ರೈತನ ಬಾಳಲ್ಲಿ ಜೀವಜಲ ತುಂಬಿದ ರಿಂಗ್ ಮಾಸ್ಟರ್ ನರೇಗಾ

ಉತ್ತರ ಕನ್ನಡ
ಅಂಗೈ ಅಗಲದ ಭೂಮಿಯಲ್ಲಿ ಬೆರಳ ಗಾತ್ರ ನೀರುಕ್ಕುವ ಕೊಳವೆ ಬಾವಿ, ಅದನ್ನೇ ನಂಬಿ ನೆಟ್ಟ ಅಡಿಕೆ ಸಸಿ, ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ಹುಲುಸಾಗಿ ಬೆಳೆದು ನಿಂತ ತೋಟ. ಇನ್ನೇನು ಫಲ ಕೋಡಬೇಕು ಅನ್ನುಷ್ಟರಲ್ಲಿ ಕೈಕೊಟ್ಟ ನೀರು! ಇನ್ನೆಲ್ಲಿಯ ನೀರು, ಇನ್ನೆಲಿಯ ಅಡಿಕೆ ಎಂದು ತಲೆ ಮೇಲೆ ಕೈಹೊದ್ದು ಕೂತ ರೈತನ ತಲೆ ಮೇಲೆ ಕೈ ಸವರಿ ಆಸರೆಯಾಗಿ ಜಲಧಾರೆ ಹರಿಸಿದ್ದು ಮಹಾತ್ಮ ಗಾಂಧಿ ನರೇಗಾ ಯೋಜನೆ!
ಹೌದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ನಾಗನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹನುಮಾಪುರ ಗ್ರಾಮದ ರೈತ ನಿಂಗಯ್ಯ ಬಸಯ್ಯ ಹಿರೇಮಠ ಹಾಗೂ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಿಕೊಂಡ ರಿಂಗ್ ಬಾವಿ ಹೀಗೊಂದು ಸ್ಪೂರ್ತಿಯ ಕಥೆಗೆ ಸಾಕ್ಷಿಯಾಗಿದೆ.
ಏಳೆಂಟು ವರ್ಷದ ಹಿಂದೆ ರೈತ ನಿಂಗಯ್ಯ ತಮ್ಮ ಜಮೀನಿನಲ್ಲಿ ಅಡಿಕೆ ತೋಟ ನಿರ್ಮಿಸಿದ್ದರು.
ಆರಂಭದಲ್ಲಿ ಚೆನ್ನಾಗಿಯೇ ಇದ್ದ ಕೊಳವೆ ಬಾವಿಯಲ್ಲಿ ವರ್ಷದಿಂದ ವರ್ಷಕ್ಕೆ ನೀರಿನ ಪ್ರಮಾಣ ಕುಗ್ಗುತ್ತ ಬಂದಿತು. ಹಠಕ್ಕೆ ಬಿದ್ದು ತೋಟ ಬೆಳೆಸಿದ ರೈತ ನಿಂಗಯ್ಯ, ಇನ್ನೇನು ಫಸಲು ಬಂದು ಲಾಭ ಪಡೆಯಬೇಕು ಎನ್ನುವಷ್ಟರಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಯಿತು. ವರ್ಷಕಾಲ ಬೆಳೆಸಿದ ತೋಟ ಕಣ್ಮುಂದೆಯೆ ಒಣಗಲಾರಂಭಿಸಿತು. ಆಗ ನೆರವಿಗೆ ಬಂದಿದ್ದೇ ಮನರೇಗಾ ಯೋಜನೆ.
ಗ್ರಾಮ ಪಂಚಾಯತ್ ಸಂಪರ್ಕದಿAದ ಮನರೇಗಾ ಯೋಜನೆಯಡಿ ರಿಂಗ್ ಬಾವಿ ನಿರ್ಮಿಸುವ ಅವಕಾಶವನ್ನು ರೈತ ಸಮರ್ಪಕವಾಗಿ ಬಳಸಿಕೊಳ್ಳುತ್ತಾರೆ. 2024-25ನೇ ಸಾಲಿನಲ್ಲಿ ಅಂದಾಜು 1.50 ಲಕ್ಷ ರೂ. ಅನುದಾನದಲ್ಲಿ 20 ಅಡಿ ಆಳ, 8 ಅಡಿ ಅಗಲ ನಿರ್ಮಿಸಬೇಕಿದ್ದ ಬಾವಿಯನ್ನು ತಾನೂ ಒಂದಿಷ್ಟು ಹಣ ಸೇರಿಸಿ 30 ಅಡಿ ಆಳ, 12 ಅಡಿ ಅಗಲದ ರಿಂಗ್ ಬಾವಿಯನ್ನು ನಿರ್ಮಿಸಿಕೊಳ್ಳುತ್ತಾರೆ. ಅಂದುಕೊAಡದ್ದಕ್ಕಿAತ ಉತ್ತಮವಾಗಿ ಬಾವಿ ನಿರ್ಮಾಣವಾಗುತ್ತದೆ.
ಮಳೆಯ ನೀರಿನಿಂದ ಭರಪೂರ ತುಂಬಿ, ಈಡೀ ತೋಟದ ದಾಹವನ್ನು ಇದೊಂದೆ ಬಾವಿ ನೀಗಿಸುತ್ತದೆ. ನೀರಿಲ್ಲದೇ ಒಣಗಿ ಕಳೆಗಟ್ಟಿದ್ದ ತೋಟ ಮತ್ತೆ ಹಸಿರಿನಿಂದ ಚಿಗುರಿ ಕಂಗೊಳಿಸಲು ಆರಂಭಿಸುತ್ತದೆ. ಯಥೇಚ್ಛ ನೀರಿನ ಸಂಗ್ರಹ ಕಂಡು ಹುರಿದುಂಬಿದ ರೈತ 400 ಸಸಿ ಇದ್ದ ಅಡಿಕೆ ತೋಟಕ್ಕೆ ಮತ್ತೆ 500 ಸಸಿಗಳನ್ನು ಹೆಚ್ಚುವರಿಯಾಗಿ ನೆಡುತ್ತಾರೆ. ಅಂತರ ಬೆಳೆಯಾಗಿ ಕಾಫಿ, ಬಾಳೆ, ಕಾಳು ಮೆಣಸು, ತೆಂಗು, ಲಿಂಬು, ಪಪ್ಪಾಯ, ಮೆಕಡೋಮಿಯಾ, ಲಕ್ಷ್ಮಣ ಫಲ ಸೇರಿದಂತೆ ಹತ್ತಾರು ವೈವಿಧ್ಯಮಯ ಬೆಳೆಗಳನ್ನು ಯಶಸ್ವಿಯಾಗಿ ಬೆಳೆಯುತ್ತಿದ್ದಾರೆ.
ಅಷ್ಟೇ ಅಲ್ಲದೆ ಯೋಜನೆಯಡಿ ಈ ಹಿಂದೆ ನಿರ್ಮಿಸಿಕೊಂಡಿದ್ದ ಕೊಟ್ಟಿಗೆ ಮನೆಯಲ್ಲಿ ದನಕರುಗಳನ್ನು ಸಾಕಿ, ಎರೆಹುಳು ತೊಟ್ಟಿ ನಿರ್ಮಿಸಿಕೊಂಡು ಸಾವಯವ ಗೊಬ್ಬರ ತಯಾರಿಸಿಕೊಳ್ಳುತ್ತಿದ್ದಾರೆ. ಅಡಿಕೆಯನ್ನು ನೇರವಾಗಿ ಮಾರದೇ ಸಂಸ್ಕರಿಸಿ ಮಾರುವುದರಿಂದ ಅಧಿಕ ಲಾಭ ಗಳಿಸುತ್ತಿದ್ದಾರೆ. ಹೀಗೆ ಹಲವು ಮೂಲಗಳಿಂದ ಲಕ್ಷ ರೂ. ಲೆಕ್ಕದಲ್ಲಿ ಆರ್ಥಿಕವಾಗಿ ಸದೃಢವಾಗುತ್ತಿರುವುದ್ದಲ್ಲದೇ ವಿಭಿನ್ನ ಪ್ರಯೋಗಗಳ ಮೂಲಕ ಸುತ್ತಮುತ್ತಲಿನ ರೈತರಿಗೆ ಮಾದರಿ ಕೃಷಿಕನಾಗಿ ಹೊರಹೊಮ್ಮಿದ್ದಾರೆ.
‘ನೀರ ಇಲ್ದಂಗ ತೋಟ ಸಾಯಬೇಕಾರ ಉದ್ಯೋಗ ಖಾತರಿ ದೇವ್ರಂಗ ಬಂದು ಕಾಪಾಡೇತಿ. ಈಗ ಎಲ್ಲ ಫಸಲು ಚುಲೊ ಬರಾತಾವು. ಉದ್ಯೋಗ ಖಾತರಿಯಿಂದ ನನ್ನ ಜೀವನ ಹಸನ ಆಗೇತಿ ರೀ’
-ನಿಂಗಯ್ಯ ಬಸಯ್ಯ ಹಿರೇಮಠ, ರೈತ.
‘ಗ್ರಾಮೀಣ ಭಾಗದಲ್ಲಿ ದೀರ್ಘ ಬಾಳಿಕೆ ಬರುವ ನೂರಾರು ವೈಯಕ್ತಿಕ ಮತ್ತು ಸಮುದಾಯ ಸೌಲಭÀ್ಯಗಳನ್ನು ಪಡೆಯಲು ಮನರೇಗಾ ಯೋಜನೆಯಡಿ ಸಾಕಷ್ಟು ಅವಕಾಶಗಳಿವೆ. ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.
-ಕರೀಂ ಅಸದಿ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ.
