Categories: Travel & Lifestyle

ವಯಸ್ಸಿದ್ದಾಗಲೇ ಚಪ್ಪರಸಿ ಕಾಡಿನ ಕವಳೆ ಹಣ್ಣು

ನೇರಳೆ ಹಣ್ಣು ಯಾರಿಗೆ ಪರಿಚಯ ಇಲ್ಲ ಹೇಳಿ. ಕಾಡಿನ ಈ ಹಣ್ಣಿನ ಮಹತ್ವವನ್ನು ಈಗ ಎಲ್ಲರೂ ಅರಿತಿದ್ದಾರೆ. ಯಾಕೆಂದರೆ ಅದು ಸಕ್ಕರೆ ಕಾಯಿಲೆಗೆ ಒಳ್ಳೆಯ ಔಷಧಿ ಎಂದು. ಹಾಗಾಗಿ ವಯಸ್ಸಾಗುತ್ತಲೇ ನೇರಳೆ ಹಣ್ಣು ಹುಡುಕಿ ಹೋಗುತ್ತಾರೆ.

ಆದರೆ, ವಯಸ್ಸಿದ್ದಾಗಲೇ ತಿನ್ನಬಹುದಾದ ನೇರಳೆಗಿಂತ ರುಚಿಯಾದ, ಮಕ್ಕಳ ಆರೋಗ್ಯವನ್ನು ಸದೃಢ ಮಾಡಬಲ್ಲ ಕವಳಿ ಹಣ್ಣಿನ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಕಾಡಿನಲ್ಲಿ ಮುಳ್ಳು ಗಿಡದಲ್ಲಿ ಬೆಳೆಯುವ ಈ ಹಣ್ಣು ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಟಾನಿಕ್ ರೀತಿಯಲ್ಲಿ ಕೆಲಸ ಮಾಡುವ ಅತ್ಯಂತ ಸ್ವಾದಿಷ್ಟ ಹಣ್ಣು.

ಹಾಗಾಗಿ ಕವಳಿ ಹಣ್ಣು ಹೆಸರು ಕೇಳಿದರೇನೆ ಬಾಯಲ್ಲಿ ನೀರೂರುತ್ತದೆ. ಹಳ್ಳಿಯಲ್ಲಿ ಬೆಳೆದ ಅದೆಷ್ಟೋ ಜನರ ಬಾಲ್ಯದ ಮಧುರ ನೆನಪುಗಳಲ್ಲಿ ಕವಳಿ ಹಣ್ಣು ಸಹ ಒಂದಾಗಿದೆ. ಕಪ್ಪು ದ್ರಾಕ್ಷಿಯಂತೆ ಕಾಣುವ ಹಣ್ಣು ಹುಳಿ, ಸಿಹಿಯಿಂದ ಬಾಯಿ ಚಪ್ಪರಿಸುವಂತೆ ಮಾಡುತ್ತದೆ. ಇದರಿಂದ ತಯಾರಿಸುವ ಉಪ್ಪಿನ ಕಾಯಿ ರುಚಿ ತಿಂದವರಿಗೇ ಗೊತ್ತು.

ಬಾಲ್ಯದಲ್ಲಿ ಸ್ನೇಹಿತರೊಂದಿಗೆ ಕವಳಿ ಹಣ್ಣುಗಳನ್ನು ಕೀಳಲು ತಂಡ ಕಟ್ಟಿಕೊಂಡು ಹೋಗುವುದೇ ದೊಡ್ಡ ಆನಂದ. ಅಜ್ಜಿಯಂದಿರು ಮೊಮ್ಮಕ್ಕಳಿಗೆ ಅಂಗಡಿಯೊಳಗಿನ ತಿಂಡಿ ತರದಿದ್ದರೂ ಪರವಾಗಿಲ್ಲ. ಕವಳಿ ಹಣ್ಣು ತಂದರೆ ಅದರಿಂದ ಸಿಗುವ ಖುಷಿ ಬಣ್ಣಿಸಲು ಸಾಧ್ಯವೇ ಇಲ್ಲ.

ಈಗಂತೂ ಕವಳಿ ಹಣ್ಣಿನ ಬಗ್ಗೆ ಕೇಳಿದಾಗಲೆಲ್ಲ ಬಾಲ್ಯವೆಲ್ಲ ನೆನಪಾಗಿ ಎದೆಯೊಳಗೆ  ನೆನಪುಗಳನ್ನು ಕಿವುಚಿದಂತಾಗುತ್ತದೆ. ಹಳೆ ಸ್ನೇಹಿತರು, ಮುಳ್ಳಿನ ಕಂಟಿಯೊಳಗೆ ನುಗ್ಗಿ ಕವಳಿ ಹಣ್ಣು ಕೀಳುವುದು. ಬಾಯಲ್ಲಿಟ್ಟು ಚಪ್ಪರಿಸುವುದು… ಆಹಾ ಆ ಮಧುರ ಕ್ಷಣಗಳನ್ನು ನೆನೆಯುವುದೇ ರೋಚಕ.

ಪ್ಯಾಕೆಟ್ ಸಂಸ್ಕೃತಿಯಲ್ಲಿ ಎಲ್ಲವನ್ನೂ ತಿನ್ನುತ್ತಿರುವ ಪಟ್ಟಣ, ನಗರ ಪ್ರದೇಶದ ಮಕ್ಕಳಿಗೆ ಹಳ್ಳಿಗಾಡಿನ ನೈಸರ್ಗಿಕವಾಗಿ ದೊರೆಯುವ ಹಣ್ಣುಗಳ ಪರಿಚಯವೇ ಇರುವುದಿಲ್ಲ. ಪಟ್ಟಣದಿಂದ ಸ್ವಲ್ಪ ದೂರ ನಾವು ಕಾಡಿರುವ ಪ್ರದೇಶವನ್ನು ಹೊಕ್ಕರೆ ಎಷ್ಟೊ ಸಿಹಿ, ಒಗರು, ಹುಳಿ, ಸಪ್ಪೆಯಾದ ಹಣ್ಣುಗಳು, ಕಾಯಿಗಳು ಸಿಗುತ್ತವೆ.

ಎಳನೀರ ಬಗ್ಗೆ ನಿಮಗೆಷ್ಟು ಗೊತ್ತು; ತೆಂಗು ಕೃಷಿಯಲ್ಲಿದೆ ಆದಾಯದ ಗುಟ್ಟು

ವಿಡಿಯೊ ವೀಕ್ಷಿಸಿ

ಅವುಗಳಲ್ಲಿ ಎಷ್ಟೊ ಕಾಯಿ, ಹಣ್ಣುಗಳು ಆರೋಗ್ಯಕ್ಕೂ ಹಿತಕರವೆಂಬುದು ಗೊತ್ತೇ ಇರುವುದಿಲ್ಲ. ಹಳ್ಳಿಗಾಡಿನ ಜನರನ್ನು ಕೇಳಿದರೆ ಥಟ್ಟನೆ ಹೇಳುತ್ತಾರೆ. ಆದರೆ ಕಾಡಿಗೆ ಹೋಗಿ, ಕಾಯಿ, ಹಣ್ಣುಗಳನ್ನು ಹುಡುಕುತ್ತ ಹೋಗಲು ಪುರುಸೊತ್ತಾದರೂ ಎಲ್ಲಿದೆ.

ನೇಪಾಳ, ಅಪಘಾನಿಸ್ತಾನ, ಭಾರತದ ಗುಜರಾತ, ರಾಜಸ್ಥಾನ  ಹಾಗೂ ಪಶ್ಚಿಮಘಟ್ಟಗಳಲ್ಲಿ ಇದು ಹೆಚ್ಚಾಗಿ ಸಿಗುತ್ತದೆ. ಕರ್ನಾಟಕದ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಭಾಗದ ಅರಣ್ಯ ಪ್ರದೇಶ, ಹುಬ್ಬಳ್ಳಿ-ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ, ಮಂಗಳೂರು ಹೀಗೆ ಮಲೆನಾಡು, ಅರೆ ಬಯಲುಸೀಮೆ ಗುಡ್ಡಗಳಲ್ಲಿ ಈ ಹಣ್ಣುಗಳು ಸಿಗುತ್ತವೆ. ದ್ರಾಕ್ಷಿ ಗೊಂಚಲು ರೀತಿ ದಪ್ಪವಾಗಿ ಬೆಳೆಯುತ್ತದೆ.

ಜನವರಿ, ಫೆಬ್ರುವರಿಯಲ್ಲಿ ಕವಳಿ ಗಿಡಗಳು ಹೂ ಬಿಡುತ್ತವೆ. ಮಾರ್ಚ್, ಏಪ್ರಿಲ್ ವೇಳೆಗೆ ಹಣ್ಣಾಗಲು ಶುರುವಾಗುತ್ತವೆ. ಆಗ ಶಾಲೆಗಳಿಗೂ ರಜೆ ಇರುತ್ತವೆ. ಇಂಥ ಸಂದರ್ಭದಲ್ಲಿ ತಪ್ಪದೆ ಹಳ್ಳಿ ಮನೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ. ಆಯಾ ಹವಾಮಾನಕ್ಕೆ ಅನುಗುಣವಾಗಿ ಬೆಳೆಯುವ ಹಣ್ಣುಗಳನ್ನು ತಿನ್ನುವುದುರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅದರಲ್ಲೂ ಕವಳಿ ಹಣ್ಣಿನ ಸೇವನೆಯಿಂದ ಯಥೇಚ್ಛ ಪ್ರೋಟೀನ್ ಅಂಶಗಳು ದೊರೆಯುತ್ತವೆ.

ಒಮ್ಮೆ ಕುರುಚಲು ಕಾಡನ್ನು ಹೊಕ್ಕು ನೋಡಿ, ಅಲ್ಲಿನ ಪ್ರಪಂಚವೇ ಬೇರೆ ಎನಿಸಿಬಿಡುತ್ತದೆ. ಈಗಂತೂ ಕವಳಿ ಹಣ್ಣುಗಳು ಮಾರಾಟ ಮಾಡುವಷ್ಟು ಬೇಡಿಕೆ ಗಳಿಸಿದೆ. ಸಣ್ಣ ನಗರಗಳ ಬಸ್ ನಿಲ್ದಾಣಗಳಲ್ಲಿ ಹಳ್ಳಿ ಮಹಿಳೆಯರು ಈ ಹಣ್ಣುಗಳನ್ನು ಮಾರಾಟ ಮಾಡುತ್ತಾರೆ. ಕೆಲವರು ಆ ಹಣ್ಣುಗಳಿಗಾಗಿಯೇ ಹಿತ್ತಲಲ್ಲಿ ಬೇಲಿ ಬದಿ ಕವಳಿ ಗಿಡ ಬೆಳೆಸುವವರೂ ಇದ್ದಾರೆ. ಅಷ್ಟರ ಮಟ್ಟಿಗೆ ಅದರ ಮೌಲ್ಯ ಅರಿತವರಿದ್ದಾರೆ.

ಕವಳಿಕಾಯಿ ಪಿತ್ತ ಹೊಡೆದೋಡಿಸಲು ಸಿದ್ಧೌಷಧವಿದ್ದಂತೆ. ವಿಶೇಷವೆಂದರೆ ಕರಡಿಗಳಿಗೆ ಈ ಹಣ್ಣುಗಳು ಅಚ್ಚುಮೆಚ್ಚು. ಒಣಭೂಮಿ, ಬೆಟ್ಟಗಳಲ್ಲಿ ಹೆಚ್ಚಿನ ನೀರಿನ ಅಗತ್ಯವಿಲ್ಲದೆ ಬೆಳೆಯುವ ಈ ಗಿಡ, ನೆಲದಿಂದ ಹೆಚ್ಚೇನೂ ಎತ್ತರವಿಲ್ಲದ, ಮುಳ್ಳನ್ನು ಹೊಂದಿರುವ ಚಿಕ್ಕ ಗಿಡ.

ಕವಳೆ ಗಿಡ

ಕವಳಿಗಿಡದ ವೈಜ್ಞಾನಿಕ ಹೆಸರು ಕ್ಯಾರಿಸ್ಸಾ ಕರಂಡಾಸ್. ಬಿಸಿಲು ಪ್ರದೇಶಗಳಲ್ಲೂ ಸುಲಭವಾಗಿ ಬೆಳೆಯುತ್ತದೆ. ಯಾವುದೇ ಆರೈಕೆಯಿಲ್ಲದೆ ಗುಡ್ಡಗಳ ಮೇಲೆ ಬೆಳೆಯುವ ಈ ಗಿಡವನ್ನು ರೈತರು ಬೇಲಿಗಾಗಿಯೂ ಉಪಯೋಗಿಸುತ್ತಾರೆ ಬೀಜದಿಂದ ಹೊಸ ಗಿಡವನ್ನು ಪಡೆಯಬಹುದು.

ಗಿಡದಲ್ಲಿ ಸುಮಾರು 6-8 ಕಾಯಿಗಳ ಗೊಂಚಲು ಅಲ್ಲಲ್ಲಿ ಬೆಳೆದಿರುತ್ತದೆ. ಚಿಕ್ಕದಿರುವಾಗ ಹಸಿರು ಬಣ್ಣವಿರುವ ಕವಳೆ ಕಾಯಿಗಳು ಮುಂದೆ ಹಸಿರು ಮಿಶ್ರಿತ ಗುಲಾಬಿ-ಕೆಂಪು ಬಣ್ಣವನ್ನು ಹೊಂದುತ್ತವೆ. ಪೂರ್ತಿ ಮಾಗುವ ಮೊದಲು ಕಂದು-ಕೆಂಪು ಬಣ್ಣಕ್ಕೆ ತಿರುಗಿ ಪೂರ್ತಿ ಮಾಗಿದಾಗ ಕಪ್ಪಾಗುತ್ತದೆ.

ಕವಳೆಕಾಯಿಯನ್ನು ಕಿತ್ತಾಗ ಅದರ ತೊಟ್ಟಿನಿಂದ ಅಂಟಂಟಾಗಿರುವ ಬಿಳಿಯಾದ ಹಾಲು ಒಸರುತ್ತದೆ. ಕವಳೆಹಣ್ಣಿನೊಳಗಡೆ ಅರ್ಧ ಚಂದ್ರಾಕೃತಿಯ, ಒಂದರ ಪಕ್ಕ ಒಂದು ಒತ್ತಾಗಿರುವ ತೆಳ್ಳನೆಯ ಚಿಕ್ಕ ಬೀಜಗಳಿರುತ್ತವೆ.
ಕವಳೆಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಇದು ಆರೋಗ್ಯಕ್ಕೂ ಒಳ್ಳೆಯದು. ಹಣ್ಣಿನಿಂದ ಜಾಮ್, ಜೆಲ್ಲಿಯಲ್ಲೂ ಬಳಸಲಾಗುತ್ತದೆ.

admin

View Comments

Recent Posts

ರೈತನ ಬಾಳಲ್ಲಿ ಜೀವಜಲ ತುಂಬಿದ ರಿಂಗ್ ಮಾಸ್ಟರ್ ನರೇಗಾ

ಉತ್ತರ ಕನ್ನಡಅಂಗೈ ಅಗಲದ ಭೂಮಿಯಲ್ಲಿ ಬೆರಳ ಗಾತ್ರ ನೀರುಕ್ಕುವ ಕೊಳವೆ ಬಾವಿ, ಅದನ್ನೇ ನಂಬಿ ನೆಟ್ಟ ಅಡಿಕೆ ಸಸಿ, ಸತತ…

3 months ago

PMAY: ಪ್ರಧಾನ ಮಂತ್ರಿ ಆವಾಸ ಯೋಜನೆಗೆ ಅರ್ಜಿ

PMAYG ಪ್ರಧಾನ ಮಂತ್ರಿ ಆವಾಸ ಯೋಜನೆ. ಸರಕಾರಿ ಯೋಜನೆಯಡಿ ಮನೆ ಪಡೆಯಬೇಕು. ಸ್ವಂತ ಮನೆ House ಹೊಂದಬೇಕು ಎನ್ನುವವರಿಗೆ ಪ್ರಧಾನಿ…

1 year ago

ಬ್ಯೂಟಿ ಪಾರ್ಲರ್ ನಿರ್ವಹಣೆ ಉಚಿತ ತರಬೇತಿ

ಗ್ರಾಮೀಣಾಭಿವೃದ್ಧಿ ಹಾಗೂ ಸ್ವ ಉದ್ಯೋಗ ತರಬೇತಿ ಸಂಸ್ಥೆ(ರುಡ್ ಸೆಟ್ ಸಂಸ್ಥೆ) ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾವಂತ…

2 years ago

ಕತ್ತೆ ಸಾಕಾಣಿಕೆಯಲ್ಲಿ ದುಪ್ಪಟ್ಟು ಆದಾಯ

ಕತ್ತೆಗೂ ಈಗ ಬೇಡಿಕೆ ಬಂದಿದೆ. ಕತ್ತೆ ಎಂದು ಬೈಯುವಾಗ ಒಮ್ಮೆ ಅಲೋಚಿಸಬೇಕಿದೆ. ಕೃಷಿಯಲ್ಲಿ ನಡೆಯುತ್ತಿರುವ ಪ್ರಯೋಗಗಳು ಹೊಸ ಅವಕಾಶಗಳನ್ನು ಸೃಷ್ಟಿ…

2 years ago

ಉದ್ಯಮ ಶುರುಮಾಡಲು ಹೆಣ್ಮಕ್ಕಳಿಗೆ ಸಿಗುತ್ತೆ ₹ 3 ಲಕ್ಷ ಬಡ್ಡಿ ರಹಿತ ಸಾಲ: ಇಂದೆ ಅರ್ಜಿ ಸಲ್ಲಿಸಿ

ಹೆಣ್ಣುಮಕ್ಕಳಲ್ಲಿ ಉದ್ಯಮಶೀಲತೆ ಹೆಚ್ಚಿಸಲು, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ 'ಉದ್ಯೋಗಿನಿ ಯೋಜನೆ' (ಉದ್ಯೋಗಿನಿ ಸ್ಕೀಮ್)…

3 years ago

KSRTC: FDA, SDA, ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘ ನಿಯಮಿತವು, ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ…

3 years ago