ಕಬ್ಬಿನ ರವದಿಯಿಂದ ಮಣ್ಣಿನ ಫಲವತ್ತತೆ ಹೆಚ್ಚಿಸುವ ಪಂಚ ಸೂತ್ರಗಳು

ಕಬ್ಬುಗಳಲ್ಲಿ ಹೆಚ್ಚು ಇಳುವರಿ ಪಡೆಯುವ ಆತುರದಲ್ಲಿ ಮಣ್ಣಿಗೆ ನೇರವಾಗಿ ರಾಸಾಯನಿಕ ಗೊಬ್ಬರ ಸೇರಿಸಿ ಅಪಾಯ ತಂದು ಕೊಳ್ಳುತ್ತೇವೆ. ಅಲ್ಲದೆ ಕಬ್ಬಿನ ರವದಿಗಳನ್ನು ಹೊಲದಲ್ಲಿಯೇ ಸುಟ್ಟು ಅನೇಕ ಅಬಾಧಿಗಳಿಗೆ ದಾರಿ ಮಾಡಿಕೊಡುತ್ತಿದ್ದೇವೆ. ಇದನ್ನೆಲ್ಲ ಬಿಟ್ಟು ಮಣ್ಣಿನ ಫಲವತ್ತತೆ ಉಳಿಸಿಕೊಂಡು ಕಬ್ಬಿನ ರವದಿಯನ್ನೇ ಆಸ್ತಿ ಮಾಡಿಕೊಳ್ಳುವ ಹೊಸ ಮಾದರಿಯನ್ನು ಕೃಷಿ ಇಲಾಖೆ ಪರಿಚಯಿಸುತ್ತಿದೆ.
ಕಬ್ಬಿನ ತಾಜ್ಯವಾದ ರವದಿಯನ್ನು ಸುಡುವುದರಿಂದ ಮಣ್ಣಿನ ಮೇಲ್ಪದರದ ಜೀವಾಣು ನಾಶವಾಗುತ್ತದೆ. ಊಳಿದ ಕುಳೆಗೂ ಹಾನಿಯಾಗುವುದು. ನೀರಿನ ಬಳಕೆ ಹೆಚ್ಚುತ್ತದೆ. ಈ ರೀತಿ ಮಾಡುವ ಬದಲು ರವದಿಯನ್ನು ಮಣ್ಣಿನಲ್ಲಿ ಬೆರೆಸಿ ಫಲವತ್ತತೆ ಹೆಚ್ಚು ಮಾಡಬಹುದು. ಒಂದು ಎಕರೆಯಲ್ಲಿ ಕಟಾವಾದ ಕಬ್ಬಿನಿಂದ ಸುಮಾರು 4 ರಿಂದ 6 ಟನ್ ರವದಿ ದೊರೆಯುತ್ತದೆ. ಒಂದು ಟನ್ ರವದಿಯಲ್ಲಿ 3.5 ಕೆ.ಜಿ ಸಾರಜನಕ, 1.3 ರಂಜಕ ಮತ್ತು 6.5 ಕೆ.ಜಿ ಪೋಟ್ಯಾಷ್ ಇರುತ್ತದೆ.
ಈ ರವದಿಯಿಂದ ಮಣ್ಣಿನ ತೇವಾಂಶ ಆವಿಯಾಗುದನ್ನು ತಡೆಗಟ್ಟಬಹುದು. ಮಣ್ಣಿನಲ್ಲಿ ಇರುವ ಸೂಕ್ಷ್ಮ ಜೀವಿಗಳ ಚಟುವಟಿಕೆ ಹೆಚ್ಚಾಗಿ ನೀರು ಇಂಗುವಿಕೆ, ಇಂಗಾಲದ ಪ್ರಮಾಣ ಮತ್ತು ಇಳುವರಿ ಹೆಚ್ಚಾಗಿ ಉತ್ಪಾದನಾ ವೆಚ್ಚ ಕಡಿಮೆಯಾಗುವುದು. ಆ ರವದಿಯನ್ನು ಬಳಸುವ ಕೆಲ ಪದ್ಧತಿಗಳು ಇಲ್ಲಿವೆ.
ಕುಣಿಪದ್ದತಿ:
ತಲಾ ಒಂದು ಮೀಟರ್ ಉದ್ದ, ಅಗಲ ಹಾಗು ಆಳದ ಸಿಮೆಂಟಿನ ಕುಣಿಗಳನ್ನು ಮಾಡಬೇಕು. ಕೆಳಭಾಗದಲ್ಲಿ 15 ಸೆ.ಮೀ. ದಪ್ಪ ತುಂಡು ಮಾಡಿದ ರವದಿ ಹಾಕಿ ಅದರ ಮೇಲೆ ಸೆಗಣಿಯ ನೀರು ಸಿಂಪಡಿಸಬೇಕು. (5 ಕೆ.ಜಿ. ಸೆಗಣಿ /25 ಲೀ. ನೀರು) ಒಂದು ಕೆ.ಜಿ ರವದಿ ಕೊಳೆಯುವ ಕಾಂಪೋಸ್ಟ್ ಕಲ್ಚರ್ (ಪ್ಲೋರೋಟಸ್, ಟ್ರೈಕೋಡರ್ಮಾವಿರಿಡೆ, ಫೆನೆರೊಕಿಟೆ, ಅಸರಿಜಿಲ್ಲಸ್) ಸಿಂಪಡಿಸಬೇಕು. ನಂತರ 8 ಕೆಜಿ ಯೂರಿಯಾ/ 10 ಕೆಜಿ ಸೂಪರ್ ಫಾಸ್ಪೇಟ್ ಪ್ರತಿ ಟನ್ ರವದಿಗೆ ಹಾಕಿ ಮಣ್ಣಿನ ಹೊದಿಕೆ ಮಾಡಬೇಕು. ಹೀಗೆ 3 ರಿಂದ 4 ರವದಿ ಹೊದಿಕೆ ಹಾಕಿ ಕುಣಿ ತುಂಬಿ ಪ್ರತಿ ವಾರಕ್ಕೊಮ್ಮೆ ನೀರು ಸಿಂಪಡಿಸಬೇಕು. 3 ರಿಂದ 4 ತಿಂಗಳಿಗೆ ಉತ್ತಮ ಗೊಬ್ಬರ ದೊರಕುವುದು.

ಪ್ರೆಸಮೆಡ್ ಬಳಸಿ ಗೊಬ್ಬರ ತಯಾರಿಕೆ:
10 ಮೀ. ಉದ್ದ 5 ಮೀ. ಅಗಲ 1 ಮೀ. ಆಳವಾದ ಕುಣಿ ತೆಗೆಯಬೇಕು. ಅದಕ್ಕೆ 500 ಕೆ.ಜಿ. ರವದಿ ಹಾಕಿ ನಂತರ 10 ಕಿಲೋ ಸೂಪರ್ ಫಾಸ್ಪೇಟ್, 10 ಕೆಜಿ ಜಿಪ್ಸಂ ಮತ್ತು 5 ಕೆಜಿ ಯೂರಿಯಾ, 25 ಕೆಜಿ ಸಗಣಿ ನೀರು (5 ಕೆಜಿ ಸಗಣಗೆ 100 ಲೀ. ನೀರು) ಸಿಂಪಡಿಸಬೇಕು. ಬಳಿಕ 500 ಕೆಜಿ ಪ್ರೆಸಮೆಡ್ ಗೊಬ್ಬರ ಹಾಕಬೇಕು.ಈ ರೀತಿ ಒಂದರ ಮೇಲೆ ಒಂದು ಹಾಕಿ ಕುಣಿ ತುಂಬಿದ ಮೇಲ್ಬಾಗವನ್ನು ಮಣ್ಣಿನಿಂದ ಅಥವಾ ಪ್ರೆಸಮೆಡ್‍ದಿಂದ ಮುಚ್ಚಬೇಕು. ವಾರದಲ್ಲಿ ಒಂದು ಬಾರಿ ನೀರನ್ನು ಸಿಂಪಡಿಸಿ ಮೂರು ತಿಂಗಳಿಗೊಮ್ಮೆ ತಿರುವಿ ಹಾಕಿದಾಗ 6 ತಿಂಗಳಿಗೆ ಉತ್ತಮ ಗೊಬ್ಬರ ಸಿಗುವುದು.
ಏರು ಪದ್ದತಿಯಲ್ಲಿ ರವದಿ ಕಾಂಪೋಸ್ಟ್:
ಕುಳೆ ಕಬ್ಬಿನ ಹೊಲದ ಪಕ್ಕದಲ್ಲಿ 3 ಮೀ. ಉದ್ದ 2 ಮೀ. ಅಗಲ ಸ್ಥಳವನ್ನು ಹುಡುಕಿ ಭೂಮಿಯ ಮೇಲೆ 15 ಸೆ.ಮೀ ಎತ್ತರ ಬರುವಂತೆ ತುಂಡು ಮಾಡಿದ ರವದಿಯನ್ನು ಹಾಕಿ 25 ಕೆಜಿ ಸಗಣಿ ನೀರು ಸಿಂಪಡಿಸಬೇಕು. ಬಳಿಕ ಒಂದು ಕೆಜಿ ಕಾಂಪೋಸ್ಟ ಕಲ್ಚರ್ ಪ್ರತಿ ಟನ್ ರವದಿಗೆ ಸಿಂಪಡಿಸಬೇಕು. ಇದರ ಮೇಲೆ 8 ಕೆಜಿ ಯೂರಿಯಾ, 10 ಕೆಜಿ ಸುಫರ್ ಫಾಸ್ಪೇಟ್ ಪ್ರತಿ ಟನ್ ರವದಿಗೆ ಹಾಕಬೇಕು. ಈ ರೀತಿಯ ರವದಿ ಗೊಬ್ಬರದ ಮಿಶ್ರಣ ಮತ್ತು ಸಗಣಿ ನೀರು ಇವುಗಳ ಹೊದಿಕೆಯನ್ನು ಒಂದರ ಮೇಲೆ ಒಂದು ಮಾಡಿ 2 ಮೀ ಎತ್ತರ ಬರುವಂತೆ ಹೊಂದಿಸಬೇಕು. ಮೇಲ್ಪಾಗವನ್ನು ಪ್ರೆಸಮೆಡ್ ದಿಂದ ಮುಚ್ಚಿ ವಾರಕ್ಕೆ ಒಂದು ಬಾರಿ ನೀರು ಸಿಂಪಡಿಸಬೇಕು. ಮೂರು ತಿಂಗಳಿಗೆ ಉತ್ತಮ ಗೊಬ್ಬರ ಸಿದ್ಧ.
ಕುಳೆ ಪದ್ದತಿಯಲ್ಲಿ ರವದಿಯ ನೇರ ಬಳಕೆ:
ಕುಳೆ ಕಬ್ಬಿನಲ್ಲಿ ಬಿದ್ದ ರವದಿಯನ್ನು ಸಾಲು ಬಿಟ್ಟು ಸಾಲಿಗೆ ಹಾಕಿ ಹೆಚ್ಚಾದ ರವದಿಯನ್ನು ಕುಣಿ ಪದ್ದತಿಯಲ್ಲಿ ಕಾಂಪೋಸ್ಟ್ ಮಾಡಲು ಉಪಯೋಗಿಸಬೇಕು. ಸಾಲಿನಲ್ಲಿ ಹಾಕಿದ ರವದಿಯ ಮೇಲೆ 1 ಎಕರೆಗೆ 50 ಕೆಜಿ ಯೂರಿಯಾ ಮತ್ತು 50 ಕೆಜಿ ಸುಪರ್ ಪಾಸ್ಪೇಟ್ ಹಾಕಬೇಕು. ಎಕರೆಗೆ 5 ಕೆಜಿ ಟ್ರೈಕೋರ್ಮಾ ವಿರಡೆ ರವದಿ ಕೊಳೆಯಿಸುವ ಸೂಕ್ಷ್ಮಾಣು ಜೀವಿಯನ್ನು (ತೋಟಗಾರಿಕೆ ಇಲಾಖೆಯಲ್ಲಿ ಸಿಗುತ್ತದೆ) ಸೆಗಣಿ ನಿರನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು. ರವದಿ ಹಾಕದೆ ಇರುವ ಸಾಲುಗಳಲ್ಲಿ ಕುಳೆಯ ನಿರ್ವಹಣೆ ಮಾಡಬೇಕು.
ನಾಟಿ ಮುನ್ನ ಸಾಲುಗಲ್ಲಿ ರವದಿ ಕೊಳೆಸುವುದು:
ಮೇ ಅಥವಾ ಜೂನ್ ತಿಂಗಳಲ್ಲಿ 4 ಫೂಟ್ನ ಸಾಲು ಮತ್ತು ಬದುಗಳನ್ನು ಮಾಡಬೇಕು. ಸಾಲುಗಳಲ್ಲಿ ರವದಿ ತುಂಬಿ ಅದರ ಮೇಲೆ ಪ್ರತಿ ಟನ್ ರವದಿಗೆ 1 ಕೆಜಿ ರವದಿ ಕೊಳೆಯುವ ಸೂಕ್ಷ್ಮಾಣು ಜೀವಿಯನ್ನು ಸಗಣಿ ನೀರಿನಲ್ಲಿ ಮಿಶ್ರಣ ಮಾಡಿ ರವದಿಯ ಮೇಲೆ ಸಿಂಪಡಿಸಬೇಕು. 8 ದಿನಗಳ ನಂತರ 1 ಎಕರೆಗೆ 50 ಕೆಜಿ ಯೂರಿಯಾ ಮತ್ತು 200 ಕಿಲೋ ಸುಪರ್ ಪಾಸ್ಪೇಟ್ ಗೊಬ್ಬರವನ್ನು ರವದಿಗೆ ಹಾಕಬೇಕು. ಸಾಧ್ಯವಾದಲ್ಲಿ 15 ದಿನಕ್ಕೊಮ್ಮೆ ಸಾಲುಗಳಲ್ಲಿ ನೀರು ಹಾಯಿಸಬೇಕು.ಎರಡು ತಿಂಗಳಾದ ನಂತರ ಬದುಗಳನ್ನು ಒಡೆದಾಗ ಮಣ್ಣು ಸಾಲುಗಳಲ್ಲಿ ಇರುವ ರವದಿಯ ಮೇಲೆ ಮುಚ್ಚುತ್ತದೆ. ಸಪ್ಟೆಂಬರ್ ದಲ್ಲಿ ಸಾಲುಗಳಲ್ಲಿ ಕಬ್ಬು ನಾಟಿ ಮಾಡುವುದು ಒಳಿತು.

ವಿನೋದ ರಾ. ಪಾಟೀಲ್,
ಚಿಕ್ಕಬಾಗೇವಾಡಿ, ಬೆಳಗಾವಿ.

Trackbacks/Pingbacks