ಹುಬ್ಬಳ್ಳಿ: ನಗರದ ಬೈರಿದೇವರಕೊಪ್ಪದ ಬಳಿಯಿರುವ ಹಜರತ್ ಸೈಯದ್ ಮಹ್ಮದ್ ಶಾ ಖಾದ್ರಿ ದರ್ಗಾ ತೆರವು ಕಾರ್ಯದ ಹಿಂದೆ ಎರಡು ಧರ್ಮಗಳ ಮಧ್ಯೆ ಜಗಳ ಹಚ್ಚುವ ಹುನ್ನಾರ ಅಡಗಿದೆ ಎಂದು‌ ಶಾಸಕ ಪ್ರಸಾದ ಅಬ್ಬಯ್ಯ ಆರೋಪಿಸಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸ್ಥಳದಲ್ಲಿರುವ ದರ್ಗಾದಿಂದ ವಾಹನಗಳ ಸಂಚಾರಕ್ಕಾಗಲಿ, ಸಾರ್ವಜನಿಕರ ಓಡಾಟಕ್ಕಾಗಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪ್ರೇರಿತವಾಗಿ ತೆರವು ಕಾರ್ಯ ನಡೆಸಲಾಗುತ್ತಿದೆ. ಉಣಕಲ್ ಸಿದ್ದಪ್ಪಜ್ಜನ ಗುಡಿ ಎದುರು ಪ್ಲೈಓವರ್ ನಿರ್ಮಿಸಿದಂತೆ, ಇಲ್ಲಿಯೂ ನಿರ್ಮಿಸಿ ದರ್ಗಾ ಉಳಿಸಬಹುದಿತ್ತು. ಆದರೆ ಅಂತಹ ಕೆಲಸವಾಗಿಲ್ಲ. ಈ ವಿಷಯದ ಕುರಿತು ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ ಎಂದರು.

ಮಸೀದಿ, ಗುಡಿಗಳನ್ನು ತೆರವು ಮಾಡಿದ್ದರೆ ನಮ್ಮಿಂದ ಯಾವ ತಕರಾರು ಇರಲಿಲ್ಲ. ಅಲ್ಲಿರುವುದು ದರ್ಗಾ, ಧರ್ಮದ ಗುರುವನ್ನು ಜೀವಂತ ಸಮಾಧಿ ಮಾಡಿರುವ ಸ್ಥಳ. ಹಾಗೆಲ್ಲ ತೆರವು ಮಾಡಬಾರದು. ಇದು ರಾಜಕೀಯ ಹುನ್ನಾರ ಎನ್ನುವುದು ಜನರಿಗೆ ತಿಳಿದಿದೆ. ಸಂಬಂಧಿಸಿದ ವ್ಯಕ್ತಿಗಳು‌ ಮುಂದಿನ ದಿನಗಳಲ್ಲಿ ಅದರ ಫಲ ಅನುಭವಿಸುತ್ತಾರೆ ಎಂದು ಕಿಡಿಕಾರಿದರು.