ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣದ ಬಳಿಕ ಹರೋ ಸಾಗರ ಪ್ರದೇಶದ ಸುತ್ತಮುತ್ತಲಿನ ಜನ ಜಮೀನು, ತೋಟಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಕಾರಣ ಆ ಒಂದು ವಿಷಕಾರಿ ಹುಳು. ಆ ಹುಳವನ್ನು ಕಾಡು ಜೀರಿಗೆ ಹೆಜ್ಜೇನು ಅಥವಾ ಕಾಡು ಜೇನು ಎಂದು ಕರೆಯುತ್ತಾರೆ.

ಈ ಮೇಲೆ ಕಾಣೋ ಫೋಟೋವನ್ನು ಒಮ್ಮೆ ನೋಡಿ, ಅಲ್ಲಿ ಕಾಣುವುದು ದೂರದಿಂದ ನೋಡಿದ್ರೆ ಅದು ಗುಬ್ಬಿಗೂಡು ಇರಬೇಕು ಅನಿಸುತ್ತೆ. ತುಂಬಾ ಸೂಕ್ಷ್ಮವಾಗಿ ಗಮನಿಸಿದ್ರೆ ಮರಕ್ಕೆ ಏನನ್ನೊ ನೇತು ಹಾಕಿದಂತೆ ಭಾಸವಾಗುತ್ತೆ. ಆದ್ರೆ ಅಸಲಿಗೆ ಅದು ಯಾವುದೂ ಅಲ್ಲ. ಅದೊಂದು ಕಾಡು ಜೀರಿಗೆ ಹೆಜ್ಜೇನು ಅಥವಾ ಕಾಡು ಜೇನು ಹುಳುಗಳ ವಾಸಸ್ಥಳ.

ಪ್ರಾಣ ಕಸಿದ ಕಾಡು ಜೀರಿಗೆ ಹೆಜ್ಜೇನು

ಹರೋಸಾಗರದ ಹಾಲಸ್ವಾಮಿ ಎಂಬಾತ ಮೊನ್ನೆ ಬೈಕ್ ನಲ್ಲಿ ಹೋಗುತ್ತಿರುವಾಗ ಇದೇ ಗೂಡಿನಲ್ಲಿರುವ ಹುಳು ಕಡಿದು, ಆತ 4 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಆದ್ರೆ ಚಿಕಿತ್ಸೆ ಬಳಿಕವೂ ಕಣ್ಣಿನ ಕೆಳಭಾಗದಲ್ಲಿ ಕಪ್ಪುಗಟ್ಟಿದೆ.

ಇನ್ನು ಇದೇ ಕಾಡು ಜೀರಿಗೆ ಹೆಜ್ಜೇನು ಕಡಿದ ಪರಿಣಾಮ ಕಳೆದೆರಡು ತಿಂಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ವಿಂಡ್ ಫ್ಯಾನ್ ಕಂಪನಿ ಉದ್ಯೋಗಿಯಾಗಿದ್ದ ಯಲೋದಹಳ್ಳಿ ಗ್ರಾಮದ 54 ವರ್ಷದ ‌‌ಶಿವಕುಮಾರ ಹಾಗೂ ಕಂಸಾಗರದ 24 ವರ್ಷದ ಮಲ್ಲೇಶ್ ಅವರು ರಸ್ತೆಯಲ್ಲಿ ಹೋಗುವಾಗ ಕಾಡು ಜೇನು ಹುಳುಗಳ ದಾಳಿ ಮಾಡಿದ ಹಿನ್ನೆಲೆ ಇಬ್ಬರೂ ಸಾವನ್ನಪ್ಪಿದ್ದಾರೆ.

ಇದು ಹೆಚ್ಚಾಗಿ ಅರಣ್ಯದಲ್ಲಿ ಇರುವ ಹುಳು. ಇತ್ತೀಚಿಗೆ ಅಡಿಕೆ ತೋಟ, ಗ್ರಾಮಗಳ ಸುತ್ತಲಿನ ದೊಡ್ಡ ಮರಗಳಲ್ಲಿ ಆಶ್ರಯ ಪಡೆದುಕೊಂಡಿವೆ. ಈ ಹುಳುಗಳನ್ನು ನೋಡಿದ್ರೆ ಸಾಕು ಜನ ತಲೆ ಮೇಲೆ ಟವಲ್ ಹಾಕಿಕೊಂಡು ಭಯದಿಂದ ಹೋಗುತ್ತಾರೆ. ಈ ಹಿಂದಿನಿಂದಲೂ ಕಾಡು ಜೀರಿಗೆ ಹೆಜ್ಜೇನಿನ ಬಗ್ಗೆ ಜನರಿಗೆ ಗೊತ್ತಿತ್ತು. ಆದ್ರೆ ಇದು ಕಡಿದ್ರೆ ಸಾಯ್ತಾರೆ ಅಂತ ಮಾತ್ರ ಬಹುತೇಕರಿಗೆ ಗೊತ್ತಿಲ್ಲ.

ಈ ಹುಳುಗಳು ಕಚ್ಚಿದ್ರೆ ಸಾವು ಖಚಿತ

ಈ ಹುಳುವಿನ ಇನ್ನೊಂದು ಡೇಂಜರ್ ಗುಣ ಅಂದ್ರೆ ಒಂದು ಹುಳು ಕಚ್ಚಿದ್ರು ಸಾಕು ಮೈ ಬಾವು, ಉರಿ ಹಾಗೂ ವಿಪರೀತ ಜ್ವರ ಬರುವುದು ಗ್ಯಾರಂಟಿ. ಆದ್ರೆ 7 ರಿಂದ 8 ಕಾಡು ಜೀರಿಗೆ ಹುಳುಗಳು ಕಚ್ಚಿದ್ರೆ ಸಾವು ಖಚಿತವಂತೆ. ಯಾವುದೇ ರೀತಿಯ ಚಿಕಿತ್ಸೆ ನೀಡಿದ್ರೂ ಬದುಕಲು ಸಾಧ್ಯವಿಲ್ಲ, ಅಂತಹ ಡೇಂಜರ್ ಹುಳು ಇದಾಗಿದೆ.

ಈ ಹುಳದ ಕುರಿತು ಅರಣ್ಯ ಇಲಾಖೆ ಬಳಿಯೂ ಹೆಚ್ಚಿನ ಮಾಹಿತಿ ಇಲ್ಲವಂತೆ. ಆದ್ರೆ ಯಲೋದಹಳ್ಳಿ, ದಾಗಿನಕಟ್ಟೆ, ಬಸವಾಪಟ್ಟ, ಕಂಸಾಗರ, ಸಂಗಾಹಳ್ಳಿ, ಬೆಳಲಗೆರೆ ಹೀಗೆ ಹತ್ತಾರು ಗ್ರಾಮಗಳಲ್ಲಿ ಕಾಡು ಜೀರಿಗೆ ಕಾಟ ಹೆಚ್ಚಾಗಿದ್ದು, ಜನರಲ್ಲಿ ಮಾತ್ರ ಭೀತಿ ಹುಟ್ಟಿಸಿದೆ. ಮೇಲಾಗಿ ಅಮಾಯಕ ಜೀವಗಳು ಬಲಿಯಾಗುತ್ತಿರುವುದು ಜನರು, ಜಮೀನು ಹಾಗೂ ತೋಟಗಳಿಗೆ ಹೋಗುವುದೂ ಕಠಿಣವಾಗಿದೆ. ಈ ಕುರಿತು ಅರಣ್ಯ ಹಾಗೂ ಕಂದಾಯ ಇಲಾಖೆಗಳು ಜನ ಜಾಗೃತಿ ಮೂಡಿಸಬೇಕಿದೆ.