ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹಲವು ವಿಧದ ಔಷಧೀಯ ಗುಣಗಳೂ ಇದರಲ್ಲಿ ಕಂಡುಬರುತ್ತವೆ. ಆಹಾರದ ರುಚಿಯನ್ನು ಹೆಚ್ಚಿಸಲು ಇದನ್ನು ಭಾರತೀಯ ಪಾಕಪದ್ಧತಿಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಸಂಶೋಧಕರ ಪ್ರಕಾರ, ಖನಿಜಗಳು, ಜೀವಸತ್ವಗಳು ಮತ್ತು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವ ಅಂಶಗಳು ಬೆಳ್ಳುಳ್ಳಿಯಲ್ಲಿ ಹೇರಳವಾಗಿ ಕಂಡುಬರುತ್ತವೆ.

ಅನೇಕ ರೋಗಗಳನ್ನು ಗುಣಪಡಿಸಲು ಬೆಳ್ಳುಳ್ಳಿಯನ್ನು ಶತಮಾನಗಳಿಂದ ಬಳಸಲಾಗುತ್ತಿದೆ. ತಜ್ಞರ ಪ್ರಕಾರ, ಖಿನ್ನತೆಯಂತಹ ರೋಗಗಳನ್ನು ಜಯಿಸಲು ಬೆಳ್ಳುಳ್ಳಿ ಸಹಾಯ ಮಾಡುತ್ತದೆ. ಮೂಲ್ಯವ್ಯಾಧಿ, ಮಲಬದ್ಧತೆ, ಕಿವಿನೋವು, ರಕ್ತದೊತ್ತಡ ಇತ್ಯಾದಿ ಅನೇಕ ಕಾಯಿಲೆಗಳಿಗೆ ಇದು ರಾಮಬಾಣ.

ಬೆಳ್ಳುಳ್ಳಿ ಗುಣಗಳು

ಬೆಳ್ಳುಳ್ಳಿ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ ಸೆಪ್ಟಿಕ್ ( ನಂಜು ವಿರೋಧಕ ) ಗುಣಗಳಿಂದಾಗಿ ಚಿಕಿತ್ಸಕ ಮತ್ತು ವೈದ್ಯಕೀಯ ಉಪಯೋಗಗಳನ್ನು ಹೊಂದಿದೆ. ಬೆಳ್ಳುಳ್ಳಿಯಲ್ಲಿ ವಿಟಮಿನ್ ಸಿ, ಫೋಲೇಟ್, ನಿಯಾಸಿನ್ ಮತ್ತು ಥಯಾಮಿನ್ ಸಮೃದ್ದವಾಗಿದೆ. ಅರೊಮ್ಯಾಟಿಕ್ ಪರಿಮಳವನ್ನು ಹೊಂದಿರುವ ಜೊತೆಗೆ ಬೆಳ್ಳುಳ್ಳಿ ಮಾನವನ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.

ಹೃದಯದ ಆರೋಗ್ಯಕ್ಕೆ ಉತ್ತಮ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಬೇರೆ ರೋಗಕ್ಕಿಂತ ಹೃದಯಾಘಾತ ಮತ್ತು ಪಾರ್ಶ್ವವಾಯುಗಳಂತಹ ಹೃದಯ ರಕ್ತನಾಳಗಳ ತೊಂದರೆಯಿಂದ ಮರಣ ಹೊಂದುತ್ತಿದ್ದಾರೆ. ಕೇವಲ ವಯೋವೃದ್ಧರು ಅಷ್ಟೇ ಅಲ್ಲದೆ ಮಯಸ್ಕರು, ಮಕ್ಕಳಲ್ಲಿಯೂ ಹೃದಯಾಘಾತ ಸಾಮಾನ್ಯವಾಗಿದೆ. ಇದಕ್ಕೆ ಕಾರಣ ಈಗೀನ ಜೀವನ ಶೈಲಿ ಹಾಗೂ ಆಹಾರ ಪದ್ಧತಿ. ‌ಅಧಿಕ ರಕ್ತದೊತ್ತಡವು ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತದೆ. ಮುಖ್ಯವಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯು. ಈ ರಕ್ತದೊತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಬೆಳ್ಳುಳ್ಳಿಯು ಮುಖ್ಯ ಪಾತ್ರ ವಹಿಸುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ

ಹಸಿ ಬೆಳ್ಳುಳ್ಳಿಯನ್ನು ಆಹಾರದಲ್ಲಿ ಸೇರಿಸುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಇದು ಸಹಾಯ ಮಾಡುತ್ತದೆ. ಇದು ಉರಿಯೂತವನ್ನು ಶಮನಗೊಳಿವುದರ ಜೊತೆಗೆ ಕರುಳಿಗೂ ಸಹ ಒಳ್ಳೆಯದು. ಹಸಿ ಬೆಳ್ಳುಳ್ಳಿಯ ಸೇವನೆಯು ಕರುಳಿನ ಹುಳಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಸಿವನ್ನು ಹೆಚ್ಚಿಸುವ ಕೆಲಸವನ್ನು ಇದು ಮಾಡುತ್ತದೆ. ಬೆಳ್ಳೆಗ್ಗೆ ಬೆಳ್ಳುಳ್ಳಿ ಸೇವಿಸಿದ ಒಂದು ಗಂಟೆಯಲ್ಲಿ ಜೀರ್ಣವಾಗಿ ಅದು ಆರೋಗ್ಯ ವೃದ್ಧಿ ಮಾಡುತ್ತದೆ.


ರೋಗ ನಿರೋಧಕ ಶಕ್ತಿ ದುಪ್ಪಟ್ಟು

ಹಸಿ ಬೆಳ್ಳುಳ್ಳಿಯನ್ನು ಬಳಸಿ ಶೀತ ಮತ್ತು ಕೆಮ್ಮಿನಂತಹ ಸೋಂಕನ್ನು ತಡೆಯಬಹುದು. ಬೆಳಗ್ಗೆ ಎರಡು ಜಜ್ಜಿದ ಬೆಳ್ಳುಳ್ಳಿ ಎಸಲುಗಳನ್ನು ಸೇವಿಸುವುದರಿಂದ ನಿಮಗೆ ಉತ್ತಮ ಫಲಿತಾಂಶ ದೊರೆಯಲಿದೆ. ನಮ್ಮ ಹಿರಿಯರು ಹಸುಗೂಸಿಗೆ ಶೀತ ಆದರೆ ಬೆಳ್ಳುಳ್ಳಿ ಸರ ಮಾಡಿ ಕತ್ತಿಗೆ ಹಾಕುತ್ತಿದ್ದರು. ಈ ಹಾರದ ವಾಸನೆ ತೆಗೆದುಕೊಳ್ಳುವುದರಿಂದ, ಕೂಸಿನ ಶೀತ ಕಡಿಮೆಯಾಗುತ್ತದೆ. ಅಸ್ತಮಾ, ಕೆಮ್ಮು, ಕಫ ಕಡಿಮೆ ಮಾಡುವಲ್ಲಿ ಬೆಳ್ಳುಳ್ಳಿ ಸಹಾಯ ಮಾಡುತ್ತದೆ. ಬೆಳ್ಳುಳ್ಳಿ ದೇಹದ ಆಲ್ಯಸ ಕಡಿಮೆ ಮಾಡಿ ಶರೀರಕ್ಕೊಂದು ವಿಶೇಷ ಶಕ್ತಿ ಕೊಡುತ್ತದೆ.

ಕೊಲೆಸ್ಟ್ರಾಲ್​​ ದೂರ

ಕೊಲೆಸ್ಟ್ರಾಲ್ ಕಡಿಮೆ ಮಾಡಲು ಬೆಳ್ಳುಳ್ಳಿ ಸಹಾಯ ಮಾಡುತ್ತದೆ. ಶರೀರದಲ್ಲಿ ವಿಷ ಪದಾರ್ಥವನ್ನು ಮಲ ಹಾಗೂ ಮೂತ್ರದ ಮೂಲಕ ಹೊರ ಹಾಕುತ್ತದೆ. ಬೆಳ್ಳುಳ್ಳಿಯ ಬಳಕೆಯಿಂದ ಕೊಲೆಸ್ಟ್ರಾಲ್​​ನ್ನು ಉತ್ಪಾದಿಸುವ ಯಕೃತ್ತಿನ ಸಾಮಾರ್ಥ್ಯವನ್ನು ಕಡಿಮೆ ಮಾಡಬಹುದು. ಬೆಳ್ಳುಳ್ಳಿ ಆ್ಯಂಟಿ ಫಂಗಲ್, ಆ್ಯಂಟಿ ವೈರಲ್ ಹಾಗೂ ಆ್ಯಂಟಿ ಬ್ಯಾಕ್ಟೀರಿಯಾ ಲಕ್ಷಣಗಳನ್ನು ಹೊಂದಿದೆ. ಬೆಳ್ಳುಳ್ಳಿಯು ವೈರಾಣುಗಳು, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ವಿರುದ್ಧ ರಕ್ಷಣೆ ನೀಡುವ ಆ್ಯಂಟಿ ಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ.

ಆದ್ದರಿಂದ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇರಿಸುವುದು ಉತ್ತಮ. ಇದು ಉರಿಯೂತದ ವಿರೋಧಿ ಸಾಮರ್ಥ್ಯಗಳನ್ನು ಹೊಂದಿದೆ. ಬೆಳ್ಳುಳ್ಳಿ ಎಣ್ಣೆಯು ಆ್ಯಂಟಿ ಇಫ್ಲಮೆಂಟರಿ (ಉರಿಯೂತದ ವಿರೋಧಿ) ಗುಣಲಕ್ಷಣಗಳನ್ನು ಹೊಂದಿದೆ ಎಂದು ಸಂಶೋಧನೆಯ ಮೂಲಕ ಸಾಬೀತಾಗಿದೆ. ಯಾವುದೇ ನೋವು, ಊದಿಕೊಂಡ ಕೀಲುಗಳು ಅಥವಾ ಸ್ನಾಯುಗಳ ಮೇಲೆ ಸ್ವಲ್ಪ ಬೆಳ್ಳುಳ್ಳಿ ಎಣ್ಣೆಯನ್ನು ಹಚ್ಚುವುದರಿಂದ ನೋವು ಕಡಿಮೆ ಆಗುತ್ತದೆ. ಪ್ರತಿದಿನ ಹುರಿದ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಚಯಾಪಚಯ ಕ್ರಿಯೆ ಸುಲಭವಾಗಿ ದೇಹದ ಬೊಜ್ಜು ಕರಗಿಸುವಲ್ಲಿ ಸಹಾಯ ಮಾಡುತ್ತದೆ.


ಚರ್ಮದ ಆರೈಕೆಯಲ್ಲಿ ಬೆಳ್ಳುಳ್ಳಿ

ಬೆಳ್ಳುಳ್ಳಿಯ ಉತ್ಕರ್ಷಣ ನಿರೋಧಕಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮೊಡವೆಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ತೆಗೆದು ಹಾಕುವ ಮೂಲಕ ನಿಮ್ಮ ಮುಖವನ್ನು ಸ್ವಚ್ಛಗೊಳಿಸುತ್ತದೆ.

ಕ್ಯಾನ್ಸರ್ ವಿರುದ್ಧ ಹೋರಾಡುವುದು

ಬೆಳ್ಳುಳ್ಳಿ ತಿನ್ನುವುದರಿಂದ ಕ್ಯಾನ್ಸರ್ ವಿರುದ್ಧ ರಕ್ಷಿಸಲು ಸಹಾಯ ಮಾಡುತ್ತದೆ. ಅದರ ಹಲವಾರು ಜೈವಿಕ ಸಕ್ರಿಯ ಅಣುಗಳು ಕ್ಯಾನ್ಸರ್ ಕೋಶಗಳ ಹರಡುವಿಕೆಯನ್ನು ಕೊಲ್ಲುತ್ತದೆ ಎಂದು ಅಧ್ಯಯನಗಳು ಹೇಳಿವೆ. ಹುರಿದ ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ ಕ್ಯಾನ್ಸರ್ ಕೋಶಗಳು ಶಕ್ತಿ ಕಳೆದುಕೊಳ್ಳುತ್ತವೆ

ರಕ್ತ ಹೆಪ್ಪುಗಟ್ಟಿದಂತೆ ತಡೆಯುವುದು

ಬೆಳ್ಳುಳ್ಳಿ ಮತ್ತು ಈರುಳ್ಳಿಯಲ್ಲಿರುವ ಸಂಯುಕ್ತಗಳು ನಮ್ಮ ಪ್ಲೇಟ್‌ಲೇಟ್ ಜಿಗುಟುತನವನ್ನು ಕಡಿಮೆ ಮಾಡುತ್ತದೆ. ಹೆಪ್ಪುಗಟ್ಟುವಿಕೆಯನ್ನು ತಡೆಯುವ ಸಾಮರ್ಥ್ಯವನ್ನು ಬೆಳ್ಳುಳ್ಳಿ ಹೊಂದಿದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಶ್ವಾಸನಾಳಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.