಸಣ್ಣ ಸುಳಿವನ್ನು ಬಿಡದೆ ಮೈಸೂರಿನಿಂದ ಕಾಲ್ಕಿತ್ತ ಸ್ಯಾಂಟ್ರೋ ರವಿ ಗುಜರಾತ್ ನಲ್ಲಿ ತಗಲಾಕ್ಕೊಂಡಿದ್ದೇಗೆ..?

ಬೆಂಗಳೂರು: ರಾಜಕಾರಣಿಗಳು ಹಾಗೂ ಅಧಿಕಾರಿಗಳ ಜೊತೆ ಉತ್ತಮ ಸಂಪರ್ಕ ಹೊಂದಿದ್ದ ಕುಖ್ಯಾತ ಕ್ರಿಮಿನಲ್ ಕೆ.ಎಸ್.ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿ ತನ್ನ ಬಗ್ಗೆ ಒಂದು ಸಣ್ಣ ಸುಳಿವನ್ನು ಬಿಡದೆ ಮೈಸೂರಿನಿಂದ ಕಾಲ್ಕಿತ್ತ.
ಮುಂದೆ ಆತ ಗುಜರಾತ್ ನ ಅಹ್ಮದಾಬಾದ್ ನಲ್ಲಿ ಖಾಕಿ ಖೆಡ್ಡಾಕ್ಕೆ ಬಿದ್ದ. ಆದ್ರೆ ಈ ಕಾರ್ಯ ಸುಲಭವಾಗಿ ನಡೆದಿದ್ದು, ಮಂತ್ರಾಲಯದ ರಾಯರ ದರ್ಶನಕ್ಕೆ ಬಂದಿದ್ದವನಿಂದಲೇ ಅನ್ನೋದೆ ವಿಶೇಷ.
ಹೌದು, ಸ್ಯಾಂಟ್ರೋ ರವಿ ಜಾಮೀನು ಅರ್ಜಿಯನ್ನು ಆಪ್ತ ಲಷ್ಮಿತ್ ಅಲಿಯಾಸ್ ಚೇತನ್ ಎಂಬಾತ ಸಲ್ಲಿಸಿದ್ದ. ಆದ್ರೆ, ಇವನು ನಿನ್ನೆ(ಜ.12) ಮಂತ್ರಾಲಯದ ರಾಯರ ದರ್ಶನಕ್ಕೆ ಬಂದಿದ್ದ. ಈ ವೇಳೆ ರಾಯಚೂರು ಪೊಲೀಸರು ಚೇತನ್ನನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ.
ಆ ವೇಳೆ ಆತ ಸ್ಯಾಂಟ್ರೋ ರವಿ ಬಗ್ಗೆ ನಿಜ ಬಾಯ್ಬಿಟ್ಟಿದ್ದಾನೆ. ಕೂಡಲೇ ಎಸ್.ಪಿ ನಿಖಿಲ್ ಅವರು ಚೇತನ್ನನ್ನು ಮೈಸೂರಿಗೆ ಕರೆದೊಯ್ದು, ಅಲ್ಲಿ ಇತರೆ ಪೊಲೀಸ್ ಅಧಿಕಾರಿಗಳೊಂದಿಗೆ ಮತ್ತಷ್ಟು ಮಾಹಿತಿಗಳನ್ನು ಕಲೆಹಾಕಿದ್ದಾರೆ.
ಬಳಿಕ ಆತ ನೀಡಿದ ಮಾಹಿತಿ ಆಧರಿಸಿ ಗುಜರಾತ್ ನಲ್ಲಿದ್ದ ಸ್ಯಾಂಟ್ರೋ ರವಿಗೆ ಖಾಕಿ ಪಡೆ ಬಲೆ ಬೀಸಿತು. ಕರ್ನಾಟಕದ ಪೊಲೀಸ್ ಅಧಿಕಾರಿಗಳ ಸತತ ಪ್ರಯತ್ನದಿಂದ ಸ್ಯಾಂಟ್ರೋ ಅರೆಸ್ಟ್ ಆಗಿದ್ದಾನೆ. ಇತನ ಜೊತೆ ಸತೀಶ್ ಹಾಗೂ ರಾಮ್ ಜೀ ಎಂಬುವವರನ್ನು ಬಂಧಿಸಲಾಗಿದೆ. ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಎಡಿಜಿಪಿ ಅಲೋಕ್ ಕುಮಾರ್, ರಾಯಚೂರು ಎಸ್ಪಿ, ಮಂಡ್ಯ ಎಸ್ಪಿ, ರಾಮನಗರ ಎಸ್ಪಿ ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಜನವರಿ 2 ರಂದು ಸ್ಯಾಂಟ್ರೋ ರವಿ ವಿರುದ್ಧ ಆತನ 2ನೇ ಪತ್ನಿ, ವಂಚನೆ, ಲೈಂಗಿಕ ದೌರ್ಜನ್ಯ, ಕೌಂಟುಬಿಕ ದೌರ್ಜನ್ಯ ಮಾಡಿರುವುದಾಗಿ ದೂರು ದಾಖಲಿಸಿದ್ರು. ಇದಾದ ಬಳಿಕ ಅಕ್ರಮ ವರ್ಗಾವಣೆ, ಲೇವಾದೇವಿ ಪ್ರಕರಣ ಹೀಗೆ ಹತ್ತಾರು ಕೇಸ್ಗಳ ಕರ್ಮಕಾಂಡ ಹೊರ ಬರುತ್ತಿದ್ದಂತೆಯೇ ಸ್ಯಾಂಟ್ರೋ ರವಿ ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ.
ಬಳಿಕ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿತು. ಸ್ಯಾಂಟ್ರೋ ರವಿಯ ಬಂಧನಕ್ಕಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ತಂಡಗಳನ್ನು ರಚಿಸಿ ಎಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದರು. ಇದೀಗ ಪೊಲೀಸ್ ವಿಶೇಷ ತನಿಖಾ ತಂಡ ಸ್ಯಾಂಟ್ರೋ ರವಿಯನ್ನು ಬಂಧಿಸಿದೆ.
